Karnataka State Human Rights Commission ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಒಂದು ಸಂಘಟಿತ ಅಪರಾಧವಾಗಿದ್ದು, ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಗಳ ಘನತೆ, ಸ್ವಾತಂತ್ರ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದೊಂದಿಗೆ “ಮಹಿಳೆಯರು ಮತ್ತು ಮಕ್ಕಳ ಮೇಲಿನ ಅನೈತಿಕ ಕಳ್ಳಸಾಗಣೆ” ಕುರಿತು ಸಭೆಯನ್ನು ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಪ್ರಿಯಾಂಕ್ ಕಾನೂಂಗೊ, ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಮಾನವ ಕಳ್ಳಸಾಗಣೆಯಿಂದ ನಡೆಸಲ್ಪಡುವ ಈ ಆಧುನಿಕ ರೂಪದ ಗುಲಾಮಗಿರಿಯನ್ನು ನಿರ್ಮೂಲನೆ ಮಾಡಲು ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸುವುದು ಸಭೆಯ ಉದ್ದೇಶವಾಗಿತ್ತು. ಮಾನವ ಕಳ್ಳಸಾಗಣೆ ಒಂದು ಘೋರ ಅಪರಾಧವಾಗಿದ್ದು, ಇದು ಲಾಭಕ್ಕಾಗಿ ಅತ್ಯಂತ ದುರ್ಬಲರನ್ನು ಬಳಸಿಕೊಳ್ಳುವ ಭಯಾನಕ ಅಪರಾಧವಾಗಿದೆ. ಮಹಿಳೆಯರು ಮತ್ತು ಮಕ್ಕಳ ಸಾಗಣೆಯನ್ನು ತಡೆಗಟ್ಟುವಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ಬಲಪಡಿಸುವ ಮತ್ತು ಬಲಿಪಶುಗಳು ಹಾಗೂ ಬದುಕುಳಿದವರಿಗೆ ಬೆಂಬಲ ಮತ್ತು ಪರಿಹಾರಗಳನ್ನು ನೀಡುವ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆಗಳು ಮತ್ತು ಇತರ ಪಾಲುದಾರರು ಅಳವಡಿಸಿಕೊಂಡ ವಿವಿಧ ಕ್ರಮಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
Karnataka State Human Rights Commission ಸಭೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್. ಕೆ. ವಂಟಿಗೋಡಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣ ಗೌಡ ಮತ್ತು ಸದಸ್ಯರುಗಳು, ಅಪರಾಧ ಮತ್ತು ತಾಂತ್ರಿಕ ಸೇವೆಗಳು ಮತ್ತು ರಾಜ್ಯ ನೋಡಲ್ ಅಧಿಕಾರಿ, ಮಾನವ ಕಳ್ಳಸಾಗಾಣಿಕೆ ವಿರೋಧಿ ಘಟಕದ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕರಾದ, ಪಿ. ಹರಿಶೇಖರನ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕರಾದ ದೇವಜ್ಯೋತಿ ರೇ ಹಾಗೂ ಸಂಬಂಧಪಟ್ಟ ಇಲಾಖೆಗಳ ಮತ್ತು ಆಯೋಗಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
