Yakshagana ಯಕ್ಷಗಾನ ಅಂದಾಗ ಯಾರಿಗೆ ತಾನೇ ಒಂದು ಬಾರಿ ರೋಮಾಂಚನ ಆಗುವುದಿಲ್ಲ ಹೇಳಿ? ಅಂದಹಾಗೆ ಈಗ ರೋಮಾಂಚನಗೊಳ್ಳುವ ಸರದಿ ಶಿವಮೊಗ್ಗದ ಯಕ್ಷಪ್ರಿಯರದ್ದು. ಯಕ್ಷಗಾನ ತಾಳಮದ್ದಳೆ ಇದು ಯಕ್ಷಗಾನದ ವಿಶಿಷ್ಟ ಕಲಾ ಪ್ರಕಾರ. ಯಕ್ಷಗಾನ ತಾಳಮದ್ದಳೆ ಎಂಬ ಶ್ರವಣಮಾತ್ರ ಕಲೆಯಲ್ಲಿ ಪಾತ್ರಧಾರಿಗಳು ವೇಷ ಭೂಷಣವಿಲ್ಲದೆ ಕೇವಲ ಗದ್ಯ ಪದ್ಯ ಸಂಭಾಷಣೆ ಮತ್ತು ಸಂಗೀತದ ( ಭಾಗವತಿಕೆ ) ಮೂಲಕ ಪೌರಾಣಿಕ ಕಥೆಗಳ ಆಳವಾದ ಅಧ್ಯಯನ ಮತ್ತು ಶಾಸ್ತ್ರೋಕ್ತವಾದ ಚರ್ಚೆ ಮಾಡುವ ಮೂಲಕ ಶೋತ್ರಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಅಂದರೆ ಅದು ಅತಿಶಯೋಕ್ತಿ ಆಗಲಾರದು. ಧಾರ್ಮಿಕ ವಿಷಯಗಳ ಚರ್ಚೆ ಮತ್ತು ಅದರ ಸಾರಾಂಶವನ್ನು ಸ್ಪಷ್ಟವಾಗಿ ನಿರೂಪಿಸುವ ಮೂಲಕ ಕೇಳುಗರಿಗೆ ಪೌರಾಣಿಕ ರಹದೌತಣವನ್ನು ನೀಡುತ್ತಾರೆ. ಈ ಯಕ್ಷಗಾನ ತಾಳಮದ್ದಳೆಯ ಆಳ ಅಗಲ ಮತ್ತು ಅದರ ವಿಸ್ತರತೆಯನ್ನು ಅರಿತವರಿಗೆ ಮಾತ್ರ ಗೊತ್ತಿರುತ್ತದೆ. ಇಲ್ಲಿ ಕಥಾನಾಯಕ…ಧರ್ಮಪಕ್ಷ ಅಥವಾ ಸತ್ಯಪಕ್ಷದ ಪ್ರತಿನಿಧಿಯಾಗಿರುತ್ತಾನೆ ಮತ್ತು ಕಥೆಯ ನೈತಿಕ ಬಲವನ್ನು ಪ್ರತಿಪಾದಿಸುವ ಮೂಲಕ ವಿಷಯವನ್ನು ಆಳವಾಗಿ ಮಂಡಿಸುತ್ತಾ ತನ್ನ ಉದ್ದೇಶ ಧರ್ಮ ನೀತಿ ಹಾಗೂ ತಾತ್ವಿಕ ಭೂಮಿಕೆಯನ್ನು ಬಿಂಬಿಸುತ್ತಾನೆ. ಇಲ್ಲಿ ಭಾಗವತರು ಅಂದರೆ ಸಂಗೀತಗಾರರು ಮತ್ತು ತಾಳ. ಮದ್ದಳೆ ಸಹಿತ ಕಥಾ ಪ್ರಸ್ತುತಿಗೆ ಮನೋರಂಜನೆ ಮತ್ತು ಭಾವನಾತ್ಮಕ ಸ್ಪಂದನೆ ತರುವುದರ ಮೂಲಕ ಸಂವಾದಕ್ಕೆ ಶ್ರವ್ಯ ಸಮತೋಲನ ನೀಡುತ್ತಾರೆ .
