Department of Animal Husbandry and Veterinary Services ರಾಜ್ಯದ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಾಗಬಾರದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಡಳಿತ ಉಪ ನಿರ್ದೇಶಕ ಡಾ.ಎ.ಬಾಬುರತ್ನ ತಿಳಿಸಿದರು.
ಸೋಮವಾರ ನಗರದ ಇಲಾಖೆಯ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವರ್ಚುವಲ್ ಸಭೆಯಲ್ಲಿ ಅವರ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 332 ಕೋಳಿ ಫಾರಂಗಳಿದ್ದು, ಈ ಫಾರಂಗಳಲ್ಲಿ ಒಟ್ಟು 1741650 ಕೋಳಿಗಳ ಸಾಕಾಣಿಕ ಮಾಡಲಾಗಿದೆ. ಆದರೂ ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರ ಪ್ರಕರಣ ವರದಿಯಾಗಿಲ್ಲ. ಈಗಾಗಲೇ ಹಕ್ಕಿಜ್ವರ ಸಂಬಂಧಿಸಿದಂತೆ ಕಣ್ಗಾವಲು ಕಾರ್ಯಕ್ರಮವನ್ನು ನಡೆಸುತ್ತಿದ್ದು, ಈ ವರ್ಷದಲ್ಲಿ 476 ಕೋಳಿಗಳ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಜಿಲ್ಲೆಯಾದ್ಯಂತ 29 ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ಗಳನ್ನು ಮಾಡಿದ್ದು, ಎಲ್ಲಾ ಕೋಳಿ ಫಾರಂಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಮತ್ತು ಅಸಹಜ ಹಾಗೂ ಸಾಮೂಹಿಕ ಕೋಳಿಗಳು ಸಾವನ್ನಪ್ಪಿದರೆ ಕೂಡಲೇ ಕೋಳಿ ಫಾರಂ ಮಾಲೀಕರಿಗೆ ಹಾಗೂ ಸಾರ್ವಜನಿಕರು ಹತ್ತಿರದ ಪಶುವೈದ್ಯ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ಅವರು ಪ್ರಕರಣ ಕಂಡಬಂದಲ್ಲಿ ತಕ್ಷಣ ವೈಜ್ಞಾನಿಕ ವಿಲೇವಾರಿಗೂ ಕೂಡ ತಯಾರಿ ಮಾಡಕೊಳ್ಳಲಾಗಿದೆ ಎಂದರು.