Sringeri Shivaganga Mutt ಶೃಂಗೇರಿಯಲ್ಲಿ ಸುವರ್ಣ ಸೃಷ್ಟಿಸ್ತವ ಸ್ತೋತ್ರ ತ್ರಿವೇಣಿ ಮಹಾಸಂಗಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಯಿತು. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಸನ್ಯಾಸ ಸ್ವೀಕರಿಸಿ ಐವತ್ತು ವರ್ಷ ಪೂರ್ಣವಾದಾಗ ಚಿಕ್ಕಮಗಳೂರು ಜಿಲ್ಲೆಯ ಭಕ್ತರು ಐವತ್ತು ಸಹಸ್ರ ಸಂಖ್ಯೆಯಲ್ಲಿ ಒಂದಾಗಿ ಏಕ ಕಂಠದಿಂದ ಶಾಂಕರ ವಿರಚಿತ ಸ್ತೋತ್ರ ಪಠಿಸಿದರು. ವಿಶೇಷ ಎಂದರೆ ಇದರಲ್ಲಿ ಮಾತೆಯರೇ ಅಧಿಕ ಸಂಖ್ಯೆಯಲ್ಲಿದ್ದರು.ಕಳೆದ ಒಂದು ದಶಕದಿಂದ ಯಾವುದೇ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳದ ಮತ್ತು ಅನುಗ್ರಹ ಆಶೀರ್ವಚನ ನೀಡದ ಶ್ರೀ ಭಾರತೀತೀರ್ಥರು ಈ ಸಭೆಗಾದರೂ ಆಗಮಿಸಿ ಭಕ್ತರನ್ನು ಅನುಗ್ರಹಿಸುತ್ತಾರಾ ಎಂಬ ಪ್ರಶ್ನೆಯಂತೂ ಇದ್ದೇ ಇತ್ತು. ಕಾರ್ಯಕ್ರಮಕ್ಕೆ ಮೊದಲು ಮಠದ ಪಾರಂಪರಿಕ ಗೌರವಗಳೊಂದಿಗೆ ರಾಜ್ಯದ ಒಂಬತ್ತು ಯತಿಗಳೊಂದಿಗೆ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನ ಮಾತ್ರ ಆಗಮಿಸಿದಾಗ ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ ಕೆಲವೇ ಕ್ಷಣದಲ್ಲಿ ತೆರೆದ ವಾಹನದಲ್ಲಿ ಅಲ್ಲಿಗೆ ಶ್ರೀ ಭಾರತೀತೀರ್ಥರ ಆಗಮನವಾಯಿತು. ಅವರು ವೇದಿಕೆಯತ್ತ ಉಳಿದವರೊಂದಿಗೆ ಚಿತ್ತೈಸಿದರು. ಮಠದ ಪರಿಚಾರಕರ ಕೈಯಲ್ಲಿದ್ದ ಶ್ವೇತ ಛತ್ತರವನ್ನು ಆಗ ಮಠಾದಿಪತಿಗಳಿಬ್ಬರು ತೆಗೆದುಕೊಂಡು ತಾವೇ ಹಿಡಿಯುವ ಮೂಲಕ ಶ್ರೇಷ್ಠ ಗುರುಗಳಿಗೆ ಭಕ್ತಿ ಸಮರ್ಪಿಸಿದರು. ಜಗದ್ಗುರುಗಳಿಂದ ದೀಪ ಪ್ರಜ್ವಲನ ನಡೆಯಿತು. ಎಲ್ಲ ಸ್ವಾಮಿಗಳೂ ಮತ್ತೊಮ್ಮೆ ವೇದಿಕೆಯಲ್ಲೇ ಜಗದ್ಗುರುಗಳಿಗೆ ಪ್ರಣಾಮ ಸಲ್ಲಿಸಿದರು.
