JCI Shivamogga ಶಿವಮೊಗ್ಗ ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜುನ್ ಜುನ್ವಾಲ ರವರು ವಲಯ ಜು. 23ಕ್ಕೆ ಜಿಲ್ಲೆಗೆ ಅಧಿಕೃತ ಭೇಟಿ ನೀಡಲಿದ್ದು, ಅಂದು ಬೆಳಗ್ಗೆ 11ಕ್ಕೆ ವಿಮಾನ ನಿಲ್ದಾಣದಿಂದ ಸರ್ಕಾರಿ ನೌಕರರ ಭವನದವರೆಗೆ ಕಾರ್ ಮತ್ತು ಬೈಕ್ ರಾಲಿ ಮೂಲಕ ಸ್ವಾಗತಿಸಲಾಗುವುದು ಎಂದು ಜೆಸಿಐ ಶಿವಮೊಗ್ಗ ಅಧ್ಯಕ್ಷ ಜಿ. ಗಣೇಶ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಎಲ್ಲಾ ವಿಭಾಗಗಳ ಸಹಯೋಗದೊಂದಿಗೆ ಕಾಲೇಜಿನ ಮುಂಭಾಗದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಶಿವಮೊಗ್ಗೆಯ ಹೊರವಲಯದಲ್ಲಿ ಪುರ ಪ್ರವೇಶಿಸುವ ಸ್ಥಳದಲ್ಲಿ ಜೆಸಿ ಶಿವಮೊಗ್ಗ ರಾಯಲ್ಸ್ ಮತ್ತು ಜೇಸಿ ಶಿವಮೊಗ್ಗ ಭಾವನಾ ವತಿಯಿಂದ ಸ್ವಾಗತ -ಫಲಕ ಅನಾವರಣ, ಜೇಸಿಐ ಸಮೃದ್ಧಿ ವತಿಯಿಂದ ಪೋಲೀಸ್ ಬ್ಯಾರಿಕೇಡ್ ಕೊಡುಗೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದ ಅವರು, ಜೆಸಿಐ ವತಿಯಿಂದ ನಾಯಕತ್ವ ತರಬೇತಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು.
ಜೆಸಿ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಈಗಾಗಲೇ ರಕ್ತದಾನ ಶಿಬಿರಗಳು, ಪರಿಣಾಮಕಾರಿ ಭಾಷಣ ಕಲೆ, ನೇತ್ರ ತಪಾಸಣಾ ಶಿಬಿರಗಳು, ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ, ಅರ್ಹರಿಗೆ ಆಹಾರ ಸಾಮಗ್ರಿಗಳ ಕೊಡುಗೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸಲಾಗಿದೆ ಎಂದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ 22 ಜೇಸಿ ಘಟಕಗಳಿದ್ದು, ಎಲ್ಲವೂ ಸಹ ಸಕ್ರಿಯವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
JCI Shivamogga ರಾಷ್ಟ್ರೀಯ ಅಧ್ಯಕ್ಷರ ಭೇಟಿಯ ಹಿನ್ನೆಲೆಯಲ್ಲಿ 12 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಘಟಕಗಳ ಅಧ್ಯಕ್ಷರುಗಳೊಂದಿಗೆ ಸಭೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜುನ್ ಜುನ್ವಾಲ ಪಾಲ್ಗೊಳ್ಳಲಿದ್ದು, ವಲಯ 24ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸಿ.ಎ. ಗೌರೀಶ್ ಭಾರ್ಗವ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ವಲಯ 24ರ ಎಲ್ಲಾ ಉಪಾಧ್ಯಕ್ಷರುಗಳು, ರಾಷ್ಟ್ರೀಯ ಅಧ್ಯಕ್ಷರ ಟೂರ್ ಡೈರೆಕ್ಟರ್ ಸುದರ್ಶನ್ ತಾಯಿ ಮನೆ, ವಲಯ ಉಪಾಧ್ಯಕ್ಷ ಶಿವಮೊಗ್ಗ ಜಿಲ್ಲೆಯ ಎಲ್ಲಾ ಘಟಕದ ಅಧ್ಯಕ್ಷರುಗಳು ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಎಸ್. ಎಂ. ಸ್ವಾತಿ, ಶಿಲ್ಪಾ ಸತೀಶ್, ಜಿ. ವಿಜಯಕುಮಾರ್, ಗಣೇಶ್ ಪೈ, ನವೀನ್ ತಲಾರಿ, ನಿವೇದಿತಾ ವಿಕಾಸ್, ಸ್ಮಿತಾ ಮೋಹನ್, ರೇಖಾ ರಂಗನಾಥ್, ರುದ್ರೇಶ್ ಕೋರಿ, ಎನ್. ಶಿಲ್ಪಾ, ಮಧುಸೂಧನ ನಾವಡ ಮೊದಲಾದವರು ಉಪಸ್ಥಿತರಿದ್ದರು.
