Friday, January 24, 2025
Friday, January 24, 2025

Sringeri Mutt ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸಾಶ್ರಮ ಸ್ವೀಕಾರ ಸುವರ್ಣ ಮಹೋತ್ಸವ, ಶೃಂಗೇರಿಯಲ್ಲಿ ಭಕ್ತವೃಂದದ ಸಂಭ್ರಮ ಲೇ: ಪ್ರಭಾಕರ ಕಾರಂತ.

Date:

Sringeri Mutt ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಸನ್ಯಾಸ ಸ್ವೀಕರಿಸಿದ ಸುವರ್ಣ ಮಹೋತ್ಸವ ಅಂಗವಾಗಿ ಬೃಹತ್ತಾದ ಏನಾದರೂ ಲೋಕಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸನ್ನಿಧಾನಂಗಳಲ್ಲಿ ಯಡತೊರೆಯ ಪೂಜ್ಯ ಶ್ರೀ ಶಂಕರ ಭಾರತಿ ಸ್ವಾಮಿಗಳು ನಿವೇದಿಸಿಕೊಂಡಾಗ ಅವರು ಸೂಚಿಸಿದ್ದ ಸ್ತೋತ್ರ ಪಠನವೇ ಕಲ್ಯಾಣ ವೃಷ್ಟಿ ಸ್ತವ.ಶಂಕರಭಗವತ್ಪಾದರ ರಚನೆಯಾದ ಕಲ್ಯಾಣ ವೃಷ್ಟಿಸ್ತವ ಜಗನ್ಮಾತೆ ಯನ್ನು ಸ್ತುತಿಸುವ ಹದಿನಾರು ಶ್ಲೋಕಗಳನ್ನೊಳಗೊಂಡ ಮಹಾಮಂತ್ರ.
ಇದರ ಜೊತೆಗೆ ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಪರಶಿವನ ಸ್ತೋತ್ರ. 27 ನಕ್ಷತ್ರ ಗಳಂತೆ ಇದೂ 27 ಶ್ಲೋಕಗಳನ್ನು ಒಳಗೊಂಡಿದ್ದು ನಮ:ಶಿವಾಯ ಒಳಗೊಂಡಿರುವ ಸುಂದರ ಗೀತೆಗಳು. ಇದರ ಜೊತೆಗೆ ಲಕ್ಷ್ಮೀನರಸಿಂಹ ಕರುಣಾರಸ ಸ್ತೋತ್ರ .ಇದು ಲಕ್ಷ್ಮೀನರಸಿಂಹನನ್ನು ಸ್ತುತಿಸುವ 17 ಶ್ಲೋಕಗಳನ್ನೊಳಗೊಂಡಿದೆ. ಈ ತ್ರಿವೇಣಿ ಸ್ತೋತ್ರಗಳನ್ನು ಪ್ರತಿಯೋರ್ವ ಸನಾತನಿಯೂ ಮನೆಯಲ್ಲಿ ನಿತ್ಯ ಪಾರಾಯಣ ಸತತ ನಡೆಸಿ ಲೋಕದಲ್ಲಿ ಶಾಂತಿ ಸುಭಿಕ್ಷೆಗಾಗಿ ಭಗವಂತನಲ್ಲಿ ಪ್ರಾರ್ಥಿಸುವ ಮೂಲಕ ಸುವರ್ಣ ಮಹೋತ್ಸವ ಆಚರಿಸಬೇಕು ಎಂದು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸೂಚಿಸಿದರು. ಇಂತಹ ಸಂಧರ್ಭ ಒದಗಿದಾಗ ಜಗದ್ಗುರುಗಳಿಗೆ ಬಹುಮೌಲ್ಯದ ಕಿರೀಟಾದಿ ಆಭರಣ ಮತ್ತು ಹಣ ಕೊಡೋಣವಾಗಲಿ ಎಂದು ಹೇಳುವುದು ಮಾಮೂಲು.