ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಿ.ಎಸ್. ಬೊಮ್ಮಾಯಿ ಯವರು ಹಾಗೂ ಇತರೆ ವಿರೋಧ ಪಕ್ಷದ ಮುಖಂಡರುಗಳು ರಾಜ್ಯದ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ, ರಾಜ್ಯ ದಿವಾಳಿಯಾಗುತ್ತಿದೆ, ಹಣಕಾಸಿನ ವ್ಯವಸ್ಥೆ ನೆಲ ಕಚ್ಚಿದೆ ಎಂದೆಲ್ಲ ಆರೋಪಿಸಿ ಮಾತನಾಡಿದ್ದಾರೆ. ಆ ಮೂಲಕ ಜನರನ್ನು ಸಶಕ್ತಗೊಳಿಸುತ್ತಿರುವ ನಮ್ಮ ಗ್ಯಾರಂಟಿ ಹಾಗೂ ಇನ್ನಿತರೆ ಯೋಜನೆಗಳನ್ನು ಟೀಕಿಸಿದ್ದಾರೆ.
ವಾಸ್ತವವೇನೆಂದರೆ, ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾಗ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದರು. ಆದರೆ ವಿರೋಧ ಪಕ್ಷದಲ್ಲಿ ಕೂತು ದೊಡ್ಡ ಅರ್ಥಶಾಸ್ತ್ರಜ್ಞರಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಅರಾಜಕ ಆರ್ಥಿಕ ನಿರ್ವಹಣೆಗಳಿಂದಾಗಿ ಪಾತಾಳದತ್ತ ಕುಸಿಯುತ್ತಿದ್ದ ರಾಜ್ಯದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದೆ ಅಥವಾ ಅರಿತುಕೊಳ್ಳಲಾರದೆ ಬಿಜೆಪಿಯವರು ಮಾತಾಡುತ್ತಿರುವುದು ದುರಂತ.
ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತ್ಯುತ್ತರಿಸಿದ್ದಾರೆ.
ಬಿಜೆಪಿಯವರು ತಾವು ಮಾಡಿದ್ದ ಅವಾಂತರಗಳ ಕೆಲವು ಉದಾಹರಣೆಗಳಿವು;
ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದ್ದಾಗ ಬಜೆಟ್‌ಗಳಲ್ಲಿ ನಿಗದಿ ಮಾಡಿದ್ದಕ್ಕಿಂತ ಏಳು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಂಡಿದ್ದರು. 31-3-2023 ಕ್ಕೆ ಬಂಡವಾಳ ವೆಚ್ಚ ಮಾಡುವ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಕಾಮಗಾರಿಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಅನುದಾನ ಒದಗಿಸದೆ ಬಿಟ್ಟು ಹೋಗಿದ್ದಾರೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಈ ಆರ್ಥಿಕ ದುರಾಡಳಿತ, ಬೇಜವಾಬ್ದಾರಿತನ, ಭ್ರಷ್ಟಾಚಾರಯುತ ಕಾಮಗಾರಿಗಳ ನಿರ್ವಹಣೆಯನ್ನು ಕೇವಲ ಒಂದೆರಡು ವರ್ಷಗಳಲ್ಲಿ ದುರಸ್ತಿ ಮಾಡಲು ಸಾಧ್ಯವೆ?
ಎಂದು ಸಿದ್ಧರಾಮಯ್ಯನವರು ಬಿಜೆಪಿ ಆಕ್ಷೇಪಣೆಗಳಿಗೆ ತಿರುಗೇಟು ನೀಡಿದ್ದಾರೆ