Rotary Shimoga ಸಸಿಗಳನ್ನು ನೆಡುವುದರ ಜತೆಯಲ್ಲಿ ಅವುಗಳ ಪಾಲನೆ, ಪೋಷಣೆಯು ಮುಖ್ಯ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.
ಕೊಮ್ಮನಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ನಾಶದಿಂದ ಮನುಕುಲವೇ ದುಸ್ಥಿತಿಯಲ್ಲಿದೆ. ಆಧುನಿಕರಣದಿಂದ ಗಿಡಮರಗಳ ಕಡಿತಲೆ ಜಾಸ್ತಿಯಾಗಿದೆ. ಇದರ ಜತೆಗೆ ಪರಿಸರದಿಂದ ನಮಗೆ ಸಿಗುವ ಶುದ್ಧವಾದ ಆಮ್ಲಜನಕದ ಕೊರತೆ ಉಂಟಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ವಿಶೇಷ ದಿನಗಳಂದು ಒಂದೊAದು ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಬೇಕು. ಅದರ ಜೊತೆಗೆ ಸಸಿಗಳನ್ನು ಪೋಷಣೆ ಮಾಡಬೇಕು. ಇಂದು ನಾವು ನೆಟ್ಟ ಸಸಿ ಮುಂದಿನ ತಲೆಮಾರಿಗಾದರೂ ನೆರಳು ಹಾಗೂ ಫಲ ನೀಡುತ್ತದೆ. ಹಾಗೆ ವಾತಾವರಣವೂ ಕೂಡ ಶುದ್ಧವಾಗಿರುತ್ತದೆ ಎಂದು ಹೇಳಿದರು.
Rotary Shimoga ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ನೆಪ್ಚೂನ್ ಕಿಶೋರ್ ಮಾತನಾಡಿ, ನಾವು ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಬಡಾವಣೆಗಳಲ್ಲಿ ಹಾಗೂ ನಮ್ಮ ಇಂಟರಾಕ್ಟ್ ಕ್ಲಬ್ಬಿನ ಶಾಲೆಗಳ ಆವರಣಗಳಲ್ಲಿ ಮುಖ್ಯರಸ್ತೆಯ ಎಡ ಬಲಗಳಲ್ಲಿ ಒಳ್ಳೆಯ ಸಸಿಗಳನ್ನು ನೀಡುತ್ತಾ ಬಂದಿದ್ದೇವೆ. ಇದು ನಮ್ಮ ಜಿಲ್ಲಾ ಯೋಜನೆಯ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಬಿ.ಆರ್.ಧನಂಜಯ ರಾಂಪುರ ಮಾತನಾಡಿ, ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಕ್ರೀಡೆ ಸಾಂಸ್ಕೃತಿಕ ಹಾಗೂ ಪರಿಸರ ಪ್ರೇಮವನ್ನು ಬೆಳೆಸಬೇಕು. ಅದರ ಮಹತ್ವವನ್ನು ತಿಳಿಸಿಕೊಡಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ಚಂದ್ರಪ್ಪ ಮಾತನಾಡಿ, ರೋಟರಿ ಸಂಸ್ಥೆಯ ಸೇವೆ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮೇಲೆ ಇಟ್ಟ ಅಭಿಮಾನಕ್ಕೆ ನಾವು ಸದಾ ಚಿರಋಣಿ ಎಂದರು. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಗೈಡ್ಸ್ ತರಬೇತಿ ಆಯುಕ್ತರಾದ ಗೀತಾ ಚಿಕ್ಕಮಠ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
