Vidhusekhara Bharati Swamiji ಹೊಸಪೇಟೆ ನಗರದಲ್ಲಿರುವ ಶ್ರೀ ಚಿಂತಾಮಣಿ ಮಠಕ್ಕೆ ಶೃಂಗೇರಿ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಚಿತ್ತೈಸಿದ್ದರು. ಶ್ರೀ ಚಿಂತಾಮಣಿ ಮಠದ ಪ್ರಸ್ತುತ 31ನೆ ಪೀಠಾಧಿಪತಿಗಳಾಗಿರುವ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.
ಜಗದ್ಗುರುಗಳು ಶ್ರೀಮಠದ ಕಾಶೀ ವಿಶ್ವೇಶ್ವರ ದೇವರಿಗೆ ಹಾಗೂ ಶಂಕರಾಚಾರ್ಯರಿಗೆ ಪುಷ್ಪ ಸಮರ್ಪಿಸಿ ಮಂಗಳಾರತಿ ನೆರವೇರಿಸಿದರು. ನಂತರದಲ್ಲಿ ಯತಿದ್ವಯರಿಬ್ಬರೂ ಗೋ ಶಾಲೆ ಕಡೆ ನಡೆದರು.
ಚಿಂತಾಮಣಿ ಮಠದಲ್ಲಿ 30 ಶುದ್ಧ ದೇಸಿ ಹಸುಗಳನ್ನು ಸಾಕಲಾಗಿದೆ. ಗುರುಗಳು ಗೋವುಗಳಿಗೆ ಪೂಜೆ ಸಲ್ಲಿಸಿ ಪುಟ್ಟ ಕರುಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಜಗದ್ಗುರುಗಳು “ಝಾನ್ಸಿ” ಎಂಬ ಪುಟ್ಟ ಕರುವನ್ನು ಮುದ್ದಾಡಿದರು.
ಇಂದಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಿಂತಾಮಣಿ ಮಠದ ಬಾಲ ಗುರುಕುಲಮ್ ವಿದ್ಯಾರ್ಥಿಗಳು ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಮುಂದೆ ಕಂಠಸ್ಥವಾಗಿದ್ದ ಭಗವದ್ಗೀತೆಯ 12ನೆ ಅಧ್ಯಾಯದ ಸಂಪೂರ್ಣ ಶ್ಲೋಕಗಳನ್ನು ಪಾರಾಯಣ ಮಾಡಿದರು. ಶ್ರೀ ಮಾತಾ ಸ್ತೋತ್ರ ಪಾರಾಯಣ ಸಮಿತಿಯವರು ಗುರುದ್ವಯರ ಮುಂದೆ ಭಜನೆ ಮಾಡಿದರು.
ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಏನೆಂದರೆ ಅದ್ವೈತ ಪರಂಪರೆಗೆ ಸೇವೆ ಸಲ್ಲಿಸಿದ ಐದು ಸಾಧಕರಿಗೆ “ಅದ್ವೈತ ಚಿಂತಾಮಣಿ ” ಎಂಬ ಬಿರುದನ್ನು ನೀಡಿ 10,000 ರೂ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಅದ್ವೈತ ಚಿಂತಾಮಣಿಗಳೆಂದು ಬಿರುದು ಪಡೆದ ಸನ್ಮಾನಿತರು:-
- ಶ್ರೀ ಸಿ. ಕೃಷ್ಣ ಭಟ್ಟರು
- ಶ್ರೀ ಹಿತ್ಳಲ್ಲಿ ಸೂರ್ಯನಾರಾಯಣ ಭಟ್ಟರು
- ಶ್ರೀ ಜಿ. ಆರ್. ಪಾಟೀಲರು
- ಶ್ರೀ ರಂಗೋಪಂತ ನಾಗರಾಜ್ ರಾವ್ ರವರು
- ಶ್ರೀ ಶ್ರೀಕಾಂತ್ ಋಗ್ವೇದಿಯವರು
Vidhusekhara Bharati Swamiji ಶ್ರೀ ಚಿಂತಾಮಣಿ ಗುರುಗಳು ಹೊಸಪೇಟೆ ನಗರದ ವಿಪ್ರರನ್ನು ಒಗ್ಗೂಡಿಸಿ “ಜಗದ್ಗುರುಗಳ ವಿಜಯನಗರ ಯಾತ್ರಾ ಸಮಿತಿಯನ್ನು ರಚಿಸಿ ತನ್ಮೂಲಕ ವಿಜಯನಗರ ಪ್ರಾಂತ್ಯದ ಯಾತ್ರೆಯು ಸಂಗೋಪಾಂಗವಾಗಿ ನಡೆಯುವಂತೆ ಮಾಡಿದ್ದಾರೆ.
ಶ್ರೀ ಚಿಂತಾಮಣಿ ಮಠವನ್ನು ಕಂಡು ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಮಾತನಾಡಿದರು.
ಚಿಂತಾಮಣಿ ಸ್ವಾಮಿಗಳು ನಮಗೆ ಪ್ರೀತಿ ಪಾತ್ರರು. ಪೂರ್ವಶ್ರಮದಲ್ಲಿಯೇ ತಮ್ಮ ಲೌಕಿಕ ವೃತ್ತಿಯನ್ನು ತೊರೆದು ಗುರುಸೇವೆ ತತ್ತ್ವಪ್ರಚಾರವನ್ನೇ ತಮ್ಮ ಜೀವನದ ಮುಖ್ಯ ಗುರಿಯನ್ನಾಗಿಸಿಕೊಂಡಿದ್ದರು. ಅಂತಹವರು ಈ ಪ್ರಾಂತ್ಯಕ್ಕೆ ಪೀಠಾಧಿತಿಗಳಾಗಿರುವುದು ಅತ್ಯಂತ ಸಂತೋಷಕರವಾದ ವಿಷಯ. ಶ್ರೀ ಚಿಂತಾಮಣಿ ಮಠಕ್ಕೆ ಬಹಳ ಪ್ರಾಚೀನವಾದ ಇತಿಹಾಸವಿದೆ. ಇಲ್ಲಿನ ಹಿಂದಿನ ಯತಿಗಳೆಲ್ಲ ತಪಸ್ಸು ಅನುಷ್ಠಾನವಂತರು. ಚಿಂತಾಮಣಿ ಸ್ವಾಮಿಗಳು ನಮ್ಮ ಬಳಿ ಆಗಾಗ ಬಂದು ಶಾಂಕರ ತತ್ತ್ವ ಪ್ರಚಾರದ ಬಗ್ಗೆ ಹಾಗೂ ಇತರೆ ಕಾರ್ಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ತತ್ತ್ವ ಶಂಕರದ ಮೂಲಕ ಅದ್ವೈತ ಪ್ರಚಾರ, ವಿದ್ಯಾರಣ್ಯರ ಬಗ್ಗೆ ಕೂಡ ದೃಶ್ಯಾವಳಿಗಳನ್ನು ಮಾಡಿದ್ದಾರೆ. ಚಿಂತಾಮಣಿ ಮಠವು ತಾತ್ತ್ವಿಕವಾಗಿ ಅಭಿವೃದ್ಧಿಯಾಗಿದೆ. ಲೌಕಿಕವಾಗಿಯೂ ಹೀಗೆ ಅಭಿವೃದ್ಧಿಯಾಗಲಿ. ಕೈಯಲ್ಲಿ ಸಾಧ್ಯವಾದವರು ಮಠದ ಕಾರ್ಯಗಳಿಗೆ ಸಹಾಯ ಮಾಡಬೇಕು. ಆಗದಿದ್ದರೆ ಸುಮ್ಮನಿರಬೇಕು. ತೊಂದರೆ ಮಾಡುವುದು, ಅಡ್ಡಿಮಾಡುವುದು, ಅಪಪ್ರಚಾರ ಮಾಡಿದರೆ ಅವರು ತಮ್ಮ ವಿನಾಶಕ್ಕೆ ತಾವೇ ಶಂಕುಸ್ಥಾಪನೆ ಮಾಡಿಕೊಂಡಂತೆ ಎಂಬ ಅನುಗ್ರಹದ ನುಡಿಗಳನ್ನಾಡಿದರು.
ಚಿಂತಾಮಣಿ ಮಠದ ಶ್ರೀಗಳು :- ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬೇರೆ ಯಾರೂ ಅಲ್ಲ…ಜಗದ್ಗುರು ಶ್ರೀಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳೇ ಎಂದು ಕಥೆಯ ಮೂಲಕ ತಿಳಿಸಿಕೊಟ್ಟರು.
ಶೃಂಗೇರಿ ಮಠದ ನೂತನ ಆಡಳಿತಾಧಿಕಾರಿಗಳಾದ ಗುರುಸೇವ ನಿರತ ಪಿ.ಎ. ಮುರಳಿ ಯವರಿಗೆ ಚಿಂತಾಮಣಿ ಮಠದ ಆಡಳಿತಾಧಿಕಾರಿಗಳಾದ ಶ್ರೀಕಾಂತ್ ಋಗ್ವೇದಿಯವರು ಸನ್ಮಾನ ಮಾಡಿದರು.
ಸರಿಸುಮಾರು ಚಿಂತಾಮಣಿ ಮಠದಲ್ಲಿ ಒಂದು ಸಾವಿರ ಜನ ಸೇರಿದ್ದರು. ಎಲ್ಲರೂ ಶಂಕರಾಚಾರ್ಯರಿಗೆ ಜೈ ಕಾರ ಹಾಕಿ, ಮಹಾಪ್ರಸಾದ ಸ್ವೀಕರಿಸಿದರು
ವರದಿ
ಮುರುಳೀಧರ್ ನಾಡಿಗೇರ್