Saturday, December 6, 2025
Saturday, December 6, 2025

Klive Special Article ಯುಗಾದಿಯೆಂದರೆ ಎಷ್ಟೊಂದು ನೆನಪುಗಳು? ಲೇ: ಎಚ್.ಕೆ.ವಿವೇಕಾನಂದ

Date:

Klive Special Article ಯುಗಾದಿ…..

” ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡಲಿ ಬಡವನಯ್ಯ,
ಎನ್ನ ಕಾಲೇ ಕಂಬ,
ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ, ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ……..”

ಎಂಬ ಬಸವಣ್ಣನವರ ವಚನದ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತಾ…

“ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ……”

ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನದ ಸಾಲುಗಳನ್ನು ಗುನುಗುತ್ತಾ…….

ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ…..

ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸಸ್ಯ ಲೋಕ ಚಿಗುರಿದಾಗ ಕಾಣುವ ಸಂಭ್ರಮ ನಮ್ಮ ಅರಿವಿಗೆ ಬರುತ್ತದೆ……..

ಹಬ್ಬಗಳ ಧಾರ್ಮಿಕ ಮಹತ್ವ ಏನೇ ಇರಲಿ ಸಾಂಸ್ಕೃತಿಕವಾಗಿ ಹಬ್ಬಗಳು ಜೀವನೋತ್ಸಾಹದ ಕುರುಹುಗಳು. ಸಂಬಂಧಗಳನ್ನು ಬೆಸೆಯುವ ಮತ್ತು ಪುನರ್ ಸ್ಥಾಪಿಸುವ ಪ್ರಕ್ರಿಯೆಗಳ ಚಾಲನಾ ಶಕ್ತಿ…….

Klive Special Article ವೈವಿಧ್ಯಮಯ ಭಾರತದಲ್ಲಿ ಹಬ್ಬಗಳನ್ನು ವಿಜೃಂಭಿಸುವುದರ ಜೊತೆಗೆ ಆರ್ಥಿಕ ಅಸಮಾನತೆಯ ಇನ್ನೊಂದು ಮುಖವೂ ತೆರೆದುಕೊಳ್ಳುತ್ತದೆ. ಈಗ ಆ ಅಂತರ ಕಡಿಮೆಯಾಗಿದ್ದರೂ ಕೆಲವು ದಶಕಗಳ ಹಿಂದೆ ಹಬ್ಬಗಳು ಸಹ ಶ್ರೀಮಂತಿಕೆಯ ಪ್ರದರ್ಶನ ಒಂದು ಕಡೆ ಮತ್ತು ಬಡವರ ‌ಆರ್ಥಿಕ ನರಳಾಟ ಮತ್ತೊಂದು ಕಡೆ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿತ್ತು. ವಿಶೇಷ ಊಟ ಮತ್ತು ಹೊಸ ಬಟ್ಟೆ ಹಾಗು ಮನೆಗೆ ಸುಣ್ಣ ಬಣ್ಣ ಜೊತೆಗೆ ಹೊಸ ಮದುವೆಯ ಜೋಡಿಗಳ ಬೇಡಿಕೆ ಹೀಗೆ ಒಂದಷ್ಟು ಆರ್ಥಿಕ ಒತ್ತಡ ಬಡವರನ್ನು ಕಾಡುತ್ತಿತ್ತು……..