ಇಂತಹ ಅತ್ಯದ್ಭುತ ಕಲೆಯ ಅನಾವರಣ ದಿನಾಂಕ 29ನೇ ಜೂನ್ 2025 ನೇ ಭಾನುವಾರ ಸಂಜೆ 5:30ಕ್ಕೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಅನಾವರಣಗೊಳ್ಳಲಿದೆ.
Yakshagana ಯಕ್ಷಗಾನರಂಗದ ಸ್ನೇಹಜೀವಿ ಹಾಗೂ ಖ್ಯಾತ ಮದ್ದಲೆ ವಾದಕರಾದ ಎ ಪಿ ಪಾಟಕ್ ನೇತ್ರತ್ವದ ” ಪಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ. ) ಇವರ ಸಂಯೋಜನೆಯಲ್ಲಿ ” ಕೃಷ್ಣ ಸಂಧಾನ ” ಎನ್ನುವ ಪೌರಾಣಿಕ ಆಖ್ಯಾನವು ತಾಳ ಮದ್ದಳೆಯ ರೂಪದಲ್ಲಿ ನೆರವೇರಲಿದೆ.
ಹಿಮ್ಮೇಳ ಮತ್ತು ಅರ್ಥದಾರಿಕೆಯಲ್ಲಿ ತೆಂಕು ಬಡಗಿನ ಸವ್ಯಸಾಚಿ ಕಲಾವಿದರಿದ್ದಾರೆ. ಭಾಗವತರಾಗಿ ಬಡಗಿನ ಶ್ರೇಷ್ಠ ಭಾಗವತರಾದ ಸರ್ವೇಶ್ವರ ಹೆಗಡೆ ಮೂರುರು, ಮದ್ದಳೆಯಲ್ಲಿ ಯಕ್ಷ ಗುರು ಶ್ರೀ ಏ. ಪಿ. ಪಾಟಕ್ ಮತ್ತು ಚಂಡೆ ವಾದನದಲ್ಲಿ ಶ್ರೀ ಭಾರ್ಗವ ಹೆಗ್ಗೋಡು ಭಾಗವಹಿಸಲಿದ್ದಾರೆ.
ಅರ್ಥಧಾರಿಗಳಾಗಿ ಯಕ್ಷಗಾನ ತಾಳಮದ್ದಳೆಯ ದಿಗ್ಗಜರಾದ ಶ್ರೀ ಸುಣ್ಣoಬಳ ವಿಶ್ವೇಶ್ವರ ಭಟ್, ವಿದ್ವಾನ್ ಶ್ರೀ ವಾಸುದೇವ ರಂಗ ಭಟ್, ವಿದ್ವಾನ್ ಸಂಕದಗುಂಡಿ ಗಣಪತಿ ಭಟ್, ಹಾಗೂ ಶ್ರೀ ಸುಹಾಸ್ ಮರಾಠೆ ಪಾತ್ರನಿರ್ವಹಿಸಲಿಕ್ಕಿದ್ದಾರೆ.
ಈ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಅಂದರೆ ಸಂಜೆ ಘಂಟೆ ಐದು – ಮೂವತ್ತಕ್ಕೆ ಪ್ರಾರಂಭವಾಗುವುದು ಹಾಗೂ ಉಚಿತ ಪ್ರವೇಶವಿರುತ್ತದೆ. ಯಕ್ಷ ಕಲಾಸಕ್ತರು ಈ ಕಾರ್ಯಕ್ರಮಕ್ಕೆ ಸಮಯಕ್ಕೆ ಮುಂಚಿತವಾಗಿ ಆಗಮಿಸಿ ತಮ್ಮ ಸೀಟುಗಳನ್ನು ಕಾಯ್ದಿರಿಸಿಕೊಂಡು ಕಾರ್ಯಕ್ರಮವನ್ನು ಸಂಪೂರ್ಣ ಆಸ್ವಾದಿಸಬೇಕೆಂದು ಶಿವಮೊಗ್ಗದ “ಯಕ್ಷ ಪರಂಪರಾ” ಸಂಘಟನೆಯ ಡಾllರತ್ನಾಕರ್ ಹಾಗೂ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಕೋರಿರುತ್ತಾರೆ.
