Shri Raghavendra Swami ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಪ್ರಯುಕ್ತ ಒಂದು ಮಠಕ್ಕೆ ಹೋಗಿದ್ದೆ ಅಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಕುರಿತಾದ “ಗುರು ಕಾರುಣ್ಯ” ಎಂಬ ಪುಸ್ತಕ ಇಟ್ಟಿದ್ದರು. ಅದನ್ನು ಕೊಳ್ಳಲು ಭಕ್ತರು ನೂಕು ನುಗ್ಗಲು. ನಾನು ಅಲ್ಲಿ ಹೋಗಿ ನೋಡಿದಾಗ ಆ ಕೃತಿಯನ್ನು ಬರೆದವರು ನನ್ನ ಗುರುಗಳು ಮತ್ತು ಲೇಖಕರು ಆದ ಎಂ.ಎನ್.ಸುಂದರ ರಾಜ ಅವರು.
ಆ ಪುಸ್ತಕವನ್ನು ನಾನು ಕೊಂಡೆ. ಪುಟಗಳನ್ನು ಒಳ ತೆರೆದಂತೆ ರಾಯರ ಕುರಿತು ಅತ್ಯಂತ ಮನೋಜ್ಞವಾಗಿ ಬರೆದ ಕೃತಿಯಾಗಿತ್ತು. ಪ್ರಾರಂಭದಲ್ಲೇ ಮಂತ್ರಾಲಯ ಶ್ರೀಗಳ ಅನುಗ್ರಹ ಸಂದೇಶವು ಇತ್ತು. ನನಗೆ ತುಂಬಾ ಸಂತೋಷವಾಗಿ ಸುಂದರ ರಾಜ್ ಅವರಿಗೆ ಫೋನ್ ಮಾಡಿದೆ. ಆಗ ತಿಳಿದ ವಿಷಯವೇನೆಂದರೆ ಶ್ರೀಯುತರು 1000 ಪ್ರತಿಗಳನ್ನು ಮುದ್ರಿಸಿ ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ಆಯನೂರು, ಬಾಳಗಾರು ಮುಂತಾದ ಕಡೆ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಎಂಟು ಮಠಗಳಿಗೆ ತಲಾ 100ರಂತೆ ಕಳಿಸಲಾಗಿದೆ ಎಂದು ತಿಳಿಯಿತು. ಇದುವರೆಗೂ ಅಲ್ಲಿ ಕಳಿಸಿದ ಪುಸ್ತಕಗಳು ಸುಮಾರು 850 ಕೇವಲ ಒಂದೇ ದಿನದಲ್ಲಿ ಮಾರಾಟವಾಗಿ, ಮತ್ತೆ ಬೇಡಿಕೆ ಬಂದಿರುವುದಾಗಿ ಗೊತ್ತಾಯಿತು. ಆ ಮಾರಾಟದಿಂದ ಬಂದ ಹಣವನ್ನು ಅದೇ ಮಠಕ್ಕೆ ಕಾಣಿಕೆಯಾಗಿ ನೀಡಿರುವುದಾಗಿ ತಿಳಿಸಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಒಂದು ಕೃತಿ ಕೇವಲ ಒಂದೇ ದಿನದಲ್ಲಿ 850 ಪ್ರತಿಗಳು ಮಾರಾಟವಾಗಿದೆ ಎಂದರೆ ನಂಬಲು ಸಾಧ್ಯವಾಗಲಿಲ್ಲ ಆದರೆ ಅದು ಸತ್ಯದ ಸಂಗತಿಯಾಗಿತ್ತು. ” ಗುರು ಕಾರುಣ್ಯ ” ಎಂಬ ಹೆಸರಿನ ಈ ಕೃತಿ ರಾಘವೇಂದ್ರ ಸ್ವಾಮಿಗಳ ಸೂಕ್ಷ್ಮವಾದ ಜೀವನ ಚರಿತ್ರೆ. ಅವರ ಜೀವನದಲ್ಲಿ ನಡೆದ ಅಪರೂಪದ ಘಟನೆಗಳು, ಮಂತ್ರಾಕ್ಷತೆಯ ಮಹತ್ವ, ರಾಯರು ಬರೆದಿರುವ ಸುಮಾರು 24 ಕೃತಿಗಳ ಸೂಕ್ಷ್ಮ ಪರಿಚಯ ಇವೆಲ್ಲವುಗಳನ್ನು ಒಳಗೊಂಡಿದೆ ಅಲ್ಲದೆ ರಾಘವೇಂದ್ರ ಸ್ವಾಮಿಗಳನ್ನು ಸಮೀಪದಿಂದ ನೋಡಿದ ಮತ್ತು ಅವರ ಜೊತೆಯಲ್ಲಿ ಇದ್ದ ಲಕ್ಷ್ಮಿನಾರಾಯಣಚಾರ್ಯ ಅವರು ಬರೆದಿರುವ “ಶ್ರೀ ರಾಘವೇಂದ್ರ ವಿಜಯ”ದ ಕೆಲವು ಭಾಗಗಳನ್ನು ಸಹ ಈ ಕೃತಿಯಲ್ಲಿ ಮುದ್ರಿಸಲಾಗಿದೆ.
