Sumukha Art School ಶಿವಮೊಗ್ಗದ ಸುಮುಖ ಕಲಾಕೇಂದ್ರದ ಆಶ್ರಯದಲ್ಲಿ ದಿ.ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಿತು. ಈ ಬಾರಿ ಸುಬ್ರಾಯ ಮಲ್ಯ ಪ್ರಶಸ್ತಿಗೆ ಹಿರಿಯ ಭಾಗವತಿಕೆ ಕಲಾವಿದ ಕೆ.ಜಿ.ರಾಮರಾಯರು ಭಾಜನರಾಗಿದ್ದಾರೆ. ದಿ.ಸುಬ್ರಾಯ ಮಲ್ಯ ರ ಪುತ್ರಿ ಹಾಗೂ ಸುಮುಖ ಕಲಾ ಕೇಂದ್ರದ ನಿರ್ವಾಹಕಿ ಕಿರಣ್ ಪೈ ಅವರು ಪ್ರಾಸ್ತಾವಿಕ ನುಡಿಯಾಡಿದರು. ಯಕ್ಷಗಾನ ಕಲೆಯನ್ನ ಇಂದಿನ ಮಕ್ಕಳಿಗೆ ಕಲಿಸುವ ಏಕೈಕ ಉದ್ದೇಶದಿಂದ ಕಲಾ ಕೇಂದ್ರ ಸ್ಥಾಪನೆಯಾಗಿದೆ. ಜೀವನದಲ್ಲಿ ಒಳ್ಳೆಯ ಸಂಸ್ಕಾರವನ್ನ ಯಕ್ಷಗಾನ ಕಲಿಕೆ ತುಂಬಿ ಕೊಡುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ ಎಂದು ಕಿರಣ್ ಪೈ ಹೇಳಿದರು.
ಸಮಾರಂಭವನ್ನ ಜ್ಯೋತಿ ಬೆಳಗುವ ಉದ್ಘಾಟಿಸಲಾಯಿತು. ಶಿವಮೊಗ್ಗದ ಹಿರಿಯ ಯಕ್ಷಗಾನ ಅಭಿಮಾನಿ ಮತ್ತು ಖ್ಯಾತ ವೈದ್ಯ
ಡಾ.ರತ್ನಾಕರ್ ಉದ್ಘಾಟಿಸಿದರು. “ಯಕ್ಷಗಾನ ಕಲೆ ಅತ್ಯಂತ ಪ್ರಭಾವಿ ಮತ್ತು ವ್ಯಕ್ತಿತ್ವವರ್ಧನೆಗೆ ಸಹಕಾರಿ.
ಅಂತಹ ಕಲೆಯನ್ನ ಕಲಿಯಲು ಹೋಗಿ ಸಾಧಿಸಲಾಗಲಿಲ್ಲ. ಆದರೆ ಅದರ ಮೇಲಿನ ಮಮತೆಯಿಂದ ಯಕ್ಷಗಾನದ ಕಲಾವಿದರನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿನ ಗೆಳೆಯರೊಂದಿಗೆ ಒಂದುಗೂಡಿರುವೆ. ಮಹಿಳೆಯರಿಗೆ ಯಕ್ಷಗಾನ ಕಲಿಸುವ ಲಕ್ಷ್ಮೀನಾರಾಯಣ ಕಾಶಿ ಅಂಥವರ ಸಾಹಚರ್ಯ ದೊರೆತಿದೆ. ಹೀಗಾಗಿ ಶಿವಮೊಗ್ಗದದಲ್ಲಿ ಅಭಿಮಾನಿಗಳ ಬಳಗ ರಚಿಸಿಕೊಂಡಿದ್ದೇವೆ. ಮಹಿಳೆಯರನ್ನ, ಮಕ್ಕಳನ್ನ ಈ ಕಲೆಯತ್ತ ಸೆಳೆಯುವ ಕಿರಣ್ ಪೈ ಅವರ ಶ್ರಮ ಸಾರ್ಥಕವಾಗುತ್ತಿದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಮಾನದಲ್ಲಿ ‘ಚಾಟ್ ಜಿಪಿಟಿ’ ಎಂಬ ಮಾಹಿತಿ ಭೂತದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕಲಾರಂಗದ ಎಲ್ಲ ಸಂಗತಿಗಳನ್ನ ಗುರುವಿಲ್ಲದೇ ಥಟ್ಟನೆ ಬಾಚಿಕೊಡುವ ಈ ಕ್ರಮದಿಂದ ವಿಲಕ್ಷಣ ವಾತಾವರಣವೇ ಭವಿಷ್ಯದಲ್ಲಿ ಸೃಷ್ಟಿಯಾಗಲಿದೆ.
