Friday, March 14, 2025
Friday, March 14, 2025

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Date:

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಗುಣವನ್ನು ಕೆ.ಎಚ್.ಪಾಟೀಲ ಅವರು ಹೊಂದಿದ್ದು ಬೆಂಗಳೂರಿನ `ಕೆ.ಎಚ್.ಪಾಟೀಲ್ ಸ್ಕೂಲ್ ಆಫ್ ಲಾ’ ಉದ್ಘಾಟಿಸಲು ನನಗೆ ನಿಜಕ್ಕೂ ಸಂತೋಷ ಎನಿಸುತ್ತಿದೆ. ಈ ಕಾಲೇಜಿನಲ್ಲಿ ಇಡೀ ರಾಷ್ಟ್ರವೇ ಮೆಚ್ಚುವಂತಹ ಗುಣಮಟ್ಟದ ಕಾನೂನು ಶಿಕ್ಷಣ ದೊರೆಯುವಂತಾಗಲಿ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲ ಅಭಿಮಾನಿ ಬಳಗ, ಬೆಂಗಳೂರು ನಗರದ ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಇವರು ಹಮ್ಮಿಕೊಂಡಿದ್ದ ಕೆ.ಎಚ್.ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಕೆ.ಎಚ್.ಪಾಟೀಲ ಸ್ಕೂಲ್ ಆಫ್ ಲಾ ಬೆಂಗಳೂರು ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ ಮತ್ತು ಸಂಪಾದನೆ ಯಾರು ಬೇಕಾದರೂ ಸಂಪಾದಿಸಬಹುದು. ವಿದ್ಯಾರ್ಥಿಗಳು ಇದಕ್ಕಿಂತ ಮುಖ್ಯವಾಗಿ ಅತ್ಯುನ್ನತ ಧ್ಯೇಯಗಳೊಂದಿಗೆ ಗುಣಮಟ್ಟದ ಶಿಕ್ಷಣ ಹೊಂದಬೇಕೆಂದರು.

ಶಿಸ್ತು, ಸಂಯಮದೊಂದಿಗೆ ಇಂದಿನ ದಿನಗಳಲ್ಲಿ ಶಿಕ್ಷಣ ಪಡೆಯುವುದು ಅತಿ ಮುಖ್ಯ. ಕೆ.ಎಚ್.ಪಾಟೀಲರು ಅತ್ಯಂತ ಸ್ಫೂರ್ತಿ ದಾಯಕ ವ್ಯಕ್ತಿತ್ವ ಹೊಂದಿದ್ದರು. ಅವರ ಹೆಸರಿನ ಕಾನೂನು ಶಾಲೆ ಉದ್ಘಾಟಿಸುತ್ತಿರುವುದು ನನ್ನ ಸುಯೋಗ. ವ್ಯಕ್ತಿತ್ವದಲ್ಲಿ ವೈಶಿಷ್ಟ್ಯತೆ ರೂಢಿಸಿಕೊಂಡಿದ್ದ ಪಾಟೀಲರು ಸರ್ಕಾರ ಮಾಡದೇ ಇರುವಷ್ಟು ಅಭಿವೃದ್ಧಿ ಕೆಲಸಗಳನ್ನು ಹುಲಕೋಟಿಯಲ್ಲಿ ಮಾಡಿದ್ದಾರೆ. ಆಸ್ಪತ್ರೆ, ಶಿಕ್ಷಣ, ಇಂಜಿನಿಯರಿಂಗ್ ಕಾಲೇಜು, ಕೌಶಲ್ಯಾಧಾರಿತ ಕೇಂದ್ರಗಳನ್ನು ತೆರೆದಿದ್ದಾರೆ. ಸಾಮಾಜಿಕ, ಆರ್ಥಿಕವಾಗಿ ಸಾರ್ವಜಿಕರಿಗೆ ಅತಿದೊಡ್ಡ ಕೊಡುಗೆ ನೀಡಿರುವ ಅವರು ಒಂದು ಶಕ್ತಿಯಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಲಾ ಶಾಲೆಯ ಲಾಂಛನ ಉದ್ಘಾಟಿಸಿ ಮಾತನಾಡಿ, ಸದನದಲ್ಲಿ ಸಹೋದ್ಯೋಗಿಗಳ ಟೇಬಲ್ ಮೇಲಿನ ಸಿಹಿ ಕಬಳಿಸಿ ತಿನ್ನುವ ಕ.ಎಚ್.ಪಾಟೀಲ್ ಅವರ ಗುಣವನ್ನು ಹಾಸ್ಯದೊಂದಿಗೆ ಸ್ಮರಿಸುತ್ತಾ, ಕೆ.ಎಚ್.ಪಾಟೀಲ ಸ್ನೇಹಶೀಲರು. ಶ್ರೇಷ್ಠ ಇಚ್ಛಾಶಕ್ತಿ ಹೊಂದಿದ್ದ ಧೀಮಂತ ನಾಯಕರಾಗಿದ್ದರು.