Shri Raghavendra Swami ನನಗೆ ತುಂಬಾ ಸಂತೋಷದ ವಿಚಾರವಾದದ್ದು 50 ರೂಪಾಯಿ ಬೆಲೆಯ ಈ ಕೃತಿ ಬಹುಬೇಗ ಮಾರಾಟವಾಗಿ ದಾಖಲೆ ನಿರ್ಮಿಸಿದ್ದು. ಅಂದರೆ ರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೃತಿಯನ್ನು ಕೊಂಡು ಓದಿ ಪುನೀತರಾಗುವುದು. ಈಗಲೂ ಈ ಕೃತಿ ಪಡೆಯಲು ಹೆಚ್ಚು ಜನ ಉತ್ಸುಕರಾಗಿ ಮತ್ತಷ್ಟು ಕೃತಿಗಳಿಗೆ ಬೇಡಿಕೆ ಇಟ್ಟಿರುವುದು ತಿಳಿದುಬಂತು. ಅಂದರೆ ಒಂದು ಕೃತಿ ಚೆನ್ನಾಗಿದ್ದರೆ, ಮೌಲ್ಯಯುತವಾಗಿದ್ದರೆ ಅದನ್ನು ಓದುವವರ ಸಂಖ್ಯೆ ಇರುವುದು ಸಮಾಧಾನಕರ ವಿಷಯ.
ಈ ಕೃತಿ ಎಲ್ಲರೂ ಓದುವಂತಹದ್ದು ಮತ್ತು ಸುಲಭವಾಗಿ ತಿಳಿಯುವಂತದ್ದು. ಇಂತಹ ಒಂದು ಸುಂದರ ಕೃತಿಯನ್ನು ರಚಿಸಿದ ಶ್ರೀಯುತರಿಗೆ ನಾನು ಅಭಿವಂದಿಸುತ್ತೇನೆ. ಉಡುಪಿ ರಚನಾ ಮಾಡಿ ಮುದ್ರಿಸಿ, ಅದನ್ನು ಸುಲಭ ಬೆಲೆಗೆ ಎಲ್ಲರಿಗೂ ದೊರೆಯುವಂತೆ ಮಾಡಿ ಅದರಿಂದ ಬಂದ ಹಣ ಆಯಾ ಮಠಗಳಿಗೆ ಕಾಣಿಕೆಯಾಗಿ ನೀಡಿರುವುದು ಒಂದು ಅಪರೂಪದ ಸಂಗತಿಯಾಗಿದೆ. ಇಂಥ ಕೃತಿಗಳು ಹೆಚ್ಚು ಹೆಚ್ಚು ಜನರಿಗೆ ತಲುಪುವಂತಾಗಲಿ ಎಂಬ ಹಾರೈಕೆ ಮಾತ್ರ ನನ್ನದು. ಎಂದು
ಮಾಜಿ ಇನ್ನರ್ ವೀಲ್ ಅಧ್ಯಕ್ಷರಾದ
ಬಿಂದು ವಿಜಯ ಕುಮಾರ್ ತಿಳಿಸಿದ್ದಾರೆ.