ಯಕ್ಷಗಾನದಂತಹ ವಿರಾಟ್ ಕಲೆಯನ್ನ ಸವಿಯುವ ಸಹೃದಯರೇ ಮುಂದೆ ಶೂನ್ಯ ವಾಗಬಹುದು. ಮೌಖಿಕ ಕಲಿಕೆಗೆ
ಸಂವಾದಿ ಅಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆ ಅದನ್ನೇ ಆರಾಧಿಸುವ, ಲವಲವಿಕೆಯಲ್ಲಿ ಇಂತಹ ಕಲೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗುತ್ತಾರೆ. ಅಂತಹ ದಿನ ದೂರವಿಲ್ಲ ಎಂದು ಕಳಕಳಿಯಿಂದ ಮಾತನಾಡಿದರು.
ಶಿವಮೊಗ್ಗ ಅಭ್ಯುದಯ ಸಂಸ್ಥೆಯ ನಿರ್ದೇಶಕ ಲಕ್ಷ್ಮೀನಾರಾಯಣ ಕಾಶಿ ಅವರು ಸನ್ಮಾನಿತ ಕೆ.ಜಿ.ರಾಮರಾಯರಿಗೆ ಅಭಿನಂದನಾ ಭಾಷಣಮಾಡಿದರು. ಗುರು ಉಪ್ಪೂರರಿಂದ ಶಾಸ್ತ್ರೀಯ ತಳಹದಿ ಪಡೆದು ,ನೆಬ್ಬೂರರ ಒಡನಾಟದಿಂದ ಭಾವತುಂಬಿ ಭಾಗವತಿಕೆಗೆ ಹೊಸ ಚೇತನ ನೀಡಿದರು. ಕೆರೆಮನೆ ಶಂಭುಹೆಗಡೆ ಮೇಳದಿಂದ ಬಿಡುವು ದೊರೆತಾಗ ಸಾಗರ ಪ್ರಾಂತ್ಯಕ್ಕೆಬಂದು ಅಲ್ಲಿ
ಯುವಕರಿಗೆ ಯಕ್ಷಗಾನ ತಾಲೀಮು ನೀಡಿದರು. ಹೀಗಾಗಿ ಸಾಗರ ಸುತ್ತಮುತ್ತ ಈಕಲೆ ಬೆಳೆಯಲಿಕ್ಕೆ ಕಾರಣೀಭೂತರಾದರು. ಸಾಕೇತ ಕಲಾವಿದರು ಎಂಬ ತಂಡ ಕಟ್ಟಿ ಯಕ್ಷಗಾನ ಅಭಿಮಾನಿಗಳನ್ನ ರಂಜಿಸಿದರು. ಶಂಭುಹೆಗಡೆ ಅವರ
ಕಲಾ ಪ್ರಜ಼್ಞೆ, ಆದರ್ಶ, ಮತ್ತು ಕಮಿಟ್ ಮೆಂಟ್ ಗಳನ್ನ ತಮ್ಮದಾಗಿಸಿ ಯಕ್ಷಗಾನಕ್ಕೆತಮ್ಮನ್ನ ಅರ್ಪಿಸಿಕೊಂಡಿದ್ದಾರೆ. ಹೀಗೆ ಅವರದ್ದು ಸುಮಾರು ಐವತ್ತು ವರ್ಷಗಳ ಕಲಾಪಯಣ ಸಾಗಿ ಬಂದಿದೆ. ಅಷ್ಟೇ ಅಲ್ಲದೆ ಯಕ್ಷಗಾನ ಭಾಗವತಿಕೆಗೆ ಮೀಸಲಾಗದೇ ರಂಗನಡೆ,ರಂಗಕ್ರಿಯೆಗಳ ಬಗ್ಗೆ ಇದಮಿತ್ಥಂ ಎಂದು ಹೇಳಬಹುದಾದ ಕಲಾಪ್ರಭುತ್ವವನ್ನ ರೂಢಿಸಿಕೊಂಡು ಬಂದಿದ್ದಾರೆ.