ಪಂಚಾಯ್ತಿ ಅಧ್ಯಕ್ಷರಾಗಿ ಸಾಕಷ್ಟು ಸಾಧನೆ ಮಾಡಿದ್ದ ಅವರು, ಇಡೀ ಗದುಗಿನ ವಾತಾವರಣವನ್ನೇ ಬದಲಾಯಿಸಿದ್ದರು. ದಾರ್ಶನಿಕ, ನಿಷ್ಠುರವಾದಿಯಾಗಿದ್ದರು. ಇಂಥ ರಾಜಕಾರಣಿಗಳು ಸಿಗುವುದು ಅಪರೂಪ. ಅವರೊಬ್ಬ ಆಕಾಶದಂತಿದ್ದರು. ಪರ್ವತಕ್ಕೆ ಪರ್ವತವೇ ಸಾಟಿ ಎನ್ನುವ ವ್ಯಕ್ತಿತ್ವವುಳ್ಳ ಅವರು ನಿಷ್ಠುರವಾದಿಗಳಾಗದಿದ್ದರೆ ಮುಖ್ಯಮಂತ್ರಿಗಳಾಗಬಹುದಿತ್ತು. ಇಂದಿನ ರಾಜಕಾರಣದಲ್ಲಿ ನಿಷ್ಠುರವಾದಿಗಳು, ಇಚ್ಛಾಶಕ್ತಿ ಇರುವವರು ಬೇಕು. ಅವರ ಆಕಾಂಕ್ಷೆಯಂತೆ ಆರಂಭವಾಗಿರುವ ಲಾ ಸ್ಕೂಲ್ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲಿ. ಶಿಕ್ಷಣದಲ್ಲಿ ಆಧುನಿತ ತಂತ್ರಜ್ಞಾನ ಅಳವಡಿಸಿ ಹೊಸ ಕಾನೂನು ಕೋರ್ಸ್ಗಳು ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ರೂಪಿತವಾಗಲಿ. ಎಸ್.ಸಿ., ಎಸ್.ಟಿ., ಮತ್ತು ಓಬಿಸಿ ಹಾಗೂ ಮಹಿಳಾ ನ್ಯಾಯಾಧೀಶರು ಕಾನೂನು ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಾಗ ಮಾತ್ರ ಸಾಮಾಜಿಕ ನ್ಯಾಯ ಲಭಿಸಲು ಸಾಧ್ಯ ಎಂದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, 1969ರಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ನನಗೆ ಕೆ.ಎಚ್.ಪಾಟೀಲರು ದೊಡ್ಡ ನಾಯಕರಾಗಿ ಗೊತ್ತು. ವೀರೇಂದ್ರ ಪಾಟೀಲರು ಮತ್ತು ಎಸ್.ಬಂಗಾರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದವರು. ಇಂದಿರಾಗಾಂಧಿ ಅವರು ಹಾಕಿಕೊಟ್ಟ ಕಾರ್ಯಕ್ರಮಗಳಿಂದ ನನ್ನಂಥವನು ಮಂತ್ರಿಯಾಗಿ ಬೆಳೆಯಲು ಸಾಧ್ಯವಾಗಿದೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಹಾದಿಯಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೋವಿಡ್ ವೇಳೆ ಜನರು ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದರು. ಈಗ ಚೇತರಿಸಿಕೊಳ್ಳುವಂತಾಗಿದೆ ಎಂದರು.

