ಕೆ ಲೈವ್ ಸಂಪಾದಕೀಯ ಲೇ: ಡಾ. ಸುಧೀಂದ್ರ
Klive Special Article ರಾಜಕೀಯ ಈಗ ಯಾವಕ್ಷೇತ್ರವನ್ನು ಬಿಟ್ಟಿದೆ ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುವುದು ಕಷ್ಟಸಾಧ್ಯ.
ಈಗಂತೂ ಜನಕಲ್ಯಾಣ ಯೋಜನೆಗಳು ಸಾಕಾರವಾದಾಗ. ರಾಜಕೀಯ ಪಕ್ಷಗಳು
ನಡೆಸಿರುವ ” ಕ್ರೆಡಿಟ್ ವಾರ್” , ದೇಶದ ಎಕ್ಸ್ಟರ್ನಲ್ ವಾರ್ ಗಿಂದ ಗರಂ ಗರಂ ಆಗಿ ಬೀಸುತ್ತಿದೆ ಎನ್ನಬಹುದು.
ಬಸ್ ನಿಲ್ದಾಣ, ಸಮುದಾಯ ಭವನ, ನೀರಾವರಿ ಕಾಲುವೆ, ಅಣೆಕಟ್ಟೆ, ಬಸ್ ಸಂಪರ್ಕ, ರಸ್ತೆ ನಿರ್ಮಾಣ ಕೊನೆಗೆ ಸೇತುವೆ ನಿರ್ಮಾಣ …ಹೀಗೆ ಈ
ಕ್ರೆಡಿಟ್ ಬಗ್ಗೆ ನಮ್ಮ ಸರ್ಕಾರ ಮಾಡಿದ್ದು , ನಾವೇ ಶುರು ಮಾಡಿದ್ದು ಎನ್ನುವ ಕೂಗಾಟ , ಹಾರಾಟ ಮಾಧ್ಯಮಗಳಲ್ಲಿ ಈಗ ಸಾಮಾನ್ಯವಾಗಿಬಿಟ್ಟಿದೆ.
ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ಉದ್ಘಾಟನೆಗೂ
ಈ ಕ್ರೆಡಿಟ್ ಭೂತ ವಕ್ಕರಿಸಿತು .
ಹಾಲಿ ಸಂಸದರು ಪಟ್ಡು ಬಿಡದೇ ಸೇತುವೆ ನಿರ್ಮಾಣಕ್ಕೆ ಕೇಂದ್ರದ ಎಲ್ಲ ಇಲಾಖೆ ಅಧಿಕಾರಿಗಳ ಬೆನ್ನಿಗೆ ಬಿದ್ದು ಅದಕ್ಕೊಂದು ರೂಪ ತಂದರು.ನಿಜ.
ಈ ಕಲ್ಪನೆ ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ ಅವರಿಗೆ ರಕ್ತದೊಳಗೇ ಇತ್ತು.
ಈರ್ವರೂ ಬೇರೆ ಬೇರೆ ಪಕ್ಷಗಳಾದರೂ ಜನೋಪಯೋಗಿ ಯೋಜನೆಗೆ ತಮ್ಮ ಕೈಲಾದಷ್ಟು ಶ್ರಮಿಸಿದ್ದಾರೆ. ಈ ವಾಸ್ತವ ಎಲ್ಲರಿಗೂ ಗೊತ್ತಿದೆ.
ಉದ್ಘಾಟನಾ ಸಮಾರಂಭಕ್ಕೆ ನಯವಾಗಿಯೇ ರಾಜ್ಯದ ಮುಖ್ಯಮಂತ್ರಿಗಳು
ಶಿಷ್ಟಾಚಾರ ಪಾಲಿಸಿಲ್ಲ.
ಬರಲು ಆಗಲಿಲ್ಲ ಎಂದು ತಿರಸ್ಕರಿಸದ್ದಾರೆ.
ಈ ಕುರಿತು ಕೇಂದ್ರಕ್ಕೆ ಪತ್ರವನ್ನೂ ಕಳಿಸಿದ್ದಾರೆ.
Klive Special Article ಆದರೆ ಸಂಸದರು ಎಲ್ಲ ಹಂತಗಳಲ್ಲೂ ಶಿಷ್ಡಾಚಾರಭಂಗವಾಗಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಪಕ್ಷದ ರಾಜಕೀಯ ಮುಖಂಡರು ಒಳಗೊಳಗೆ ಮುಖ್ಯಮಂತ್ರಿಗಳ ಇಮೇಜಿಗೆ ಕುಂದುತರುವಂತೆ ಮಸಲತ್ತು ಮಾಡಿದ್ದಾರೆ ಎಂಬರ್ಥದಲ್ಲಿ ಸಂಸದರು ಮನನೊಂದು ಹೇಳಿಕೆ ನೀಡಿದ್ದಾರೆ.
ಹೊರಗೆ ವೈಯಕ್ತಿಕವಾಗಿ
ಇವರೆಲ್ಲರೂ ಸೌಜನ್ಯವಾಗಿ ಪರಸ್ಪರ ಸಂಭಾಷಿಸುತ್ತಾರೆ. ಆದರೆ ಯೋಜನೆಗಳ ಕ್ರೆಡಿಟ್ ಬಂದಾಗ ಅವರ ಮುಖಗಳು ವಿರುದ್ಧದಿಕ್ಕಿಗೆ ನಿಲ್ಲುತ್ತವೆ.
