Acharya Tulsi National College of Commerce ಜೀವನ ನಡೆಸಲು ಆಧ್ಯಾತ್ಮ ಶಿಕ್ಷಣ ಅತ್ಯಂತ ಅಗತ್ಯ ಎಂದು ಬ್ರಹ್ಮಕುಮಾರೀಸ್ ನವುಲೆ ಕೇಂದ್ರದ ಬಿ.ಕೆ.ಸ್ವಾತಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಯೋಗ ಮುಖೇನ ಒತ್ತಡ ನಿರ್ವಹಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಕ್ಷಾಬಂಧನ ಕಟ್ಟಿ ಸಿಹಿ ನೀಡಿ ಮಾತನಾಡಿ, ಮನೋ ಶಾರೀರಿಕ ಕಾಯಿಲೆ ಹಾಗೂ ಮಾನಸಿಕ ಸ್ಥಿತಿ ಸರಿಯಾಗಿ ಇಟ್ಟುಕೊಳ್ಳಲು ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಸಕಾರಾತ್ಮಕ ಚಿಂತನೆಗಳು ಅತಿ ಮುಖ್ಯ ಎಂದು ತಿಳಿಸಿದರು.
ಅನಾವಶ್ಯಕ ಮೊಬೈಲ್ ಉಪಯೋಗವೂ ಸಹ ಒಂದು ಮಾದಕ. ಬೇಡವಾದ ದುರ್ವಿಚಾರ, ದುರ್ನಡತೆ ದೇಹದ ಮೇಲೆ ಅತಿಯಾದ ಒತ್ತಡ ನೀಡುತ್ತವೆ. ದಿನದ 24 ಗಂಟೆಗಳಲ್ಲಿ ನಮಗಾಗಿ ಒಂದು ಗಂಟೆ ಮೀಸಲಿಟ್ಟು ಧ್ಯಾನ, ಪ್ರಾಣಾಯಾಮ, ಯೋಗದಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು.
ನಮ್ಮ ಮನಸ್ಸನ್ನು, ನಮ್ಮ ದೇಹವನ್ನು, ನಮ್ಮ ಆಂತರಿಕ ಶಕ್ತಿಯನ್ನು ನಾವು ನಂಬಬೇಕು. ಅನಾವಶ್ಯಕವಾಗಿ ಇನ್ನೊಬ್ಬರ ವಿಷಯಗಳಲ್ಲಿ ಮಾತನಾಡುವುದು ಹಾಗೂ ನಿಂದಿಸುವುದು. ಬೇಡವಾದ ವಿಷಯಗಳನ್ನು ಬೆಳಗ್ಗೆ ತುಂಬುವುದರಿಂದ ಅನಾವಶ್ಯಕವಾಗಿ ಒತ್ತಡ ಹೆಚ್ಚುತ್ತದೆ. ಒತ್ತಡದಿಂದ ನಾವು ದೂರವಿದ್ದರೆ ಇಡೀ ಕುಟುಂಬ ವಾತಾವರಣ ಹಾಗೂ ನಾವು ಮಾಡುವ ಕಾರ್ಯಕ್ಷೇತ್ರ ತುಂಬಾ ಚೆನ್ನಾಗಿ ಇರುವುದರ ಜೊತೆಗೆ ನಾವು ಉತ್ತಮ ಜೀವನವನ್ನು ದೀರ್ಘಕಾಲ ನಡೆಸುತ್ತೇವೆ ಎಂದರು.
ಅತಿಯಾದ ಒತ್ತಡದಿಂದ ಚಿಕ್ಕ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ. ಇದೆಲ್ಲ ಕಾರಣಗಳಿಂದ ನಾವು ಹೊರಬರಲು ಇಂತಹ ಆಧ್ಯಾತ್ಮಿಕ ಚಿಂತನೆ ಬಹಳ ಮುಖ್ಯ ಎಂದು ತಿಳಿಸಿದರು.
ಪ್ರೊ. ಮಮತಾ ಪಿ.ಆರ್. ಮಾತನಾಡಿ, ವಿದ್ಯಾರ್ಥಿಗಳು ಸಹ ಒತ್ತಡದಲ್ಲಿ ಕಾಲ ಕಳೆಯುತ್ತಿರುತ್ತಾರೆ. ನಮ್ಮ ಜೀವನಶೈಲಿಯನ್ನು ರೂಪಿಸುವ, ನಮ್ಮ ಕೌಶಲ್ಯಗಳನ್ನು ವೃದ್ಧಿಸುವ ಆಧ್ಯಾತ್ಮಿಕ ಧ್ಯಾನ ತರಬೇತಿಗಳು ಇಂದು ಪ್ರಸ್ತುತ. ಆದ್ದರಿಂದ ಇಂತಹ ತರಬೇತಿಗಳ ಶಿಬಿರಗಳನ್ನು ಪಾಲ್ಗೊಳ್ಳುವುದರ ಜೊತೆಗೆ ನಾವು ಒಳ್ಳೆಯ ಜೀವನ ಕಲೆಯನ್ನು ರೂಪಿಸಿಕೊಳ್ಳೋಣ ಎಂದು ತಿಳಿಸಿದರು.
Acharya Tulsi National College of Commerce ನಿವೃತ್ತ ದೈಹಿಕ ಶಿಕ್ಷಕ ನಿರ್ದೇಶಕ ಪ್ರೊ. ಕೆ.ಎಂ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆಧ್ಯಾತ್ಮ ಯೋಗ ಶಿಕ್ಷಣ ಅಗತ್ಯ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ ಎಂದರು.
ಪ್ರೊ. ಸೌಪರ್ಣಿಕಾ ಉಮೇಶ್, ಪ್ರೊ. ಪ್ರವೀಣ್ ಬಿ ಎನ್, ಪ್ರೊ. ಗಾಯತ್ರಿ ಟಿ, ಶೃತಿ ಕೆ, ಬ್ರಹ್ಮಕುಮಾರಿ ಸಂಸ್ಥೆಯ ಕಾವ್ಯಶ್ರೀ ಕೆ ವಿ, ನೀಲಮ್ಮ, ನಾಗಶ್ರೀ, ಪ್ರೊ. ಭಾರತಿ ಉಪಸ್ಥಿತರಿದ್ದರು.