ಜಾಗತೀಕರಣದ ನಂತರ ಭಾರತದ ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಆದರೆ ಅದರ ಪರಿಣಾಮ ಹಬ್ಬಗಳ ಪ್ರಭಾವವೂ ಕ್ಷೀಣಿಸಿತು ಮತ್ತು ಹೆಚ್ಚು ಕೃತಕವಾಯಿತು. ಅದು ಎಂದಿನಂತೆ ಒಂದು ಸಹಜ ಬದಲಾವಣೆ ಎಂದು ಭಾವಿಸಬಹುದು……

ಸಾಮಾನ್ಯವಾಗಿ ಗ್ರಾಮೀಣ ಭಾಗದ ಯುಗಾದಿ ಹಬ್ಬವೆಂದರೆ….‌

ತಲೆಗೆ ಎಣ್ಣೆ ಹಚ್ಚುವವರು,
ಮೈಗೆ ಎಣ್ಣೆ ತೀಡುವವರು,
ಹೊಟ್ಟೆಗೆ ಎಣ್ಣೆ ಹಾಕುವವರು,
ಹೋಳಿಗೆ ತುಪ್ಪ ಸವಿಯುವವರು,
ಕೋಳಿ, ಕುರಿ ಮಾಂಸ ಭಕ್ಷಿಸುವವರು,
ಇಸ್ಪೀಟ್ ಆಟ ಆಡುವವರು,
ಹೊಸ ಬಟ್ಟೆ ಹಾಕಿ ನಲಿಯುವವರು,
ಹೊಸ ವರ್ಷ ಸಂಭ್ರಮಿಸುವವರು,
ನವ ಜೋಡಿಗಳು,
ಹಳೆ ಬೇರುಗಳು,
ಬಡತನದ ನೋವುಗಳು,
ಸಿರಿತನದ ಖುಷಿಗಳು,
ಅಗಲಿದವರ ನೆನಪುಗಳು,
ಹುಟ್ಟಿದವರ ನಲಿವುಗಳು,

ಯುಗಾದಿ ಎಂದರೆ ಅದೊಂದು ನೆನಪಿನಾ ಹಬ್ಬ.
ಸಿಹಿಯೂ ಇದೆ – ಕಹಿಯೂ ಇದೆ.
ಕಾಲನ ಪಯಣದಲಿ ಸಿಹಿ ಕಹಿಯಾಗಿ – ಕಹಿ ಸಿಹಿಯಾದ ಅನುಭವ ಒಂದು ವಿಸ್ಮಯ.

ಆಗ ಮಾವಂದಿರು ತಮ್ಮ ಒರಟು ಕೈಗಳಲ್ಲಿ ಪುಟ್ಟ ಬೆತ್ತಲೆ ಮೈಗೆ ಸುಡುವ ಎಣ್ಣೆ ತಿಕ್ಕುತ್ತಿದ್ದರೆ ಅಲ್ಲೇ ನರಕ ದರ್ಶನ.
ಈಗ Massage parlor ನಲ್ಲಿ ಬಾಡಿ ಮಸಾಜ್ ಮಾಡುತ್ತಾ ಎಷ್ಟೇ ಒತ್ತಿದರೂ ಅದೊಂದು ಸ್ವರ್ಗ ಸುಖ.

ಆಗ ಕಲ್ಲಿನಲಿ ಮೈ ಉಜ್ಜಿ ಬೀದಿಯ ಸುಡು ಬಿಸಿಲಿನಲ್ಲಿ ಬಿಸಿ ನೀರಿನಲ್ಲಿ ಅಮ್ಮ ಸ್ನಾನ ಮಾಡಿಸುತ್ತಿದ್ದರೆ ಅದೊಂದು ಯಾತನಾಮಯ ಸಮಯ.
ಈಗ ಹದ ಬೆರೆತ ಬಿಸಿ ನೀರಿನ ಬಾತ್ ಟಬ್ಬಿನಲಿ ಕುಳಿತು shower ನಲ್ಲಿ ಸ್ನಾನ ಮಾಡುತ್ತಿದ್ದರೆ ಸಮಯದ ಪರಿವೇ ಇರುವುದಿಲ್ಲ.