ಯಾಕೀ ರಾಜಕೀಯ ದೊಂಬರಾಟ? ಜನಮೆಚ್ಚಿಸಲು ಈ ಆಟಗಳು ಯಾರದ್ದೇ ಆಗಲಿ ನಡೆಯುವುದಿಲ್ಲ.
ಕಾಗೋಡು ತಿಮ್ಮಪ್ಪನವರು ಸಮಾರಂಭದಲ್ಲಿ ಹಾಜರಿದ್ದು ಜನೋಪಯೋಗಿ ಸನ್ನಿವೇಶದಲ್ಲಿ ಸಂತಸಪಟ್ಟಿದ್ದಾರೆ.
” ಗಡ್ಕರಿ ಅವರ ಕಾಲಿಗೆ ನಮಸ್ಕರಿಸುತ್ತೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಈ ನುಡಿಗಳಿಂದಾಗಿ ಹಿರಿಯರಾದ ಕಾಗೋಡು ಸಣ್ಣವರಾಗದೇ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಗಡ್ಕರಿ ಅವರಿಗೆ ಕನ್ನಡ ಅರ್ಥವಾಗುವಂತಿದ್ದರೆ
ಅದಕ್ಕೆ ಮುಜುಗರ ಪಟ್ಟುಕೊಳ್ಳುತ್ತದ್ದರೇನೊ!?.
ಏನೇ ಆಗಲಿ ಮೂವತ್ತು ವರ್ಷಗಳಲ್ಲಿ ಗ್ರಾಮೀಣ ಜನತೆ ಪಟ್ಟ ಬವಣೆ , ದುಃಖ ,ಪರಿಪಾಟಲು ಎಷ್ಟು ಅಂತ ಹೇಳಲು ಯಾರಿಗೂ ಆಗುವುದಿಲ್ಲ.
ಅದರ ಸಂಕೇತವಾಗಿ ಸಾಗರ ಪ್ರದೇಶದ ಹಿರಿಯ ಜನನಾಯಕ ಕಾಗೋಡು ತಿಮ್ಮಪ್ಪನವರು ಒಂದು ಸಾಂಕೇತಿಕ ಧ್ವನಿಯಾಗಿ ನಮಗೆ ಕೇಳಿಸುತ್ತಾರೆ ಮತ್ತು ಕಾಣಿಸುತ್ತಾರೆ.
ನಿರ್ಭಿಡೆಯಾಗಿ ಅವರು ಕಾಂಗ್ರೆಸ್ಸಿಗರೆ, ಆದರೆ ಪಕ್ಷದ ಎಲ್ಲೆಗಳನ್ನೂ ,ರಾಜಕೀಯದ ಮಡಿವಂತಿಕೆಗಳನ್ನೂ ದಾಟಿ ದೊಡ್ಡವರಾಗಿದ್ದಾರೆ.
ಸಮಾರಂಭ ಇಡೀ ಜನತೆಯದ್ದು. ಅವರ ಹಕ್ಕುಬಾಧ್ಯತೆಯಲ್ಲಿ ಆಡಳಿತಾರೂಢ ಸರ್ಕಾರವೂ ಸೇರಿರುತ್ತದೆ. ಹೀಗಾಗಿ ಸಮಾರಂಭದಲ್ಲಿ ಸರ್ಕಾರವೂ ಪಾಲ್ಗೊಂಡು , ಎಸಗಿರುವ ಶಿಷ್ಟಾಚಾರ ಲೋಪವನ್ನ ಬೊಟ್ಟುಮಾಡಿ ತೋರಿಸಬೇಕಿತ್ತು. ಜನಕ್ಕೆ ಅದು ಇಷ್ಟವಾಗುತ್ತಿತ್ತು.
ಅದೇ ಅಧಿಕಾರಷಾಹಿ
ಯಾವ ಪಕ್ಷವಿದ್ದರೂ ಅವರೇ ಇರುತ್ತಾರೆ.
ತಿದ್ದುವುದಕ್ಕೆ ಮುಖ್ಯಮಂತ್ರಿಗಳಿಗೆ
ತೆರೆದ ಅವಕಾಶವಿತ್ತು.
ಸದ್ಯ ರೈತರ ಭೂಮಿ ಸಮಸ್ಯೆಗೆ ಹೇಗೆ ಸುಲಲಿತ ಪೂರ್ಣವಿರಾಮ ಹಾಕಿದರೋ ಹಾಗೆ ಈ ಪ್ರದೇಶದ ಜನತೆ ಸಿದ್ಧರಾಮಯ್ಯನವರ
ನಡೆವಳಿಕೆಯನ್ನ ಶ್ಲಾಘಿಸುತ್ತಿತ್ತು.
ಇದೊಂದು ಅವಕಾಶದಿಂದ ಮಾನ್ಯ ಮುಖ್ಯಮಂತ್ರಿಗಳು ವಂಚಿತರಾದರು ಎನ್ನದೇ ವಿಧಿಯಿಲ್ಲ.
ಸಂವಿಧಾನದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದೊಂದಿಗೆ ತಾರ್ಕಿಕ ವ್ಯತ್ಯಾಸಗಳಿರಬಹುದು
ಆದರೆ ನೇರವಾಗಿ ,ಗೈರುಹಾಜರಿಗೆ ಕಾರಣ ಹೇಳುವುದು ,ಜನೋಪಯೋಗಿ ದೃಷ್ಟಿಯಿಂದ ಸಾಧುವೆ? ಎಂಬ ಪ್ರಶ್ನೆ ಸಾರ್ವಜನಿಕರನ್ನ ಕಾಡುತ್ತಿದೆ.