ಆದರೆ ಈ ಪುಣ್ಯ ಸಂಧರ್ಭ ಜನರು ಸನ್ಮಾರ್ಗ ಪ್ರವೃತ್ತಕರಾಗಿ ಲೋಕ ಹಿತವಾಗುವಂತಾಗಲಿ ಎಂಬ ಜಗದ್ಗುರುಗಳ ಸದಾಶಯ ಅದೆಷ್ಟು ಉನ್ನತವಾದದ್ದು. ನೈಜ ಸನ್ಯಾಸ ಎಂಬುದು ಇದಕ್ಕೇ ಇರಬೇಕು. ಲೋಕದ ಸಕಲ ಜೀವಿಗಳಲ್ಲೂ ಕರುಣೆ ತೋರುವುದೆಂದರೂ ಇದೇ.ಇದರಲ್ಲಿ ಅದ್ಭುತ ಅದ್ವೈತವೂ ಅಡಗಿದೆ. ಶೃಂಗೇರಿಯ ಮಹಾಸಂಸ್ತಾನ ಶಿವಕೇಶವ ಅಭೇದ ತತ್ವವನ್ನು ಪ್ರತಿಪಾದಿಸುತ್ತದೆ. ಶಂಕರ ಭಗವತ್ಪಾದರು ಸನಾತನಿಗಳಲ್ಲಿ ದೇವರ ಹೆಸರಿನಲ್ಲೇ ಉಂಟಾಗಿದ್ದ ಅನೈಕ್ಯತೆ ನಿವಾರಿಸಲೆಂದೇ ಪಂಚಾಯತನ ಪೂಜೆ ಜಾರಿಗೆ ತಂದು ಭಗವಂತ ವಿವಿಧ ರೂಪಗಳಲ್ಲಿ ಪೂಜಿಸಲ್ಪಟ್ಟರೂ ಅವನು ಒಬ್ಬನೇ ಎಂಬ ಸತ್ಯವನ್ನು ಲೋಕ ಮನಗಾಣುವಂತೆ ಮಾಡಿದರು. ಶಂಕರಭಗವತ್ಪಾದರು ಆರಂಭಿಸಿದ ಮಠ ಪರಂಪರೆಯಾದರೂ ಸನಾತನ ಧರ್ಮದ ಸಂರಕ್ಷಣೆಯ ಮಹೋದ್ದೇಶ ಉಳ್ಳದ್ದು. ಅವರು ದೇಶದ ನಾಲ್ಕು ಮೂಲೆಗಳಲ್ಲಿ ಆರಂಭಿಸಿದ ನಾಲ್ಕು ಮಠಗಳಲ್ಲಿ ಶೃಂಗೇರಿಯ ಧಕ್ಷಿಣಾಮ್ನಾಯ ಶಾರದಾಪೀಠ ಮೊದಲಿನದ್ದು. ತಮ್ಮ ಪ್ರಥಮ ಜೇಷ್ಠ ಶಿಷ್ಯ ಶ್ರೀ ಸುರೇಶ್ವರಾಚಾರ್ಯರನ್ನೇ ಅವರು ಶೃಂಗೇರಿಯ ಪ್ರಥಮ ಪೀಠಾದಿಪತಿಗಳಾಗಿ ನಿಯುಕ್ತಿಗೊಳಿಸಿದರು.ಶಂಕರರು ಹಾಕಿಕೊಟ್ಟ ಮಾರ್ಗದಲ್ಲೇ ಶೃಂಗೇರಿಯ ಪೀಠ ಪ್ರತಿ ಹೆಜ್ಜೆಯನ್ನೂ ಇಡುತ್ತಿದೆ. ಈ ಸ್ತೋತ್ರ ವೈಭವ ಸಹ ಅದಕ್ಕೆ ಪ್ರತ್ಯಕ್ಷ ನಿರೂಪಣೆಯಾಗಿದೆ.
Sringeri Mutt ಈ ಸ್ತೋತ್ರ ಮಾಲಿಕೆಯನ್ನು ಕೋಟ್ಯಂತರ ಭಕ್ತರು ಕಳೆದ ಒಂದು ವರ್ಷದಿಂದ ದೇಶ ವಿದೇಶದಲ್ಲಿ ತಮ್ಮ ಮನೆಯಲ್ಲಿ ಪಠಿಸುತ್ತಿದ್ದಾರೆ. ಇದೇನು ಒಂದು ವರ್ಷಕ್ಕೆ ಮುಗಿಯುವುದಲ್ಲ. ಅನುದಿನವೂ ಭಕ್ತರ ಮನೆಯಲ್ಲಿ ಸ್ತೋತ್ರ ಪಠಣ ತಲೆತಲಾಂತರವೂ ನಡೆಯುತ್ತದೆ.ಸುವರ್ಣ ಮಹೋತ್ಸವ ಒಂದು ನೆವ.