ಸೇರಿದ್ದ ಭಕ್ತರಿಗೆ ಜಗದ್ಗುರುಗಳೇ ಶಿವ ಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಪಠಣ ಆರಂಭಿಸಿ ಅನುಗ್ರಹಿಸಿದರು. ಸ್ತೋತ್ರ ಮಾಲಾ ಮುಗಿಯುತ್ತಿದ್ದಂತೆ ಜಗದ್ಗುರುಗಳ ಆಶೀರ್ವಚನಕ್ಕೆ ಕೋರಲಾಯಿತು. ತಮ್ಮ ದಶಕಗಳ ಪದ್ದತಿಯ ಹೊರತಾಗಿ ಜಗದ್ಗುರುಗಳು ಮಾತು ಆರಂಭಿಸಿದರು.ಅವರು ಹೇಳಿದ್ದು ಎರಡೇ ಮಾತು.”ಸನ್ಯಾಸ ಸ್ವೀಕರಿಸಿದ ಐವತ್ತನೇ ವರ್ಷ ಸಂಧರ್ಭ ಶ್ರೀ ಶಂಕರರು ರಚಿಸಿದ ಸ್ತೋತ್ರ ಸಮರ್ಪಣೆ ಶಿಷ್ಯ ಸ್ವಾಮಿಗಳ ಪ್ರೇರಣೆಯಿಂದ ನಡೆಯುತ್ತಿರುವುದು ನಮಗೆ ಸಂತೋಷ ಸಂದಿದೆ. ಎಲ್ಲರಿಗೂ ಪರಿಪೂರ್ಣ ಆಶೀರ್ವಾದಗಳು,ಈ ಸಭೆಯನ್ನು ಶಿಷ್ಯ ಸ್ವಾಮಿಗಳು ಮುಂದುವರೆಸುತ್ತಾರೆ ಎಂದು ಹೇಳಿ ತಾವು ಕುಳಿತ ಸುವರ್ಣ ಸಿಂಹಾಸನದಿಂದ ಕೆಳಗಿಳಿದರು. ಸೇರಿದ್ದ ಜನ ಸಮುದ್ರಕ್ಕೆ ಅಭಯ ಹಸ್ತ ತೋರುತ್ತಾ ಬಂದಂತೆ ನಿರ್ಗಮಿಸಿ ಬಿಟ್ಟರು. ಅವರೆಂದೂ ಈ ಸುವರ್ಣ ಸಿಂಹಾಸನದಲ್ಲಿ ಕುಳಿತು ಇಷ್ಟಾದರೂ ಮಾತನಾಡಿರಲಿಲ್ಲ. ತಮ್ಮ ಪ್ರಿಯ ಭಕ್ತರು ನೀಡಿದ ಈ ಸುವರ್ಣ ಸಿಂಹಾಸನವನ್ನು ನವರಾತ್ರಿಯ ದರ್ಬಾರಿನಲ್ಲಿ ಅವರು ಬಳಸುತ್ತಿದ್ದುದು ಬಿಟ್ಟು ಬೇರೆಲ್ಲೂ ಬಳಸಿದವರೇ ಅಲ್ಲ. ಅದರ ಮೇಲೆ ಅವರ ಹೊರತಾಗಿ ಈ ವರೆಗೂ ಯಾರೂ ಕುಳಿತಿಲ್ಲ. ನವರಾತ್ರಿಯ ದರ್ಬಾರಿನಲ್ಲಿ ಅಮ್ಮನವರ ಎದುರು ಕುಳಿತು ಅವರು ಜಪ ನಿರತರಾಗಿರುತ್ತಾರೇ ಹೊರತು ಮಾತನಾಡುವುದೇ ಇಲ್ಲ. ಭಕ್ತರಿಗಾಗಿ ಇಂದು ಕೆಲ ಕ್ಷಣಕ್ಕಾದರೂ ಅದರ ಮೇಲೆ ಕುಳಿತು ಒಂದೆರಡಾದರೂ ಮಾತನಾಡಿ ಅವರು ಕರುಣೆ ತೋರಿದರು.
