HPR Institute Of Nursing Sciences ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಮಂಜುನಾಥ್ ಅವರನ್ನು ಸಂಸ್ಥೆಯಿಂದ ಅಮಾನತು ಮಾಡಲಾಗಿದೆ ಎಂದು ಎಚ್‌ಪಿಆರ್ ನರ್ಸಿಂಗ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹರಿಪ್ರಸಾದ್ ರೈ ತಿಳಿಸಿದರು.
ಸೊರಬ ಪಟ್ಟಣದ ಎಚ್‌ಪಿಆರ್ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಯಾವುದೇ ರಾಜೀ ಇಲ್ಲದೇ ಉತ್ತಮ ಆದ್ಯತೆ ನೀಡಲಾಗುತ್ತಿದೆ. ಇತ್ತೀಚೆಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಡಳಿತ ಅಧಿಕಾರಿ ಮಂಜುನಾಥ್ ಅವರ ಮೇಲೆ ಪ್ರಕರಣವೊಂದು ದಾಖಲಾದ ಹಿನ್ನೆಲೆ ಅವರನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಅಲ್ಲದೇ, ಪ್ರಕರಣ ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ನಡೆಯದಿದ್ದರೂ ಸಹ ಮಕ್ಕಳ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು ಹಾಗೂ ಉದ್ಯೋಗವಕಾಶಗಳು ಲಭಿಸಬೇಕು ಎನ್ನುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಯಿತು. ಕಳೆದ ಎಂಟು ವರ್ಷಗಳಿಂದ ಪಟ್ಟಣದಲ್ಲಿ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಕಂಡುಕೊಂಡಿದ್ದಾರೆ. ಅಲ್ಲಿಯೂ ಸಹ ಉತ್ತಮ ಹೆಸರನ್ನು ಗಳಿಸಿದ್ದಾರೆ. ಆದರೆ, ಪಟ್ಟಣದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರನ್ನು ಸಂಸ್ಥೆಯಿಂದ ಅಮಾನತು ಮಾಡಲಾಗಿದ್ದು, ತತಕ್ಷಣದಿಂದ ಜಾರಿಗೆ ಬರುವಂತೆ ಅವರಿಗೂ ಹಾಗೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ನೋಟಿಸ್ ಜಾರಿ ಮಾಡಲಾಗಿದೆ ಎಂದರು.
HPR Institute Of Nursing Sciences ಬೀದರ್, ಕಲಬುರ್ಗಿ, ಬೆಂಗಳೂರು, ಪುತ್ತೂರು, ಮಂಗಳೂರು, ಶಹಾಪುರ ಸೇರಿದಂತೆ ಒಟ್ಟು 12 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆಯ ಸ್ಥಾಪನೆಯ ಉದ್ದೇಶ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯೋಗವಕಾಶಗಳು ಲಭಿಸಬೇಕು ಎನ್ನುವುದು. ಯಾವುದೇ ಸಿಬ್ಬಂದಿ ಮುಖ್ಯವಾಗದೇ ಸಂಸ್ಥೆಯ ಮತ್ತು ಮಕ್ಕಳ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಪ್ರಸ್ತುತ ಉತ್ತಮ ನುರಿತ ಸಿಬ್ಬಂದಿ ಮತ್ತು ಅಧ್ಯಾಪಕ ವೃಂದ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ಲೈಂಗಿಕ ದೌರ್ಜನ್ಯದ ಕುರಿತು ಅರೋಪ ಮಾಡಿದ ಸಂದರ್ಭದಲ್ಲಿ ರಾಜೀಯಾಗಲು ಸಾಧ್ಯವಿಲ್ಲ. ದೇಶದ ಕಾನೂನಿಗೆ ಎಲ್ಲರೂ ತಲೆ ಭಾಗಲೇ ಬೇಕು. ಕಾನೂನಿನನ್ವಯ ತಗೆದುಕೊಳ್ಳುವ ನಿರ್ಧಾರಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.