ಆ ಮೂಲಕ ಭಗವಂತನತ್ತ ಲೋಕದ ಸಮಸ್ತರೂ ಸಾಗಬೇಕು ಎಂಬುದೇ ಮೂಲ ಆಶಯ.ಸನ್ಯಾಸಿ ಆದವನಿಗೆ ಯಾವುದರಲ್ಲೂ ಕಿಂಚಿತ್ತೂ ವ್ಯಾಮೋಹ ಇರಬಾರದು. ಸಮಸ್ತ ಲೋಕವು ಆಧ್ಯಾತ್ಮಿಕ ಅನುಭೂತಿ ಪಡೆಯಬೇಕು ಎಂಬ ಮಹೋದ್ದೇಶದ ಕಾರ್ಯಕ್ರಮ ಇದು.ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮಿಗಳನ್ನು ಮಾಜೀ ರಾಷ್ಟ್ರಪತಿ ಅಬ್ದುಲ್ ಕಲಾಂ ಬೇಟಿಯಾದಾಗ ನೀವು ಶೃಂಗೇರಿಯ ಪೀಠ ಏರಬೇಕು ಎಂದು ಗುರುಗಳ ಬಳಿ ಬಂದಿರಾ ಎಂಬ ಪ್ರಶ್ನೆ ಮಾಡಿದ್ದರು. ಇಲ್ಲ ನಾವು ಮೋಕ್ಷ ಸಾಧನೆಯ ಮಾರ್ಗ ಅರಿಸಿ ಗುರುಗಳ ಬಳಿ ಬಂದಿದ್ದು, ಮಠಾದಿಪತ್ಯದ ಯಾವ ಆಸೆಯೂ ಇರಲಿಲ್ಲ ಎಂದು ಜಗದ್ಗುರುಗಳು ಉತ್ತರಿಸಿದ್ದರು. ಅದು ನೈಜ ಮಾತುಗಳು ಎಂಬುದು ಶೃಂಗೇರಿಯಲ್ಲಿ ಶಿಷ್ಯ ಸ್ವೀಕಾರ ಆದ ಮೇಲೆ ಜಗಜ್ಜಾಹೀರಾಯಿತು. ಮಠದ ಸಮಸ್ತ ಜವಾಬ್ದಾರಿಯಿಂದ ಶ್ರೀ ಭಾರತೀತೀರ್ಥರು ನಿವೃತ್ತರಾದರು.ತಮ್ಮನ್ನು ತಮ್ಮಷ್ಟಕ್ಕೇ ಬಿಡಿ,ಇನ್ನು ಮುಂದೆ ನಮ್ಮ ಶಿಷ್ಯರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಹೇಳಿ ಕಳೆದ ದಶಕದಿಂದಲೂ ಅವರು ಆಧ್ಯಾತ್ಮಿಕ ಚಿಂತನೆಗೇ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಅವರೀಗ ಕಿರೀಟ ಧಾರಣೆ ಮಾಡುವುದಿಲ್ಲ. ಹೆಚ್ಚಾಗಿ ಯಾರನ್ನೂ ಬೇಟಿ ಆಗುವುದಿಲ್ಲ.ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ.ತಾವಾಯಿತು ತಮ್ಮ ಶಾರದಾ ಚಂದ್ರಮೌಳೇಶ್ವರ ಪೂಜೆಯಾಯಿತು,ಅಧ್ಯಯನ ವಾಯಿತು,ಶಂಕರ ಭಾಷ್ಯದ ಪಠಣ ವಾಯಿತು ಇಷ್ಟೇ ಅವರ ದಿನಚರಿ. ಈ ಮಠದ ಲೌಕಿಕ ವ್ಯವಹಾರವನ್ನು ಎಂದು ಕಳಚಿಕೊಂಡೇನೋ ಎಂದು ಕಾಯುತ್ತಿದ್ದಂತೆ ಅವರು ಶಿಷ್ಯ ಸ್ವೀಕಾರ ಆಗುತ್ತಿದ್ದಂತೆ ಲೌಕಿಕ ನಿವೃತ್ತಿ ಪಡೆದು ಬಿಟ್ಟರು.

