Chamber of Commerce Shivamogga ಸೋಗಾನೆ ಗ್ರಾಮದ ಸಮೀಪ ಫುಡ್ ಪಾರ್ಕ್ ನಿರ್ಮಾಣಕ್ಕೆ 100 ಎಕರೆ ಜಾಗ ಮಂಜೂರಾಗಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾದ ನೀತಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಗೆ ಮೊದಲ ಸ್ಥಾನವಿದ್ದರೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಂತರದ ಸ್ಥಾನದಲ್ಲಿವೆ. ಎಂಎಸ್‌ಎಂಇಗಳನ್ನು ಉತ್ತೇಜಿಸಲು ಪ್ರತ್ಯೇಕ ನೀತಿ ಜಾರಿಗೆ ತರಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಪೂರಕ ವಾತಾವರಣವಿದೆ. ಬೆಂಗಳೂರು ಹೊರತಾಗಿ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ. ಅದಕ್ಕೆ ಪೂರಕವಾಗಿರುವ ಎಲ್ಲ ಕಾರ್ಯವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಡಲಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳು ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸೇರಿದಂತೆ ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸೆಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸರ್ಕಾರ ಮತ್ತು ಉದ್ಯಮಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಜಿಲ್ಲೆಯಲ್ಲಿ 61 ವರ್ಷಗಳಿಂದ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಕ್ಷೇತ್ರದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸಂಘದ ಸದಸ್ಯರ ಸಂಖ್ಯೆ ಹೆಚ್ಚಿಸುವ ದೃಷ್ಟಿಯಿಂದ ವಿಶೇಷ ಅಭಿಯಾನ ನಡೆಸಲಾಗುವುದು ಎಂದರು.
ಸಂಘ ಪ್ರತಿ ವರ್ಷ ಸಂಸ್ಥಾಪಕರ ದಿನ ಆಚರಿಸುತ್ತಿದ್ದು, ನಿಸ್ವಾರ್ಥ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರ ಕೊಡುಗೆ ಅಪಾರ. ಇದೇ ಸಂದರ್ಭದಲ್ಲಿ ಉದ್ಯಮದಲ್ಲಿ ಸಾರ್ಥಕ ಕೆಲಸ ಮಾಡಿದ ಉದ್ಯಮಿಗಳಿಗೆ ವಾಣಿಜ್ಯೋದ್ಯಮಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ ಎಂದು ತಿಳಿಸಿದರು.
Chamber of Commerce Shivamogga ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹಿಸಲು ಪೂರಕವಾಗಿ ಎಫ್‌ಕೆಸಿಸಿಐ ಸಹಕಾರ ನೀಡಬೇಕು. ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶ ಸೇರಿದಂತೆ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದವರೊಂದಿಗೆ ಎಫ್‌ಕೆಸಿಸಿಐ ಚರ್ಚಿಸಬೇಕು ಎಂದರು.
ಶಿವಮೊಗ್ಗದ ಮಾನಸ ವೆಟ್ ಫಾರ್ಮನ ಗಜಾನನ ಹೆಗಡೆ, ಕನ್ನಿಕಾ ಟ್ರೇಡರ‍್ಸ್ ನ ಎಚ್.ಎನ್.ನಂಜುಂಡರಾಜು ಶೆಟ್ಟಿ, ಶಿವಮೊಗ್ಗ ಶಾಸ್ತ್ರಿ ಆಟೋಮೊಬೈಲ್ ಮಾಲೀಕ ಪ್ರಶಾಂತ್ ಶಾಸ್ತ್ರಿ ಅವರಿಗೆ 2024ನೇ ಸಾಲಿನ ವಾಣಿಜ್ಯೋದ್ಯಮಿ ಪ್ರಶಸ್ತಿ ಹಾಗೂ ಟ್ಯಾಕ್ಸ್ ಪ್ರಾಕ್ಟಿಷನರ್ ಎಸ್.ಬಿ.ಹನುಮಂತಪ್ಪ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಫ್‌ಕೆಸಿಸಿಐ ಉಪಾಧ್ಯಕ್ಷ ಟಿ.ಸಾಯಿರಾಂ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ್ ಮತ್ತಿತರರಿದ್ದರು.