Gurudutt Hegde ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿ ಮತ್ತು ಅಭಿಜಾತ ಶಿಶುಗಳ ಸಾವು-ನೋವು ನಿಯಂತ್ರಿಸುವಲ್ಲಿ ತಜ್ಞ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರದೇ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ವೈದ್ಯರಿಗೆ ಕಿವಿಮಾತು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಾಣಂತಿಯ ಸಾವು ಕುರಿತು ಪರಾಮರ್ಶನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಳೆದ 2024ರ ಸೆಪ್ಟಂಬರ್‌ಮಾಹೆಯಿಂದ ಇಂದಿನವರೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 08 ಪ್ರಕರಣಗಳು ದಾಖಲಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದ ಅವರು, ಗಂಡಾಂತರ ಗರ್ಭಿಣಿಯರು ಹೆರಿಗೆಯ ದಿನಕ್ಕೆ ಮುಂಚಿತವಾಗಿಯೇ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆ ಪಡೆದು, ಮಾನಸಿಕವಾಗಿ ಸಿದ್ಧರಾಗಿರಬೇಕು. ಹೆರಿಗೆಯ ಕೊನೆಯ ಕ್ಷಣದವರೆಗೆ ಕಾಲಹರಣ ಮಾಡದೆ ತಾವು ಮತ್ತು ಕೂಸಿನ ಆರೋಗ್ಯ ಮತ್ತು ಸುರಕ್ಷತೆಯ ಕಡೆಗೆ ಗಮನಹರಿಸುವಂತೆ ಅವರು ಸೂಚಿಸಿದರು.
ಗಂಡಾಂತರ ಗರ್ಭಿಣಿಯರ ಆರೈಕೆ ನೋಡಿಕೊಳ್ಳುತ್ತಿರುವ ವೈದ್ಯರು ಸಾಂದರ್ಭಿಕ ಸ್ಥಿತಿಗತಿಯ ಬಗ್ಗೆ ಕಾಲಕಾಲಕ್ಕೆ ಸಲಹೆ ನೀಡಬೇಕಲ್ಲದೇ ಅಗತ್ಯವಿದ್ದಾಗ ತಜ್ಞ ವೈದ್ಯರಿಗೆ ಶಿಫಾರಸ್ಸು ಮಾಡಬೇಕು. ಇದರೊಂದಿಗೆ ವೈದ್ಯರು ಶಿಫಾರಸ್ಸು ಮಾಡುವ ವೈದ್ಯರಿಗೆ ಮುಂಚಿತವಾಗಿ ಗರ್ಭಿಣಿಯ ಮಾಹಿತಿಯನ್ನು ನೀಡಿರಬೇಕು. ಜೊತೆಗೆ ಶುಶ್ರೂಷೆಯೊಬ್ಬರನ್ನು ಕಳುಹಿಸಿಕೊಡಬೇಕು ಎಂದವರು ಸಲಹೆ ನೀಡಿದರು.
Gurudutt Hegde ಅಲ್ಲದೇ ಸಂಭಾವ್ಯ ರಕ್ತಹೀನತೆ ಹಾಗೂ ಸೇವಿಸಲೇಬೇಕಾದ ಪೌಷ್ಟಿಕ ಆಹಾರದ ಕುರಿತು ಸೂಕ್ತ ಹಾಗೂ ಸಕಾಲಿಕ ಸಲಹೆ ನೀಡುವಂತೆ ಸೂಚಿಸಿದ ಅವರು, ಬಾಣಂತಿಯರು ಪ್ರತಿ ಗರ್ಭ ಧರಿಸುವುದಕ್ಕೆ ಮುನ್ನ ಕನಿಷ್ಟ ಅಂತರ ಹೊಂದಿದ್ದು, ಕಾಲಕಾಲಕ್ಕೆ ರಕ್ತದೊತ್ತಡ, ಮಧುಮೇಹ ಮುಂತಾದ ತಪಾಸಣೆಗಳನ್ನು ಮಾಡಿಸುವಂತೆ ಅವರು ಸಲಹೆ ನೀಡಿದರು.
