Shivaganga Yoga Centre ಒತ್ತಡಮುಕ್ತ ಜೀವನಶೈಲಿ ರೂಢಿಸಿಕೊಳ್ಳಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಅತ್ಯಂತ ಸಹಕಾರಿಯಾಗಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಅಭ್ಯಾಸದಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ ಎಂದು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆ ಯೋಗ ಶಿಕ್ಷಕ ಜಿ.ಎಸ್.ಓಂಕಾರ್ ಹೇಳಿದರು.
ಶಿವಮೊಗ್ಗ ನಗರದ ಶ್ರೀರಾಮ ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘದ ರಾಘವ ಸಭಾಂಗಣದಲ್ಲಿ ಯೋಗ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ, ಯೋಗ ನಿತ್ಯ ಅಭ್ಯಾಸ ಮಾಡುವುದರಿಂದ ಮಾನಸಿಕ ಸಾಮರ್ಥ್ಯ ವೃದ್ಧಿಸುವ ಜತೆಯಲ್ಲಿ ನೆಮ್ಮದಿ ಜೀವನಶೈಲಿ ನಮ್ಮದಾಗುತ್ತದೆ ಎಂದು ತಿಳಿಸಿದರು.
ಶಿವಗಂಗಾ ಯೋಗಕೇಂದ್ರದಿಂದ ನಗರದ 33 ಕಡೆ ಉಚಿತವಾಗಿ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಒತ್ತಡ ನಿರ್ವಹಣೆ ಬಗ್ಗೆ ಉಚಿತ ತರಗತಿಗಳನ್ನು ನಡೆಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಯೋಗ ಶಿಕ್ಷಕ ಎಚ್ ಕೆ ಹರೀಶ್ ಮಾತನಾಡಿ, ಸನಾತನ ಕಾಲದಿಂದಲೂ ಸಹ ಇರುವ ಯೋಗ, ಪ್ರಾಣಾಯಾಮ, ಧ್ಯಾನವು ನಮ್ಮ ದೈಹಿಕ ಶಕ್ತಿಯನ್ನು ವೃದ್ಧಿ ಮಾಡುವುದರ ಜತೆಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನಿರಂತರವಾಗಿ ಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಶಿಕ್ಷಕ ವಿಜಯ ಕೃಷ್ಣ ಮಾತನಾಡಿ, ಪ್ರತಿ ನಿತ್ಯ ಯೋಗ ಅಭ್ಯಾಸದಿಂದ ಮನಸ್ಸು ನಿರ್ಮಲವಾಗುವುದರ ಜತೆಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಎಲ್ಲ ಖಾಯಿಲೆಗಳಿಂದ ರೋಗ ಮುಕ್ತರಾಗುತ್ತೇವೆ. ಉಸಿರಾಟ ಮತ್ತು ಪ್ರಾಣಾಯಾಮದಿಂದ ನಮ್ಮ ಮೆದುಳು ಸಕ್ರಿಯವಾಗಿ ಚುರುಕಾಗುತ್ತದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಯೋಗಪಟುಗಳು ಸಾಮಾನ್ಯವಾಗಿ ಕಾಯಿಲೆಯಿಂದ ಬಳಲುವವರ ಸಂಖ್ಯೆ ಕಡಿಮೆ ಎಂದು ನುಡಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಮಹೇಶ್, ಶ್ರೀನಿವಾಸ್, ಹಿರಿಯ ಯೋಗಪಟು ಶಶಿಧರ್, ವಿಕ್ರಂ, ಶಂಕರ್, ಆನಂದ್, ಕಾಟನ್ ಜಗದೀಶ್, ಸುಬ್ರಮಣಿ. ಶಿವಕುಮಾರ್, ಸುಜಾತ, ಸೌಮ್ಯ, ಶೋಭಾ, ಉಷಾ, ಸುಮಾ, ಶೈಲಜಾ, ಪ್ರೇಮ ಶ್ರೀನಿವಾಸ್ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.