Mathura Paradise ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಮಾಣ ಪತ್ರ ಹಾಗೂ ಎಫ್‌ಒಎಸ್‌ಟಿಒಸಿ ಪ್ರಮಾಣ ಪತ್ರ ಪಡೆದ ನಂತರ ಟ್ರೇಡ್ ಲೈಸೆನ್ಸ್ ಪಡೆಯುವ ಅವಶ್ಯಕತೆ ಇಲ್ಲ ಎಂದು ಶಾಸಕ ಡಿ.ಎಸ್. ಅರುಣ್ ಹೇಳಿದ್ದಾರೆ.
ಅವರು ಶಿವಮೊಗ್ಗ ನಗರದ ಮಥುರಾ ಪ್ಯಾರಡೈಸ್ ಹೋಟೆಲ್ ನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಶಿವಮೊಗ್ಗ ಜಿಲ್ಲೆ ಇವರ ಸಹಯೋಗದಲ್ಲಿ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಆಹಾರ ಉದ್ಯಮಿದಾರರು ಮಾರಾಟ ಮಾಡುವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1954 ರಲ್ಲಿ ಇದ್ದ ಅನೇಕ ಕಾನೂನುಗಳು ಈಗಲೂ ಇವೆ. ಡಿಜಿಟಲ್ ಯುಗದಲ್ಲಿ ಕಾಲ ಕಾಲಕ್ಕೆ ಕಾನೂನುಗಳು ಹೆಚ್ಚಳ ಆಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕಾನೂನುಗಳು ಯಾವತ್ತು ಹೇಗೆ ಬಳಕೆಯಾಗಬೇಕೆಂಬ ಅರಿವು ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ವ್ಯಾಪಾರಸ್ಥರೊಂದಿಗೆ ನಿರಂತರ ಆತ್ಮೀಯತೆಯಿಂದ ಇದ್ದು, ಮಾಡಬೇಕು ಎಂದರು.
ಅಧಿಕಾರಿಗಳು ವಿಲನ್ ಆಗಬಾರದು. ಕೆಳ ಹಂತದ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿರಬೇಕು. ಇವತ್ತಿನ ದಿನಮಾನದಲ್ಲಿ ಉದ್ಯಮಿಗಳು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲಾ ಕಾನೂನುಗಳನ್ನು ಅನುಷ್ಠಾನ ಮಾಡಲು ಹೊರಟೆ ಒಂದು ಇಡ್ಲಿಗೆ ೨೫ ರೂ. ಕೊಡಬೇಕಾಗುತ್ತದೆ. ದೇಶ ಉಳಿಯಬೇಕಾದರೆ ಎಲ್ಲವನ್ನೂ ಸರ್ಕಾರ ಮಾಡಲಾಗುವುದಿಲ್ಲ. ನಮ್ಮ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಕಾಯ್ದುಕೊಂಡು ಬದಲಾವಣೆ ಮಾಡಬೇಕು ಎಂದರು.
ಮಧ್ಯಮವರ್ಗಕ್ಕೆ ಮತ್ತು ಬಡವರ್ಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ನಿಯಮ ಸರಳೀಕರಣ ಮಾಡಬೇಕು. ಸರ್ಕಾರಗಳಿಗೆ ಕಿವಿ ಕಣ್ಣು ಇರಲ್ಲ. ಮಾರ್ಚ್ 14ರ ಬಜೆಟ್ ಮಂಡನೆ ಮುನ್ನ ನಮ್ಮ ಹಕ್ಕನ್ನು ನಾವು ಕೇಳಬೇಕು. ಸರ್ಕಾರದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದಿದ್ದರ ಅವು ಉಳಿಯುವುದಿಲ್ಲ ಎಂಬುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ನಿಯಮಾವಳಿಗಳನ್ನು ರೂಪಿಸಬೇಕು ಎಂದರು.
Mathura Paradise ಆಹಾರ ಸಂಸ್ಕರಣಾ ಮತ್ತು ಪ್ರಮಾಣಪತ್ರ ಕೇಂದ್ರದ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ಮಾತನಾಡಿ, ೨೦೧೧ರಲ್ಲೇ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರದ ಕಾನೂನು ಬಂದಿದೆ. ಉದ್ಯಮಿಗಳಿಗೆ ಇದರ ಅರಿವು ಇರಲಿಲ್ಲ. ೨೦೨೦ರಲ್ಲಿ ಇದನ್ನು ಕಡ್ಡಾಯಗೊಳಿಸಲಾಯಿತು. ಕೊರೋನಾದಿಂದಾಗಿ ಸ್ವಲ್ಪಮಟ್ಟಿಗೆ ಅನುಷ್ಠಾನ ತಡವಾಗಿದೆ. ಈ ಕಾಯ್ದೆ ಪ್ರಕಾರ ವಾರ್ಷಿಕ ೧೨ಲಕ್ಷ ರೂ.ಗಿಂತ ಒಳಗೆ ವ್ಯವಹಾರವಿದ್ದರೆ ನೋಂದಣಿ ಕಡ್ಡಾಯ. ಅದಕ್ಕಿಂತ ಹೆಚ್ಚಿನ ವ್ಯವಹಾರವಿದ್ದರೆ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದ್ದು,2017ರ ಕಾಯ್ದೆಯಂತೆ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ ಎಂದರು.
ಆಹಾರ ಉದ್ಯಮ ನಡೆಸುವವರು ಕೂಡ ಒಂದು ರೀತಿಯಲ್ಲಿ ವೈದ್ಯರೇ ಆಗಿರುತ್ತಾರ. ನೀವು ಅಡುಗೆ ಮನೆಯಲ್ಲಿ ತಯಾರಿಸುವ ಖಾದ್ಯಗಳು ಗುಣಮಟ್ಟದಲ್ಲಿರಬೇಕು. ಮತ್ತು ಅದಕ್ಕಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಈ ಕಾರ್ಯಾಗಾರದಲ್ಲಿ ತಿಳಿಸಲಿದ್ದು, ಎಲ್ಲರೂ ಇದರ ಸದುಪಯೋಗಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಉಪಾಧ್ಯಕ್ಷ ಜಿ. ವಿಜಯಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರ್ ನಾರಾಯಣಹೊಳ್ಳ, ಆಹಾರ ಸುರಕ್ಷತಾ ಅಧಿಕಾರಿಗಳಾದ ಸೋಮೇಶ್, ಗುರುರಾಜ್, ಸದಾಶಿವಪ್ಪ. ಶಶಿಕುಮಾರ್, ತರಬೇತಿದಾರರಾದ ಸವಿತಾ, ಸಮುದಾಯ ಅಧಿಕಾರಿಗಳಾದ ಅನುಪಮಾ, ವಾಣಿಜ್ಯ ಕೈಗಾರಿಕಾ ಸಂಘದ ಕಾಯದರ್ಶಿ ಸುರೇಶ್, ಜಿಲ್ಲಾ ಸಂಯೋಜಕರಾದ ಬಿ.ಟಿ. ಹನುಮಂತಯ್ಯ, ಶುಭಂ ಹೋಟೆಲ್ ಮಾಲೀಕರಾದ ಉದಯ್ ಕಡಂಬ ಮೊದಲಾದವರಿದ್ದರು.