The University of Agricultural and Horticultural Sciences ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ವಿಸ್ತರಣಾ ನಿರ್ದೇಶನಾಲಯ, ಶಿವಮೊಗ್ಗ, ಮಂಗಳೂರು ಕೆಮಿಕಲ್ಸ್ ಫರ್ಟಿಲೈರ‍್ಸ್, ಶಿವಮೊಗ್ಗ, ಕ್ರಿಯಾಜೆನ್ ಮತ್ತು ಕುಟುಂಬ ಶಿಕ್ಷಣ ಸಂಸ್ಥೆ (ರಿ.), ಶಿವಮೊಗ್ಗ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ‘ರಾಷ್ಟ್ರೀಯ ರೈತರ ದಿನಾಚರಣೆ’ ಮತ್ತು ‘ಸಮಗ್ರ ಕೃಷಿ ಪದ್ಧತಿ’ ಕುರಿತ ವಿಚಾರ ಸಂಕಿರಣವನ್ನು ಶಿವಮೊಗ್ಗ, ನವುಲೆ ಆವರಣದ ಸ್ವಾಮಿನಾಥನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ರೈತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಡಾ. ಸಿ. ಸುನಿಲ್, ಕೆ.ವಿ.ಕೆ.ಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ದೇಶದ ಬೆನ್ನಲುಬಾಗಿರುವ ರೈತರನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ರೈತರ ಪಾಲು ಮಹತ್ವದ್ದಾಗಿದೆ ಎಂದು ತಿಳಿಸುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಆರ್. ಸಿ. ಜಗದೀಶ, ಗೌರವಾನ್ವಿತ ಕುಲಪತಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಉದ್ಘಾಟಿಸಿ ಮಾತನಾಡುತ್ತಾ, ಈ ದಿನವು ರೈತ ಸಮುದಾವಯವನ್ನು ಉನ್ನತೀಕರಿಸುವ ಕೃಷಿ ಸುಧಾರಣೆಗಳು ಮತ್ತು ನೀತಿಯನ್ನು ಪ್ರತಿಪಾದಿಸುವ ಮಾಜಿ ಪ್ರಧಾನಿ ಮತ್ತು ಪ್ರಮುಖ ರೈತ ನಾಯಕ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ. ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಇತ್ತೀಚೆಗೆ ಹೆಚ್ಚಾಗಿರುವುದರಿಂದ ಕೃಷಿಯಲ್ಲಿ ಯಾಂತ್ರೀಕೃತ ಬೇಸಾಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ತಿಳಿಸಿದರು.
ಕೃಷಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ದೊರಕದೇ ಇರುವುದು ರೈತರಿಗೆ ಸಮಸ್ಯೆಯಾಗಿದೆ. ರೈತರನ್ನು ವ್ಯಾಪಾರೀಕರಣ ಗೊಳಿಸಿಕೊಂಡು, ರೈತ ಉತ್ಪಾದಕರ ಸಂಘದ ಮೂಲಕ ಮಾರುಕಟ್ಟೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬೇಕೆಂದು ತಿಳಿಸಿದರು. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನಿಶ್ಚಿತವಾದ ಬೆಲೆ ಸಿಕ್ಕರೆ ರೈತರ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ಡಾ. ಕಿರಣ್ ಕುಮಾರ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ ಇವರು ಮಾತನಾಡುತ್ತಾ, ರೈತರನ್ನು ಪ್ರತಿದಿನ ನೆನಪಿಸಬೇಕಾಗುತ್ತದೆ. ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಒದಗಿಸುವಲ್ಲಿ ರೈತರ ಪಾತ್ರ ತುಂಬಾ ಮಹತ್ವವಾಗಿದೆ ಎಂದು ತಿಳಿಸಿದರು.