ಎಂದು ಅಭಿನಂದಿಸಿದರು.
ಹಿರಿಯ ಭಾಗವತಿಕೆ ಕಲಾವಿದ ಕೆ.ಜಿ.ರಾಮರಾಯರಿಗೆ ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
“ನಾರಣಪ್ಪ ಉಪ್ಪೂರು ಮತ್ತು ಸುಬ್ರಾಯ ಮಲ್ಯರು ನನಗೆ ಗುರುಗಳಾಗಿದ್ದವರು. ಉಡುಪಿ ಕಲಾ ಕೇಂದ್ರದ ಉಪ್ಪೂರು ಪ್ರಶಸ್ತಿ ಬಂದಿದೆ.ಈಗ ಸುಬ್ರಾಯ ಮಲ್ಯರ ಹೆಸರಿನ. ಪ್ರಶಸ್ತಿ ಬಂದು ಒಂದು ರೀತಿಯ ಧನ್ಯತಾಭಾವ ನಮಗಾಗಿದೆ ಎಂದರು.
ಶಿವಮೊಗ್ಗದಲ್ಲಿ ಮಹಿಳಾ ಯಕ್ಷಗಾನ ಬೆಳವಣಿಗೆಗೆ ಕಾರಣರಾದ ಲಕ್ಷ್ಮೀ ನಾರಾಯಣ ಕಾಶಿ ಅವರ ಕೊಡುಗೆ ಅದ್ವಿತೀಯ ಎಂದು ಹೇಳಿದರು. ಅದರ ಪಡಿನೆಳಲಾಗಿ ಕಿರಣ್ ಪೈ ಅವರ ಸುಮುಖ ಕಲಾಕೇಂದ್ರ ಯಕ್ಷಗಾನ ಕಲಿಕೆಯಲ್ಲಿ ತನ್ನನ್ನ ತೊಡಗಿಸಿಕೊಂಡಿದೆ. ಬಾಬಣ್ಣನಂಥ ಸಹೃದಯರ ಪ್ರೋತ್ಸಾಹ ಯಕ್ಷಗಾನಕಲೆ ಈ ಪ್ರದೇಶದಲ್ಲಿ ಬೆಳೆಯಲು ಸಹಕಾರಿಯಾಗಿದೆ ಎಂದು ಯಕ್ಷಗಾನ ಕಲೆ ಬೆಳೆಸಿದ ವ್ಯಕ್ತಿ ವಿಶೇಷಗಳನ್ನು ಸ್ಮರಿಸಿದರು. “ ಮಕ್ಕಳೇ ವೇಷದ ವ್ಯಾಮೋಹ ಪಡಬೇಡಿ. ಬೇರೆ ಬೇರೆ ಗುರುಗಳ
ಬಳಿಗೆ ಹೋಗಿ ನಿಮ್ಮ ಅರೆಬರೆ ಕಲಾಸಕ್ತಿಯನ್ನ ತೋರಿಸಿ ಕಲೆಗೆ ಅಗೌರವ ತರಬೇಡಿ. ಶಿಷ್ಟಾಚಾರ ಪಾಲಿಸಿ. ಪೌರಾಣಿಕ ಜ್ಞಾನಸಂಪಾದನೆ ಮಾಡಿ. ಇವೆಲ್ಲ ನಿಮಗೆ ಯಕ್ಷಗಾನ ಕಲೆ ಮೈಗೂಡಿಸಿಕೊಳ್ಳಲು ತುಂಬಾ ಸಹಕಾರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಆರಂಭದಲ್ಲಿ ಗೋವಿಂದರಾಯ ನಾಯಕ್ ಅವರು ಸ್ವಾಗತ ಕೋರಿದರು.
ಶ್ರೀನಿವಾಸ ಆಚಾರ್ಯಅವರು ಕಾರ್ಯಕ್ರಮ
ನಿರೂಪಿಸಿದರು.