ಬೆಂಗಳೂರಿನಲ್ಲಿ ಕಲ್ಯಾಣ ವೃಷ್ಟಿಸ್ತವ ಸ್ತೋತ್ರ ಸಮರ್ಪಣೆ ಒಂದು ಲಕ್ಷ ಎಂಬತ್ತು ಸಹಸ್ರ ಭಕ್ತರಿಂದ ಏಕ ಕಂಠದಲ್ಲಿ ಪಠಣವಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನದೆದುರು ಸಮರ್ಪಣೆ ಆಯಿತು. ಜಗದ್ಗುರು ಶ್ರೀ ಭಾರತೀತೀರ್ಥರು ಶೃಂಗೇರಿಯನ್ನು ಬಿಟ್ಟು ಎಲ್ಲಿಗೂ ಬರಲಾರರಾದುದರಿಂದ ಅವರ ಸಮ್ಮುಖದಲ್ಲೇ ಸ್ತೋತ್ರ ಸಮರ್ಪಣೆ ಆಗಬೇಕು ಎಂಬ ಕಾರಣಕ್ಕೆ ಜನವರಿ 11 ರಂದು ಶೃಂಗೇರಿಯ ನರಸಿಂಹ ವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ಇದು ಶೃಂಗೇರಿಯ ಇತಿಹಾಸದಲ್ಲಿ ಬೃಹತ್ತಾದ ಮಹಾ ಕಾರ್ಯಕ್ರಮ ಅನಿಸಲಿದೆ. ಚಿಕ್ಕಮಗಳೂರು ಜಿಲ್ಲೆಯ ಐವತ್ತು ಸಹಸ್ರ ಭಕ್ತರು ಅಂದು ಶೃಂಗೇರಿಯಲ್ಲಿ ಸೇರಿ ಸ್ತೋತ್ರ ಸಮರ್ಪಣೆ ಮಾಡಲಿದ್ದಾರೆ. ಇದಕ್ಕಾಗೇ ಬರದ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮ ಚಿಕ್ಕಮಗಳೂರು ಜಿಲ್ಲೆಗೇ ಎಂದು ತೀರ್ಮಾನ ಆಗಿದ್ದರೂ ಅಕ್ಕಪಕ್ಕದ ಜಿಲ್ಲೆಗಳ ಜನ ಸ್ವಯಂ ಸ್ಪೂರ್ತಿಯಿಂದ ಈ ಮಹಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದಾರೆ. ಹಾಸನ,ಶಿವಮೊಗ್ಗ, ಉಡುಪಿ,ಮಂಗಳೂರು ಜಿಲ್ಲೆಗಳ ಅನೇಕ ತಾಲೂಕುಗಳಿಂದಲೂ ತಾವೇ ವಿಶೇಷ ಬಸ್ ಮಾಡಿಕೊಂಡು ಜನ ಆಗಮಿಸಲಿದ್ದಾರೆ. ಇಷ್ಟೆಲ್ಲ ಜನ ಕುಳಿತುಕೊಂಡು ಏಕ ಕಂಠದಲ್ಲಿ ಸ್ತೋತ್ರ ಪಠಣ ಮಾಡಲು ಬೃಹತ್ತಾದ ಮಂಟಪ ಆಗಲೇ ಸಿದ್ದವಾಗಿದೆ.ಉಭಯ ಜಗದ್ಗುರುಗಳು ಕುಳಿತುಕೊಳ್ಳುವ ಸುಂದರ ವೇದಿಕೆ ಸಹ ಸಿದ್ದವಾಗಿದೆ.