ರೈತರು ಸಮಗ್ರ ಕೃಷಿ ಪದ್ಧತಿ ಮತ್ತು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಮತ್ತು ಒಳ್ಳೆಯ ಬೆಲೆಯನ್ನು ಪಡೆಯಬೇಕೆಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಡಾ. ಶರತ್, ಪಿ. ಗೌಡ, ಜಿಲ್ಲಾಭಿವೃದ್ಧಿ ವ್ಯವಸ್ಥಾಪಕರು, ನಬಾರ್ಡ್, ಶಿವಮೊಗ್ಗ ಇವರು ಮಾತನಾಡುತ್ತಾ, ಸುಸ್ಥಿರ ಕೃಷಿಗಾಗಿ ರೈತರನ್ನು ಸಬಲೀಕರಣಗೊಳಿಸಲು ರೈತರು ನೂತನ ತಾಂತ್ರಿಕತೆ ಮತ್ತು ಇಲಾಖಾ ಸವಲತ್ತುಗಳು, ನಬಾರ್ಡ್ನಿಂದ ಸಹಾಯವನ್ನು ಪಡೆದು ರೈತ ಉತ್ಪಾದಕರ ಸಂಘಗಳ ಮೂಲಕ ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯಬೇಕೆಂದು ತಿಳಿಸಿದರು.
The University of Agricultural and Horticultural Sciences ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಧಕ ರೈತರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅವರುಗಳೆಂದರೆ, ಶ್ರೀಮತಿ ವೀಣಾ ಸತೀಶ್, ಪೌದಾ ನರ್ಸರಿಯ ಮಾಲೀಕರು, ಶಿವಮೊಗ್ಗ ತಾಲ್ಲೂಕು, ಶ್ರೀಯುತ ಟಿ. ಎಂ. ಈರಪ್ಪನಾಯಕ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಪ್ರಗತಿಪರ ರೈತ, ಸೊರಬ ತಲ್ಲೂಕು, ಶ್ರೀ ಮದನ್ ಜಿ. ಎನ್., ದೇಸೀ ಗೋ ತಳಿಗಳನ್ನು ಸಂರಕ್ಷಿಸುತ್ತಿರುವ, ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವ ರೈತ, ತೀರ್ಥಹಳ್ಳಿ ತಾಲ್ಲೂಕು, ಶ್ರೀಯುತ ಜಿ. ಎಂ. ರಘು, ಜಿ.ಎಂ.ಆರ್. ಬಯೋಟೆಕ್‌ಯ ಮಾಲೀಕರು, ಶಿವಮೊಗ್ಗ ತಾಲ್ಲೂಕು, ಶ್ರೀ ಸುರೇಶ್ ಎಂ. ಎಂ., ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವ ಪ್ರಗತಿಪರ ರೈತ, ಶಿಕಾರಿಪುರ ತಾ||, ಶ್ರೀ ಮಂಜಪ್ಪ, ಗುಣಮಟ್ಟದ ಶುಂಠಿಯನ್ನು ತಾವೇ ಬೆಳೆದು ಸಂಸ್ಕರಿ ಮಾರಾಟ ಮಾಡುತ್ತಿರುವ ರೈತ, ಸಾಗರ ತಾಲ್ಲೂಕು.
ಕಾರ್ಯಕ್ರಮಕ್ಕೆ ಡಾ. ತಿಪ್ಪೇಶ, ಡಿ., ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ, ಡಾ. ಪ್ರದೀಪ್, ಎಸ್., ಸಹ ಸಂಶೋಧನಾ ನಿರ್ದೇಶಕರು, ವ.ಕೃ.ತೋ.ಸಂ.ಕೇಂದ್ರ, ಡಾ. ಬಿ. ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಡಾ. ಅಂಜಲಿ, ಎಂ.ಸಿ., ವಿಜ್ಞಾನಿ (ಮಣ್ಣು ವಿಜ್ಞಾನ), ಈ ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಡಾ. ಗಿರೀಶ್, ಆರ್., ವಿಜ್ಞಾನಿ (ಸಸ್ಯ ಸಂರಕ್ಷಣೆ) ಕೆ.ವಿ.ಕೆ., ಶಿವಮೊಗ್ಗ ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧಕ ರೈತರ ಕಿರು ಪರಿಚಯವನ್ನು ಡಾ. ಸುಧಾರಾಣಿ, ಎನ್., ವಿಜ್ಞಾನಿ (ಗೃಹ ವಿಜ್ಞಾನಿ), ಕೆ.ವಿ.ಕೆ., ಶಿವಮೊಗ್ಗ ಇವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಒಟ್ಟು 200 ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.