ಈ ಸಂಗತಿಯನ್ನು ತಮ್ಮ ಆಶೀರ್ವಚನದಲ್ಲಿ ಶ್ರೀ ವಿಧುಶೇಖರ ಭಾರತಿಯವರು ಪ್ರಸ್ತಾಪಿಸಿದರು ತಮ್ಮ ಗುರುಗಳು ಅನೇಕ ವರ್ಷಗಳ ನಂತರ ಈ ಸುವರ್ಣ ಸಿಂಹಾಸನ ಏರಿದ್ದಲ್ಲದೇ ಪ್ರಥಮ ಬಾರಿ ಅಲ್ಲಿ ಕುಳಿತೇ ಎರಡು ಮಾತನ್ನಾದರೂ ಆಡಿದರು. ಗುರುಗಳ ಚರಿತ್ರೆ,ಜೀವನ ಶೈಲಿ,ಅವರ ಆಚರಣೆ ಎಲ್ಲವೂ ನಮಗೆಲ್ಲಾ ಪಾಠ.ಮಠದ ಎಲ್ಲಾ ಸಮಸ್ತ ಹೊಣೆಯ ನಡುವೆಯೂ ಅವರು ನ್ಯಾಯ,ಮೀಮಾಂಸ,ವೇದಾಂತ,ಹೀಗೆ ಸಕಲ ಶಾಸ್ತ್ರಗಳಲ್ಲೂ ಅದ್ವಿತೀಯ ಪಾಂಡಿತ್ಯ ಸಿದ್ಧಿಸಿಕೊಂಡಿದ್ದಾರೆ.ಭರತವರ್ಷದ ಪ್ರಖಾಂಡ ಪಂಡಿತರೆನಿಸಿದವರು,ಶಾಸ್ತ್ರ ಚಿಂತನೆಯಲ್ಲೇ ಇಡೀ ಬದುಕು ಕಳೆದವರು ಗುರುಗಳ ಶಾಸ್ತ್ರ ಪಾಂಡಿತ್ಯಕ್ಕೆ ಶರಣಾಗುತ್ತಾರೆ.
ನಮ್ಮನ್ನು ಕಾಣುವ ಅನೇಕ ಭಕ್ತರು “ಗುರುಗಳು ಚೆನ್ನಾಗಿದ್ದಾರಾ “ಎಂದು ವಿಚಾರಿಸುವುದಿದೆ. ನಾವದಕ್ಕೆ ಅವರ ಅನುಗ್ರಹದಿಂದ ನಾವೆಲ್ಲಾ ಚೆನ್ನಾಗಿದ್ದೇವೆ ಎಂದು ಉತ್ತರಿಸುತ್ತೇವೆ. ತಮ್ಮ ಶಿಷ್ಯ ಕೋಠಿಯ ಒಳಿತಿಗಾಗೇ ಗುರುಗಳು ಸದಾ ಪ್ರಾರ್ಥಿಸುತ್ತಾರೆ.ಇಂದು ಪರೀಕ್ಷೆಯ ಸಮಯ ಹದಿನೈದು ಸಾವಿರ ಶಾಲಾ ಮಕ್ಕಳು ಇಲ್ಲಿ ಬಂದಿದ್ದಾರೆ.ಸಾಕ್ಷಾತ್ ಶಾರದೆಯ ಪ್ರತಿ ರೂಪವಾದ ಜಗದ್ಗುರುಗಳ ದರ್ಶನ ದೊರಕಿದ್ದರಿಂದ ಈ ಮಕ್ಕಳಿಗೆ ಒಳಿತಾಗಲಿದೆ. ಜಗದ್ಗುರುಗಳ ಶಿಷ್ಯ ಕೋಠಿಯಲ್ಲಿ ನಾವೂ ಇದ್ದೇವೆ ಎಂಬುದೇ ಪುಣ್ಯ ವಿಶೇಷ.