Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ಸ್ಥಳೀಯ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 13-01-2025, ಸೋಮವಾರದಂದು ಜಿಲ್ಲಾ ಸ್ಕೌಟ್ ಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದರ 163ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀ ಡಾ. ರವಿ ಕಿರಣ್, ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಪ್ರಜ್ವಲಿಸಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ಜೀವನದಲ್ಲಿ ಆಗಿ ಹೋದ ಘಟನೆಗಳು, ಅನುಭವಿಸಿದ ನೋವು ಅವಮಾನ ಮತ್ತು ಅದನ್ನು ಎದುರಿಸಿದ ರೀತಿಯನ್ನು ಮಕ್ಕಳಿಗೆ ಕಣ್ಣು ಕಟ್ಟುವ ರೀತಿಯಲ್ಲಿ ಹೇಳಿದರು. ಅವರ ಉದ್ಘೋಶ ” ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ” ಸರ್ವ ಮಕ್ಕಳಿಂದ ಹೇಳಿಸಿ, ಅದರಂತೆ ಜೀವನದಲ್ಲಿ ಮುಂದೆ ಗುರಿ ಇಟ್ಟುಕೊಂಡು ಹಿಂದೆ ಗುರುವಿನ ಅನುಗ್ರಹದಿಂದ ಜೀವನದಲ್ಲಿ ಮುಂದೆ ಬರಲು ತಿಳಿಸಿದರು.
ಕಾರ್ಯಕ್ರಮವು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ಎಸ್. ಜಿ. ಆನಂದ್ ಜಿಲ್ಲಾ ಆಯುಕ್ತರು ( ಸ್ಕೌಟ್ಸ್ )ಸರ್ವರನ್ನು ಸ್ವಾಗತಿಸಿದರು. ಕೇಂದ್ರ ಸ್ಥಾನಿಕ ಆಯುಕ್ತ ಶ್ರೀ ಜಿ. ವಿಜಯಕುಮಾರ್ ಅತಿಥಿಗಳನ್ನು ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ರವರು ತಮ್ಮ ಅಧ್ಯಕ್ಷಿಯ ನುಡಿಯಲ್ಲಿ ಸ್ವಾಮಿ ವಿವೇಕಾನಂದರ ದೃಷ್ಟಿಕೋಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಧ್ಯೆಯವಾದ ” ಸಮಾಜಕ್ಕಾಗಿ ಬಾಳು ” ಎನ್ನುವಂತೆ ಸಮಾಜದಲ್ಲಿ ಎಲ್ಲೆಲ್ಲಿ ಅವಕಾಶ ಸಿಗುವುದೋ ಅಲ್ಲಲ್ಲಿ ಸೇವೆ ಸಲ್ಲಿಸಿ ಭಾರತ ಮಾತೆಗೆ ನಿಮ್ಮ ಕೊಡುಗೆ ಕೊಡಿ ಎಂದು ಮಕ್ಕಳಿಗೆ ಕರೆ ನೀಡಿದರು.
Bharat Scouts and Guides ಜಿಲ್ಲಾ ಸಹಕಾರ್ಯದರ್ಶಿ ಶ್ರೀ ವೈ. ಆರ್. ವೀರೇಶಪ್ಪ ಸರ್ವರಿಗೂ ವಂದಿಸಿದರು. ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಪವಾರ್, ಸಹಾಯಕ ಜಿಲ್ಲಾ ಆಯುಕ್ತ ಶ್ರೀ ಮಲ್ಲಿಕಾರ್ಜುನ ಕಾನೂರ್, ಕೇಂದ್ರ ಸ್ಥಾನಿಕ ಆಯುಕ್ತ ಶ್ರೀ ಎಂ. ಕೆ. ಕೃಷ್ಣಸ್ವಾಮಿ, ಗೈಡ್ ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ ರಾಜಕುಮಾರ್, ಸ್ಕೌಟ್ ಮಾಸ್ಟರ್ ಶ್ರೀ ಅಣ್ಣಪ್ಪ ಒಂಟಮಾಳಗಿ, ಕಛೇರಿ ಸಿಬ್ಬಂದಿ ಶ್ರೀ ದೇವಯ್ಯ, ಭರತ್ ಉಪಸ್ಥಿತರಿದ್ದರು.
ನಗರದ ವಿವಿಧ ಶಾಲಾ, ಕಾಲೇಜಿನಿಂದ 150 ಮಕ್ಕಳು ಭಾಗವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಜೇಶ್ ವಿ ಅವಲಕ್ಕಿ ರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.