ಅಂದು ಹೊಸ ಬಟ್ಟೆಗಾಗಿ ತಿಂಗಳ ಮೊದಲೇ ರೋಮಾಂಚನದ ಕನಸಿನ ಅನುಭವವಾಗುತಿತ್ತು.
ಇಂದು ಈ ಸುಡು ಬೇಸಿಗೆಯಲಿ ಬಟ್ಟೆ ತೊಡಲೇ ಉತ್ಸಾಹವಿಲ್ಲ. ಕಪಾಟಿನೊಳಗಿಂದ ಇನ್ನೂ ಧರಿಸದ ಹೊಸ ಬಟ್ಟೆಗಳು ಗಹಗಹಿಸಿ ನಗುತ್ತಿವೆ.

ಅಂದು ಹೋಳಿಗೆಯ ಹೂರಣ ಕದ್ದು ತಿನ್ನಲು ನಾನಾ ಯೋಚನೆ – ನಾನಾ ಯೋಜನೆ.
ಇಂದು ತಟ್ಟೆಯ ಮುಂದೆ ಭಕ್ಷ್ಯಭೋಜನ. ತಿನ್ನಲು ಮಾತ್ರ ನಾನಾ ಭಯ.

ಅಂದು ನೆಂಟರು ಬಂದರೆ ಸಂಭ್ರಮವೋ ಸಂಭ್ರಮ. ಜನ ಹೆಚ್ಚಾದಷ್ಟೂ ಖುಷಿಯೋ ಖುಷಿ.
ಇಂದು ಅತಿಥಿಗಳು ಬಂದರೆ ಏನೋ ಕಸಿವಿಸಿ. ಅದಕ್ಕಿಂತ ಟಿವಿಯೇ ವಾಸಿ ಎನಿಸುತ್ತದೆ.

ಅಂದು ಶಿಸ್ತಿನ ಅಪ್ಪ ದೆವ್ವದಂತೆ ಕಾಣುತ್ತಿದ್ದರು.
ಇಂದು ಫೋಟೋ ಆಗಿರುವ ಅಪ್ಪನೇ ದೇವರು.

ಅಂದು ಬುಧ್ಧ ಬಸವ ಗಾಂಧಿ ಸುಭಾಷ್ ಅಂಬೇಡ್ಕರ್ ಆಜಾದ್ ಗಳೇ ಆದರ್ಶ.
ಇಂದು ಬಿಲ್ ಗೇಟ್ಸ್, ಎಲಾನ್ ಮಸ್ಕ್, ಅಂಬಾನಿ, ಅದಾನಿ, ಮಿತ್ತಲ್, ಹಿಂದೂಜಾಗಳೇ ಆದರ್ಶ.

ಅಂದು ಸತ್ಯ, ಸರಳತೆ, ಸ್ವಾಭಿಮಾನ, ಮಾನವೀಯ ಮೌಲ್ಯಗಳೇ ಜೀವನ ಧ್ಯೇಯ.
ಇಂದು ಕಾರು, ಬಂಗಲೇ, ಒಡವೆ, ಶ್ರೀಮಂತಿಕೆಗಳೇ ಬದುಕಿನ ಧ್ಯೇಯ.

ಆದರೂ,
ನಿರಾಸೆ ಏನಿಲ್ಲ.
ಅಂದಿಲ್ಲದ ಎಷ್ಟೋ ಸೌಲಭ್ಯಗಳು ಇಂದಿವೆ.
ಅಂದಿಲ್ಲದ ಅರಿವು ಜ್ಞಾನ ಇಂದಿದೆ.
ಅಂದಿಲ್ಲದ ಅನುಭವ ಇಂದಿದೆ.
ಅರಿತು ಬಾಳಿದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲ…….

ಏನೂ ಇಲ್ಲದಿದ್ದಾಗ ಎಲ್ಲವನ್ನೂ ಗಳಿಸಿದೆ.
ಎಲ್ಲವೂ ಇರುವಾಗ ಏನನ್ನಾದರೂ ಸಾಧಿಸುವಾಸೆ.
ಕಾಲಾಯ ತಸ್ಮೈ ನಮ:….

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...