ಮಾಜಿ ಸಚಿವ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಎಪಿಎಂಸಿ ಅಧ್ಯಕ್ಷನಾಗುವ ನನ್ನ ಕನಸಿಗೆ ವಿರುದ್ಧವಾಗಿ ನನ್ನ ಜಿಲ್ಲೆಯ ಐವರು ಶಾಸಕರು ಕೆ.ಎಚ್.ಪಾಟೀಲರ ಬಳಿ ದೂರು ನೀಡಿದ್ದರು. ಆಗ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ಕೆ.ಎಚ್.ಪಾಟೀಲರು ನನ್ನನ್ನು ಹುರಿದುಂಬಿಸಿದ್ದರು. ಅಧ್ಯಕ್ಷನಾಗಿ ರಾಜಕೀಯವಾಗಿ ಬೆಳೆಯಲು ಕಾರಣರಾಗಿದ್ದರು. ಜವಾರಿ ಭಾಷೆಯಲ್ಲಿ ಮಾತನಾಡುವ ಅವರ ಕಣ್ಣಲ್ಲಿ ಪ್ರೀತಿ ಇತ್ತು. ಒಳ್ಳೆ ಗುರುಗಳು ಇದ್ದರೆ ಏನು ಬೇಕಾದರೂ ಆಗಬಹುದು. ಅವರಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇವತ್ತಿನ ವಾತಾವರಣ ಬಹಳ ಕಲುಷಿತಗೊಂಡಿದೆ. ಬೇಗ ಅಧಿಕಾರ ಹಿಡಿಯಬೇಕು, ಬೇಗ ಸಂಪಾದಿಸಬೇಕು ಎನ್ನುವ ಆಲೋಚನೆ ಬಿಡಬೇಕು. ಸಮಾಜದಲ್ಲಿ ಒಳ್ಳೆಯ ಮುಖಂಡರು ಹಾಗೂ ಕಾರ್ಯಕರ್ತರ ಕೊರತೆ ಇದೆ. ಎಚ್.ಕೆ.ಪಾಟೀಲರು ತಮ್ಮ ತಂದೆಯ ಹಾದಿಯಲ್ಲಿ ಆದರ್ಶವಾಗಿ ಸಾಗಿದ್ದಾರೆ. ಅವರ ರಾಜಕೀಯ ಚಾರಿತ್ರ್ಯಕ್ಕೆ ಹೆಚ್ಚುಗಾರಿಕೆ ಇದೆ ಎಂದರು.