ಜನವರಿ ಬಂತೆಂದರೆ ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಏರುತ್ತಲೇ ಹೋಗುತ್ತದೆ. ಪ್ರತಿ ದಿನ ಹತ್ತಾರು ಸಹಸ್ರ ಜನ ಬೇಟಿ ನೀಡುತ್ತಾರೆ. ಶನಿವಾರ, ಭಾನುವಾರ ಮತ್ತು ರಜಾ ದಿನಗಳಂದು ಈ ಸಂಖ್ಯೆ ಇಪ್ಪತ್ತೈದು ಸಹಸ್ರ ದಾಟುತ್ತದೆ. ಎಲ್ಲರಿಗೂ ಎರಡು ಹೊತ್ತೂ ಉಚಿತ ಭೋಜನ ಪ್ರಸಾದ ನಡೆಯುತ್ತದೆ.
ಇದರ ನಡುವೆ ಈ ವರ್ಷವೇ ವಿಪರೀತ ಕಾರ್ಯಕ್ರಮ ಮಠದ ವತಿಯಿಂದ ಜನವರಿಯಲ್ಲೇ ಏರ್ಪಾಟಾಗಿದೆ .ಮಹಾರಾಷ್ಟ್ರದ ವಿಶ್ವ ವರಾಕರಿ ಸಂಘಟನೆ ಡಿಸೆಂಬರ್ 26 ರಿಂದ ಜನವರಿ 1ರ ವರೆಗೆ ದ್ಯಾನೇಶ್ವರಿ ಸಪ್ತಾಹವನ್ನು ಶೃಂಗೇರಿಯಲ್ಲಿ ಆಚರಿಸಿದರು. ಇದೊಂದು ಅಖಂಡ ಸಂಕೀರ್ತನ ಸಪ್ತಾಹ.
ಜನವರಿ 6 ರಿಂದ ಮೂರುದಿನ ಶ್ರೌತ ಮಹಾ ಸಮ್ಮೇಳನ ಶೃಂಗೇರಿಯಲ್ಲೇ ನಡೆಯಿತು. ದೇಶಾದ್ಯಂತ ವೇದ ಪಂಡಿತರು ಇದರಲ್ಲಿ ಪಾಲ್ಗೊಂಡಿದ್ದರು. ವೇದ ಪಾರಾಯಣ,ಕಲ್ಪ ಸೂಕ್ತ, ಹೋಮ ಹವನ,ವೇದ ಭಾಷ್ಯದ ಮೇಲೆ ಜಗದ್ಗುರುಗಳ ಅಧ್ಯಕ್ಷತೆಯಲ್ಲೇ ವಿದ್ವತ್ ಗೋಷ್ಠಿ.ಪಂಡಿತ ಪುರಸ್ಕಾರ ಎಂಬಿತ್ಯಾದಿ ಮೂರು ದಿನಗಳ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಈ ಕಲ್ಯಾಣ ವೃಷ್ಟಿಸ್ತವ ಸ್ತೋತ್ರ ಸಮರ್ಪಣೆಯ ಕಾರ್ಯಕ್ರಮ ಬಂದೇ ಬಿಟ್ಟಿದೆ.
ಇದರ ನಡುವೆಯೇ ಹರಿಹರನಾಮಾವೃತ ಎಂಬ ಶಿವ ಮತ್ತು ರಾಮ ನಾಮ ಬರೆಯುವ ಬೃಹತ್ತಾದ ಕಾರ್ಯಕ್ರಮ ಆರಂಭವಾಗಿ ರಾಮನವಮಿಯ ವರೆಗೂ ನಡೆಯಲಿದೆ. ಶೃಂಗೇರಿಗೆ ಬರುವ ಪ್ರತಿ ಪ್ರವಾಸಿಯಿಂದಲೂ ನಾಲ್ಕಾರು ಕಡೆ ರಾಮ,ಶಿವ ನಾಮ ಬರೆಸಲು ಹಲವು ತಿಂಗಳಿಂದಲೂ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಆರಂಭಿಸುವಾಗ ಕೋಟಿ ನಾಮ ಗುರಿ ಹೊಂದಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಉತ್ಸಾಹ ನೋಡಿದರೆ ಹತ್ತು ಕೋಟಿಗೆ ಕಡಿಮೆ ಇಲ್ಲದೇ ಈ ಬರಹಯಜ್ಞ ದಾಖಲೆ ನಿರ್ಮಿಸುವ ಲಕ್ಷಣ ಗೋಚರಿಸುತ್ತಿದೆ.

ಜನವರಿ 11 ರಂದು ಪಾಲ್ಗೊಳ್ಳುವ ಐವತ್ತು ಸಾವಿರ ಜನಕ್ಕೂ ಕುಡಿವ ನೀರು,ಶಾರದಮ್ಮನ ಪ್ರಸಾದ,ಶೃಂಗೇರಿಯ ವಿರಣೆಯ ಪುಸ್ತಕ, ತಂಪು ಪಾನೀಯ,ಬಿಸ್ಕತ್ ಪೊಟ್ಟಣ ಮತ್ತು ಅವರ ಮನೆ ಬೆಳಗುತ್ತಲೇ ಇರಲಿ ಎಂಬ ಕಾರಣಕ್ಕೆ ದೀಪ ಇದನ್ನು ಕೊಡಲು ನಿರ್ಧರಿಸಲಾಗಿದ್ದು ಶೃಂಗೇರಿಯ ಸುತ್ತಲಿನ ದೊಡ್ಡ ಸಂಖ್ಯೆಯ ಮಾತೆಯರು ಪ್ರತಿ ನಿತ್ಯ ಎಲ್ಲವನ್ನೂ ಜೋಡಿಸಲು ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ.
ಎಲ್ಲರಿಗೂ ಮದ್ಯಾಹ್ನ ಕಾರ್ಯಕ್ರಮ ಮುಗಿದ ಕೂಡಲೇ ಭೋಜನ ಪ್ರಸಾದ ನೀಡುವುದೂ ಸೇರಿದಂತೆ ಕಾರ್ಯಕ್ರಮ ಸ್ವಯಂಸೇವಕರಾಗಿ ಎರಡು ಸಾವಿರ ಜನ ಅಂದು ಹೊಣೆ ಹೊರಲಿದ್ದಾರೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಭಕ್ತರನ್ನು ಕರೆತರಲು ಕರ್ನಾಟಕ ರಾಜ್ಯ ಸಾರಿಗೆಯ ಆರು ನೂರು ಬಸ್ ಗಳು ಹೊರಟು ನಿಂತಿವೆ.ವಾಹನ ನಿಲುಗಡೆಯ ಪ್ರತ್ಯೇಕ ವ್ಯವಸ್ಥೆ ಮಾಡಿ ಪ್ರತಿ ಚಾಲಕರಿಗೂ ನಿಲುಗಡೆ ವಿವರ ನೀಡುವ ಲೊಕೇಶನ್ ರವಾನಿಸಲಾಗಿದೆ. ತುರ್ತು ಅನುಕೂಲಕ್ಕೆ ವೈದ್ಯಕೀಯ ವ್ಯವಸ್ಥೆಯೂ ಏರ್ಪಾಟಾಗಿದೆ. ಶೃಂಗೇರಿಯಂತ ಸಣ್ಣ ಊರು ಒಂದು ಬೃಹತ್ತಾದ ಸಾಮೂಹಿಕ ಸ್ತೋತ್ರ ಪಠಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ಯಾವ ನಾಯಕರನ್ನೂ ಅಭ್ಯಾಗತರಾಗಿ ಕರೆದಿಲ್ಲ. ಬರುವವರೆಲ್ಲಾ ಕೇವಲ ಭಕ್ತರಾಗೇ ಬರಬೇಕು.ಸ್ತೋತ್ರ ಪಠಿಸಬೇಕು.ಸನ್ನಿಧಾನದ ಆಶೀರ್ವಾದ ಕೇಳಿ ಶ್ರೀ ಭಾರತೀತೀರ್ಥ ಮಹಾಸನ್ನಿಧಾನದ ದರ್ಶನ ಭಾಗ್ಯ ಪಡೆದು ಪುನೀತರಾಗಿ ಪುಣ್ಯ ಹೊತ್ತು ಹಿಂತಿರುಗಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Siddaramaiah ನೇತಾಜಿ ಪ್ರತಿಮೆಗೆ ಸಿದ್ಧರಾಮಯ್ಯ ಅವರಿಂದ ಪುಷ್ಪ ಮಾಲಾರ್ಪಣೆ

Siddaramaiah ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ...

B.Y Vijayendra ಸ್ವಾಮಿ ವಿವೇಕಾನಂದರಂತಹ ಸಂತರು ನಮ್ಮ ದೇಶದ ಹಿರಿಮೆ ಸಾರಿದ್ದಾರೆ- ಬಿ.ವೈ.ವಿಜಯೇಂದ್ರ

B.Y Vijayendra ಸಂತರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಸಮಾಜಕ್ಕೆ ನೀಡುತ್ತ ಬರುತ್ತಿರುವುದರಿಂದ ಇತರೆ...

M. B. Patil ಉದ್ಯಮ ದಿಗ್ಗಜರ ಸಂಗಡ ಸಚಿವ ಎಂ.ಬಿ.ಪಾಟೀಲ್ ಸಮಾಲೋಚನೆ

• ರಾಜ್ಯದಲ್ಲಿ ಹೂಡಿಕೆ ಹೆಚ್ಚಳ, ವಹಿವಾಟು ವಿಸ್ತರಣೆಗೆ ಐಟಿಸಿ, ರಿನ್ಯೂ ಪವರ್‌,...