ಅದರ ಜೊತೆಗೆ ಇಂದು ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಪಾಲ್ಗೊಂಡಿದ್ದೇವೆ ಎಂಬುದು ಮತ್ತೂ ಪುಣ್ಯ ಎಂದು ಶ್ರೀ ವಿಧುಶೇಖರ ಭಾರತಿಯವರು ತಿಳಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ಶಂಕರ ಭಗವತ್ಪಾದರು ಇಡೀ ಜಗತ್ತಿಗೆ ಮಾಡಿದ ಉಪದೇಶ ಹೇಗೆ ಸರ್ವಕಾಲಿಕ ಎಂದು ವಿವರಿಸಿದರು. “ಕಿಂ ಸಂಪಾದ್ಯಂ ಮನುಜೈ”ಎಂಬ ಪ್ರಶ್ನೆಗೆ ವಿದ್ಯಾ ವಿಥ್ಥಂ,ಭಲಂ,ಯಶ,ಪುಣ್ಯ ಎಂಬ ಉತ್ತರ ನೀಡಿದ್ದಾರೆ. ಯೋಗ್ಯ ವಿದ್ಯೆ ಗಳಿಸಿ ನ್ಯಾಯಮಾರ್ಗದಿಂದ ಸಂಪಾದಿಸಿ, ಶರೀರ,ಮನಸ್ಸು ಮಾತಿನಲ್ಲಿ ಭಲಶಾಲಿಗಳಾಗಿ, ಯಶಸ್ಸು ಸಾಧಿಸಿ ಪುಣ್ಯ ಸಂಪಾದಿಸುವುದೇ ಮನುಷ್ಯನ ಕರ್ತವ್ಯ.ಪುಣ್ಯ ಅಂದರೆ ಭಗವತಾರಾಧನೆ ಮತ್ತು ಪರೋಪಕಾರ ಎಂದು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ತಿಳಿಸಿದರು.ರಾಮಾಯಣದ ಸುಂದರ ಖಾಂಡದಲ್ಲಿ ಆಂಜನೇಯ ಸ್ವಾಮಿಯು ಸಮುದ್ರೋಲ್ಲಂಘನ ಕಥೆ ಪ್ರತಿಯೋರ್ವರ ಬದುಕಿಗೆ ಮಾರ್ಗದರ್ಶಿ ಕಥೆಯಾಗಿದೆ. ಸೀತಾ ಮಾತೆಯ ಪತ್ತೆಯಂತಹ ಒಳ್ಳೆಯ ಉದ್ದೇಶದಿಂದ ಹೊರಟ ಆಂಜನೇಯ ಸ್ವಾಮಿಗೆ ಸಮುದ್ರೋಲ್ಲಂಘನದಲ್ಲಿ ಮೂವರು ಎದುರಾದರು. ಅದರಲ್ಲಿ ಇಬ್ಬರು ತೊಂದರೆ ಕೊಡಲೇ ಬಂದಿದ್ದರೆ ಮತ್ತೋರ್ವರು ಉಪಕಾರ ಮಾಡಲು ಬಂದಿದ್ದರು. ಆಂಜನೇಯ ಸ್ವಾಮಿ ಯುಕ್ತಿಯಿಂದ ತೊಂದರೆ ನಿವಾರಿಸಿಕೊಂಡು ಹೇಳಿದ್ದ ಕಾರ್ಯಕ್ಕಿಂತ ಹೆಚ್ಚಿನ ಸಾಧನೆಯೊಂದಿಗೆ ಹಿಂತಿರುಗಿದ. ಯಾವುದೇ ಒಳ್ಳೆಯ ಕಾರ್ಯಕ್ಕೆ ತೊಂದರೆ ಕೊಡುವರು ಹೆಚ್ಚೇ ಇರುತ್ತಾರೆ.ನಾವು ಉಪಾಯದಿಂದ ಅದನ್ನು ಪರಿಹರಿಸಿ ಕಾರ್ಯ ಸಾಧನೆ ಮಾಡಬೇಕು ಎಂದವರು ತಿಳಿಸಿದರು.