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಎಸ್.ಹೊರಟ್ಟಿ ಮಾತನಾಡಿ, ಕೆ.ಎಚ್.ಪಾಟೀಲರ ಮಾರ್ಗದರ್ಶನದಲ್ಲಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಾರಣಾಂತರಗಳಿಂದ ರಾಜಕೀಯಕ್ಕೆ ಬಂದ ನನಗೆ ಪಾಟೀಲರು ತಂದೆ ಸಮಾನರಾಗಿದ್ದರು. ಒಬ್ಬ ಸರಪಂಚ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದದ್ದು ದಾಖಲೆ. ಅವರಿಂದಾಗಿ ರಾಷ್ಟçಪತಿ ಅಬ್ದುಲ್ ಕಲಾಂ, ಇಂದಿರಾಗಾಂಧಿಯಂಥವರು ಹುಲಕೋಟಿಗೆ ಬರಬೇಕಾಯಿತು. ಅವರಿಗೆ ಜಾತಿ ಇರಲಿಲ್ಲ. ಎಂದಿಗೂ ಮುಖವಾಡ ಧರಿಸಲಿಲ್ಲ. ಆರ್.ಗುಂಡೂರಾಯರಿಗೆ ವೇದಿಕೆಯಲ್ಲೇ ಇಂಜಿನಿಯರಿಂಗ್ ಕಾಲೇಜು ಒದಗಿಸಿಕೊಡಿ ಎಂದು ಕೇಳಿ ಪಡೆದ ಧೀಮಂತ. ಸ್ವಂತ ಹೋರಾಟ, ಛಲದ ಮೇಲೆ ಅವರು ನಿಂತಿದ್ದರು. ನಾಡು ಕಂಡ ಶ್ರೇಷ್ಠ ರಾಜಕಾರಣಿಯಾದ ಅವರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕೆಂದರು.

ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಮಾತನಾಡಿ, ನಾವು ಹುಟ್ಟುವಾಗ ಹೆಸರು ಇರಲ್ಲ. ಸಾಯುವಾಗ ಹೆಸರು ಇರುತ್ತದೆ. ಕೆ.ಎಚ್.ಪಾಟೀಲರು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಇಂತಹ ಕಾರ್ಯಕ್ರಮ ಒಂದು ದಿನದ ಮಟ್ಟಿಗೆ ಸೀಮಿತವಾಗಬಾರದು. ಯುವ ಜನತೆಗೆ ಪಾಟೀಲರ ಜನ್ಮ, ಬಾಲ್ಯ, ಹಳ್ಳಿ ಜೀವನ, ಸಾಮಾಜಿಕ ಬದುಕು, ರಾಜಕೀಯವಾಗಿ ಹಂತ ಹಂತವಾಗಿ ಅವರು ಧೀಮಂತರಾಗಿ ಬೆಳೆದ ಬಗೆ ಎಲ್ಲವನ್ನು ತಿಳಿ ಹೇಳುವ ಕೆಲಸ ಆಗಬೇಕು. ಯುವ ಜನಾಂಗ ಸಮಾಜಗಳನ್ನು ಒಂದುಗೂಡಿಸುವತ್ತ ಗಮನ ಹರಿಸಬೇಕು. ಉತ್ತಮ ವೈದ್ಯ, ಇಂಜಿನಿಯರ್, ಲಾಯರ್, ಪೊಲೀಸ್ ಅಧಿಕಾರಿ ಆಗಬೇಕೆಂದರೆ ಅದಕ್ಕೆ ಕಾಲೇಜುಗಳಿವೆ. ಉತ್ತಮ ರಾಜಕಾರಣಿಗಳಾಗಬೇಕಾದರೆ ತರಬೇತಿ ನೀಡುವ ಕಾಲೇಜುಗಳಿಲ್ಲ. ಕೆ.ಎಚ್.ಪಾಟೀಲರ ಜೀವನ ದರ್ಶನವನ್ನು ಯುವಕರು ಅಧ್ಯಯನ ಮಾಡಿ, ಅವರನ್ನು ಅನುಸರಿಸಿದಲ್ಲಿ ಉತ್ತಮ ರಾಜಕಾರಣಿಗಳಾಗಬಹುದು. ಯಾರು ಬೇಕಾದರೂ ಶ್ರೀಮಂತರಾಗಬಹುದು, ರಾಜಕಾರಣಿಗಳಾಗಬಹುದು. ಕೆ.ಎಚ್.ಪಾಟೀಲ ಮತ್ತು ಎಂ.ಎನ್.ವೆಂಕಟಾಚಲಯ್ಯ ಅವರಂತೆ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಎಚ್.ಕೆ.ಪಾಟೀಲರು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಇಂದಿನ ಲೆಕ್ಕಾಚಾರದ ರಾಜಕಾರಣದಲ್ಲಿ ದೇಶ, ರಾಜ್ಯಗಳು ನಲುಗುತ್ತಿರುವುದು ನೋವಿನ ಸಂಗತಿ. ಇದನ್ನು ಹೊರತುಪಡಿಸಿ ಕೆ.ಎಚ್.ಪಾಟೀಲರು ಇದ್ದರು. ಅಂಜಿಕೆ ಎನ್ನುವುದು ಅವರಿಗಿರಲಿಲ್ಲ. ಅವರು ಸ್ವಂತ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಬೇರೆಯವರ ಮುಲಾಜಿಗೆ ಬೀಳುತ್ತಿರಲಿಲ್ಲ. ದೇವರಾಜ ಅರಸು ಸಿಎಂ ಆಗಿದ್ದ ವೇಳೆ ಇವರು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದರು. ಸಿಎಂ ಅವರನ್ನೇ ಒಂದೆರಡು ನಿಮಿಷ ಕಾಯುವಂತೆ ಮಾಡಿದ್ದ ಧೀಮಂತರು ಕೆ.ಎಚ್.ಪಾಟೀಲರು ಎಂದ ಪರಮೇಶ್ವರ್, ಕರ್ನಾಟಕ ಎನ್ನುವ ಹೆಸರು ಬರಲು ಗದುಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಇವರು ಪ್ರಸ್ತಾಪಿಸಿದ್ದ ಕರ್ನಾಟಕವೇ ಇಂದು ಹೊಸತನದಿಂದ ಕೂಡಿದೆ ಎಂದರು. ಸಮಾನತೆ, ಭ್ರಾತೃತ್ವ, ಸಹೋದರತೆ ಸ್ವಾತಂತ್ರ್ಯ ಕಳೆದು 75 ವರ್ಷವಾದರೂ ಲಭಿಸುತ್ತಿಲ್ಲ. ಸಮಾನತೆ ಬರಬೇಕಾದರೆ ಪ್ರತಿಯೊಬ್ಬ ಭಾರತೀಯ ಕಾನೂನು ಓದಬೇಕು. ಕೆ.ಎಚ್.ಪಾಟೀಲ ಲಾ ಶಾಲೆ ರಾಷ್ಟ್ರಕ್ಕೆ ಮಾದರಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ಶರಣಗೌಡ ಪಾಟೀಲ, 5ನೇ ಹಣಕಾಸು ಆಯೋಗದ ಅಧ್ಕಕ್ಷ ಡಾ.ಸಿ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ತಿಮ್ಮಾಪುರ, ರುದ್ರಪ್ಪ ಲಮಾಣಿ, ಶಾಸಕ ರಿಜ್ವಾನ್ ಹರ್ಷದ್ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ಹಲವಾರು ಶಾಸಕರು, ಸಹಕಾರಿ ಸಂಘಗಳ ಧುರೀಣರು, ಪಾಟೀಲರ ಅಭಿಮಾನಿಗಳು ಮತ್ತಿತರರು ಇದ್ದರು.

ಇದಕ್ಕೂ ಮುನ್ನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ತಂಡದವರಿಂದ ಕೆ.ಎಚ್.ಪಾಟೀಲ ಲಾವಣಿ ಪ್ರಸ್ತುತ ಪಡಿಸಿದರೆ, ರೇವತಿ ಕುಮಾರ್ ಪತ್ತಾರ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಂಕರ್ ಪ್ರಕಾಶ್ ನಿರೂಪಿಸಿದರು. 

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...

Senior Chamber International Organization ಪುಷ್ಪ ಎಸ್ ಶೆಟ್ಟಿಅವರಿಗೆ ‌ಸೀನಿಯರ್ ಚೇಂಬರ್ ಉನ್ನತ ಪ್ರಶಸ್ತಿ

Senior Chamber International Organization ಬ್ರಹ್ಮಾವರದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್...

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...