ಕೆಲವು ಬಾಣಂತಿಯರ ಸಾವಿನ ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಇರುವ ಬಗ್ಗೆ ದೂರುಗಳಿದ್ದು, ವಾಸ್ತವ ವರದಿಯನ್ನು ಪಡೆದು ಕೂಡಲೇ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್‌ಅವರಿಗೆ ಸೂಚಿಸಿದ ಅವರು, ಬಾಣಂತಿಯರ ಕೆಲವು ಸಾವಿನ ಪ್ರಕರಣಗಳಲ್ಲಿ ಕೊನೆ ಕ್ಷಣದಲ್ಲಿ ನೆರೆಯ ಜಿಲ್ಲೆಗಳಿಂದ ಶಿಫಾರಸ್ಸುಗೊಂಡ ಪ್ರಕರಣಗಳೇ ಆಗಿರುವುದು ಕಂಡುಬರುತ್ತದೆ. ಆದಾಗ್ಯೂ ವೈದ್ಯರು ಸಕಾಲಿಕವಾಗಿ ಚಿಕಿತ್ಸೆ ನೀಡುವ ಮೂಲಕ ಬಾಣಂತಿಯ ಸಾವಿನ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಬೇಕೆಂದು ಅವರು ಸೂಚಿಸಿದರು.
ರಾಜ್ಯದಾದ್ಯಂತ ಇಂತಹ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಸರ್ಕಾರವೂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬರದಂತೆ, ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ತಾಯಿ ಮಗುವಿನ ಸುರಕ್ಷತೆಗೆ ವಿಶೇಷ ಕಾಳಜಿ ವಹಿಸುವಂತೆ ಅವರು ವೈದ್ಯರಿಗೆ ಸೂಚಿಸಿದರು.
ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವ ಬಹುಸಂಖ್ಯಾತರು ಸಾಮಾನ್ಯ ಕುಟುಂಬದವರಾಗಿರುತ್ತಾರೆ. ಅಂತಹವರಿಗೆ ಸಕಾಲದಲ್ಲಿ ಚಿಕಿತ್ಸೆದೊರೆಯುವಂತೆ ನೋಡಿಕೊಳ್ಳಬೇಕು. ನಿಯಮಾನುಸಾರ ಹಾಗೂ ಅಗತ್ಯವಿದ್ದಲ್ಲಿ ತುರ್ತು ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಸಿಬ್ಬಂಧಿ ಗಮನಹರಿಸುವಂತೆ ಅವರು ಸೂಚಿಸಿದ ಅವರು ಚಿಕಿತ್ಸೆ ನೀಡುವಲ್ಲಿ ವೈದ್ಯರಿಂದ ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳಬೇಕು. ಚಕಿತ್ಸೆಗೆ ದಾಖಲಾಗುವ ಪ್ರತಿ ರೋಗಿಯ ಬಗ್ಗೆಯೂ ಇದೇ ಕಾಳಜಿ ವಹಿಸುವಂತೆ ಸಾವು ನಿಯಂತ್ರಿಸಿ, ಅಮೂಲ್ಯ ಜೀವ ಉಳಿಸುವಂತೆ ಅವರು ಸೂಚಿಸಿದರು.
ತುರ್ತು ಸಂದರ್ಭಗಳಲ್ಲಿ ರಕ್ತ ದೊರೆಯುವಂತೆ ಎಲ್ಲಾ ತಾಲೂಕು ಆಸ್ಪತ್ರೆಗಳ ,ಮುಖ್ಯಾಧಿಕಾರಿಗಳು ಕ್ರಮವಹಿಸಿ, ಅಲ್ಲದೇ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಅಡಚಣೆಗಳಿದ್ದಲ್ಲಿ ಕೂಡಲೇ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಲಿಖಿತವಾಗಿ ಮಾಹಿತಿ ನೀಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್, ಡಾ|| ಸಿದ್ದನಗೌಡ, ಆರ್.ಸಿ.ಹೆಚ್.ಡಾ||ಮಲ್ಲಪ್ಪ, ಡಾ|| ನಾಗರಾಜನಾಯ್ಕ್, ಡಾ|| ಸ್ಮೃತಿ, ಡಾ|| ಹೇಮಾಮಹೇಶ್‌ಸೇರಿದಂತೆ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
Gurudutt Hegde ಬಾಣಂತಿ & ಅಭಿಜಾತ ಶಿಶುಗಳ ಚಿಕಿತ್ಸೆಯಲ್ಲಿ ವೈದ್ಯಾಧಿಕಾರಿ ಗಳು ನಿರ್ಲಕ್ಷ್ಯ ತೋರದೇ ಮಾನವೀಯ ಸೇವೆ ನೀಡಿ- ಗುರುದತ್ತ ಹೆಗಡೆ
Date: