Viyananda Saraswati Swamiji ಮಕ್ಕಳು ಹಾಗೂ ಯುವಜನರಿಗೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಕಲ್ಲಗಂಗೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ನಗರದಲ್ಲಿ ಶ್ರೀ ಸಾಯಿ ಸ್ಕಂದ ಪೂರ್ವ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಉತ್ತಮ ಆದರ್ಶ ಗುಣಗಳನ್ನು ಬೆಳೆಸಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಉತ್ತಮ ಉದ್ದೇಶಗಳನ್ನು ಒಳಗೊಂಡ ಸೃಜನಶೀಲ ಸಂಸ್ಥಾಪಕರಿಂದ ಸ್ಥಾಪಿತವಾದ ವಿದ್ಯಾ ಸಂಸ್ಥೆಯು ಮೌಲ್ಯ ಭರಿತ ಶಿಕ್ಷಣ ತತ್ವಗಳ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಹಾರೈಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವುದು ಪ್ರಸ್ತುತ ದಿನಗಳಲ್ಲಿ ಕಷ್ಟವೇ ಆಗಿದೆ. ಆದರೆ ಸದಾ ಕ್ರೀಯಾಶೀಲರಾಗಿ ಆದರ್ಶ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವ ಪಾರ್ವತಿ ಶ್ರೀನಿವಾಸ್ ಅವರು ಸೃಜನಶೀಲ ಚಟುವಟಿಕೆಗಳಿಂದ ವಿದ್ಯಾ ಸಂಸ್ಥೆ ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭಕೋರಿದರು.
Viyananda Saraswati Swamiji ಶಾಲೆಯ ಸಂಸ್ಥಾಪಕಿ ಪಾರ್ವತಿ ಶ್ರೀನಿವಾಸ್ ಮಾತನಾಡಿ ಶಾಲೆಯ ಪ್ರಗತಿ ಹೆಜ್ಜೆಯ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಸಾಹಿತಿ ಶ್ರೀರಂಜಿನಿ ದತ್ತಾತ್ರಿ ಮಾತನಾಡಿ, ಮೌಲ್ಯಯುಕ್ತ ಶಾಲೆ ಕಟ್ಟುವ ಆಶಯಗಳನ್ನು ಮನದಲ್ಲಿ ಇಟ್ಟುಕೊಂಡು ಪಾರ್ವತಿ ಶ್ರೀನಿವಾಸ್ ಅವರು ಶಾಲೆ ಆರಂಭಿಸಿದ್ದಾರೆ. ಅವರ ಆಶಯ ನೆರವೇರಲಿ, ಭಾರತೀಯ ಪರಂಪರೆಯ ಅನುಷ್ಠಾನ ಶಾಲಾ ಚಟುವಟಿಕೆಗಳ ಮೂಲಕ ಹೊರಹೊಮ್ಮಲಿ ಎಂದು ಆಶಿಸಿದರು. ಅಶ್ವಿನಿ ಕಳಸೆ, ಶ್ವೇತಾ ಪ್ರಕಾಶ್, ನರಸಿಂಹ ಸಾಂಬ್ರಾಣಿ ಮತ್ತಿತರರು ಉಪಸ್ಥಿತರಿದ್ದರು.