ತಮ್ಮ ಅನುಗ್ರಹ ಭಾಷಣದಲ್ಲಿ ಶ್ರೀಗಳು ಶೃಂಗೇರಿಯ ಗೂರುಪರಂಪರೆಯನ್ನು ಸ್ಮರಿಸುತ್ತಾ ಶಂಕರ ಭಗವತ್ಪಾದರು ಸನಾತನ ಧರ್ಮ ಉಳಿಸಿದಂತೇ ಈ ಪೀಠದ ಹನ್ನೆರಡನೇ ಜಗದ್ಗುರು ಶ್ರೀ ವಿದ್ಯಾರಣ್ಯರೂ ಸನಾತನ ಧರ್ಮದ ಉಳಿಯುವಿಕೆಗೆ ಸಂಕಲ್ಪಿತರಾಗಿ ಯಶಸ್ವಿ ಆಗಿದ್ದನ್ನು ಸ್ಮರಿಸಿದರು.
ಜನರಲ್ಲಿ ಐಕಮತ್ಯ, ದೇವರಲ್ಲಿ ಶ್ರದ್ಧೆ,ಆಸ್ತಿಕತೆ ಉಳಿದರೆ ದೇಶ ಉಳಿಯುತ್ತದೆ ಎಂದವರು ಹೇಳಿ ನಮ: ಶಂಕರಾಯ ಮಂತ್ರವನ್ನು ಉಪದೇಶಿಸಿ ಇದರ ನಿತ್ಯಾನುಷ್ಠಾನದಿಂದ ಶ್ರೇಯಸ್ಸು ಪ್ರಾಪ್ತಿ ಮಾಡಿಕೊಳ್ಳಲು ತಿಳಿಸಿದರು.
ಸಮಾರಂಭದಲ್ಲಿ ಶೃಂಗೇರಿ ಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳು,ಯಡತೋರೆ ಯೋಗಾನಂದ ಮಠದ ಶ್ರೀ ಭ್ರಹ್ಮಾನಂದ ಭಾರತೀ ಸ್ವಾಮಿಗಳು,ಶಿರಸಿ ನೆಲಮಾವು ಮಠದ ಶ್ರೀ ಮಾಧವಾನಂದ ಸ್ವಾಮಿಗಳು,ತುಮಕೂರು ರಾಮಕೃಷ್ಣಾಶ್ರಮದ ಶ್ರೀ ವೀರೇಶ್ವರಾನಂದ ಸ್ವಾಮಿಗಳು,ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು,ಆನೆಗುಂದಿ ಮಠದ ಶ್ರೀ ಕಾಳಹಸ್ತಾನಂದ ಸ್ವಾಮಿಗಳು,ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮಿಗಳು,ತುಮಕೂರಿನ ಶ್ರೀ ಪರಮಾನಂದ ಸ್ವಾಮಿಗಳು ಪಾಲ್ಗೊಂಡಿದ್ದರು. ರಾಮಕೃಷ್ಣಮಠದ ಶ್ರೀ ವೀರೇಶ್ವರಾನಂದ ಸ್ವಾಮಿಗಳು ಈ ಸಂದರ್ಭ ಉಪನ್ಯಾಸ ಮಾಡಿದರು.
ಸುವರ್ಣ ಭಾರತಿ ವರ್ಷಾಚರಣೆಯಲ್ಲಿ ಐವತ್ತು ಸಹಸ್ರ ಸಸಿ ನೆಡಲಾಗಿದೆ. ನಾಲ್ಕು ಸಾವಿರ ಶಾಲೆಯಲ್ಲಿ ಸ್ತೋತ್ರ ವೈಭವ ನಡೆದಿದೆ.ಸಂಗೀತಗಾರರು ನಾದಾಬಿವಂದನೆ ಮೂಲಕ ಪಾಲ್ಗೊಂಡಿದ್ದಾರೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀನಿವಾಸ್ ತಿಳಿಸಿದರು.
ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ತಾನು ನಲವತ್ತು ವರ್ಷಗಳಿಂದ ಈ ಮಠದ ಭಕ್ತ.ಇಲ್ಲಿ ಉಪ ಮುಖ್ಯ ಮಂತ್ರಿಯಾಗಿ ಬಂದಿಲ್ಲ.ಓರ್ವ ಭಕ್ತನಾಗಿ ಬಂದಿದ್ದೇನೆ ಎಂದರು. ನುಡಿದಂತೆ ಅವರು ವೇದಿಕೆಯ ಕೆಳಗೇ ಭಕ್ತ ಸಮೂಹದಲ್ಲೇ ಕುಳಿತು ತಾವೂ ಸ್ತೋತ್ರ ಪಠಣ ನಡೆಸಿದರು. ಮಾಜೀ ಉಪಮುಖ್ಯ ಮಂತ್ರಿ ಈಶ್ವರಪ್ಪ ದಂಪತಿಗಳು,ಮಾಜೀ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜೀ ಸಚಿವ ಜೀವರಾಜ್,ಶೃಂಗೇರಿಯ ಶಾಸಕ ರಾಜೇಗೌಡ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾತ್ರಿ ಇಡೀ ಕಾರ್ಯಕ್ರಮ ಸಂಯೋಜನೆಗೆ ದುಡಿದಿದ್ದ ಕಾರ್ಯಕರ್ತರು ಬೆಳಕು ಮೂಡುವ ಮೊದಲೇ ಭಾರತೀತೀರ್ಥ ನಗರದಲ್ಲಿ ಚಟುವಟಿಕೆಯಲ್ಲಿ ತೊಡಗಿದ್ದರು. ಏಳೆಂಟು ನೂರು ಬಸ್ ಗಳು,ಸಹಸ್ರಾರು ವಾಹನದಲ್ಲಿ ಬಂದ ಭಕ್ತ ಸಾಗರವನ್ನು ಶಿಸ್ತು ಬದ್ದವಾಗಿ ಅವರಿಗೇ ಮೀಸಲಾಗಿದ್ದ ಸ್ಥಳಕ್ಕೆ ಕೂರಲು ಕಳಿಸಲಾಗುತ್ತಿತ್ತು. ಪ್ರತಿಯೋರ್ವರಿಗೂ ಶಾರದಾ ಪ್ರಸಾದ ಮತ್ತು ಜಗದ್ಗುರುಗಳ ಭಾವಚಿತ್ರ ಒಳಗೊಂಡ ಚೀಲ ನೀಡಲಾಗುತ್ತಿತ್ತು. ಆಗಮಿಸುವ ಸುಮಂಗಲಿಯರಿಗೆ ಮಂಗಳ ದ್ರವ್ಯ ನೀಡಿ ಸ್ವಾಗತಿಸುತ್ತಿದ್ದ ಛೇತೋಹಾರಿ ದೃಶ್ಯ ಕಾಣಿಸಿತು.ವಾಹನಗಳ ನಿಲುಗಡೆಗೇ ಅಚ್ಚುಕಟ್ಟಾದ ವ್ಯವಸ್ತೆ ಮಾಡಲಾಗಿತ್ತಾಗಿ ಎಲ್ಲೂ ಗೊಂದಲ ಆಗಲಿಲ್ಲ. ಸಹಸ್ರ ಸಂಖ್ಯೆಯ Sringeri Shivaganga Mutt ಕಾರ್ಯಕರ್ತರು ಶೃಂಗೇರಿಯ ಭಾರತೀ ಬೀದಿ ಮತ್ತು ನರಸಿಂಹವನಕ್ಕೆ ಸಾಗುವ ಮಾರ್ಗದುದ್ದಕ್ಕೂ ಕೇಸರಿ ಪಥಾಕೆ ಕಟ್ಟಿದ್ದು ಗಮನ ಸೆಳೆಯಿತು. ವೇದಿಕೆಯ ಎದುರಿನಲ್ಲಿ ಬೃಹತ್ ರಂಗವಲ್ಲಿಯ ಚಿತ್ತಾರ ಗಮನ ಸೆಳೆಯಿತು. ಭೋಜನ ನೀಡುವಲ್ಲೂ ಮಹಿಳೆಯರ ಮುದಾಳತ್ವ ಎದ್ದು ಕಾಣುವಂತಿತ್ತು.ಪೊಲೀಸರೇ ಕಾಣದೇ ಇಡೀ ಶೃಂಗೇರಿಯಲ್ಲಿ ವಾಹನ ನಿಲುಗಡೆ,ಭಕ್ತರನ್ನು ನಿರ್ಧಿಷ್ಟ ಜಾಗದಲ್ಲಿ ಕೂರಿಸುವಿಕೆ,ಊಟ ಉಪಚಾರ,ಕುಡಿವ ನೀರಿನ ಏರ್ಪಾಟು,ಶೌಚಾಲಯ ಎಲ್ಲವನ್ನೂ ಶೃಂಗೇರಿಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ನೆರವಿನಿಂದ ಶಿಸ್ತುಬದ್ದವಾಗಿ ಸಹಸ್ರ ಸಂಖ್ಯೆಯ ಕಾರ್ಯಕರ್ತರು ನಿರ್ವಹಿಸಿ ಮೆಚ್ಚಿಗೆ ಗಳಿಸಿದರು. ಯಾವೊಂದು ಪುಟ್ಟ ಗೊಂದಲವೂ ಎಲ್ಲೂ ಕಾಣಲಿಲ್ಲ.ಈ ವ್ಯವಸ್ಥೆಯ ಅಚ್ಚುಕಟ್ಟುತನಕ್ಕೆ ಸೇರಿದ್ದ ಭಕ್ತರ ಸ್ಪಂದನವೂ ಕಾರಣವಾಯಿತು.
ಒಂದು ದಿವ್ಯಾನುಭೂತಿಯೊಂದಿಗೆ ಭಕ್ತ ಸಾಗರ ಚದುರಿತು. ನೀವು ಹೇಗೆ ಕ್ಷೇಮ ವಾಗಿ ಬಂದಿರುವಿರೋ ಹಾಗೇ ಕ್ಷೇಮವಾಗೇ ಮನೆ ತಲುಪುವುದೂ ನಮಗೆ ಮುಖ್ಯ ವಿಷಯ ಎಂಬ ಶ್ರೀ ವಿಧುಶೇಖರ ಭಾರತಿಗಳ ಮಾತನ್ನು ಜ್ಞಾಪಕದಲ್ಲಿದ್ದಂತೆ ಎಲ್ಲರೂ ಸ್ವಸ್ಥಾನದತ್ತ ಮರುಯಾನ ಆರಂಭಿಸಿದರು.
ಇನ್ನೇನು ಶೃಂಗೇರಿಯ ಜಗದ್ಗುರು ಸನ್ನಿಧಾನ ವಾರಣಾಸಿ,ಅಯೋಧ್ಯೆ,ಪ್ರಯಾಗದತ್ತ ಧರ್ಮ ವಿಜಯ ಯಾತ್ರೆ ಆರಂಭಿಸಲಿದ್ದು ವಾರಣಾಸಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಪುನರ್ ಪ್ರತಿಷ್ಠಾ ಕುಂಬಾಬಿಶೇಕದಲ್ಲಿ ತಾವು ಪಾಲ್ಗೊಳ್ಳಲಿರುವುದಾಗಿ ಸಮಾರಂಭದಲ್ಲಿ ಪ್ರಕಟಿಸಿದರು.