Madhu Bangarappa ಸೊರಬ ತಾಲೂಕಿನ ಪ್ರತಿ ಮನೆ ಮನೆಗೆ ಶರಾವತಿ ಜಲಾಶಯದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವ 660ಕೋಟಿ ವೆಚ್ಚದ ಯೋಜನೆಗೆ ಹಾಗೂ ದಂಡಾವತಿ ಯೋಜನೆಗೆ ಪರ್ಯಾಯವಾಗಿ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ 980 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.
ಅವರು ಸೊರಬ ತಾಲೂಕು ಸಮನವಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಸುಮಾರು 1200 ಕೋಟಿ ರೂ ಗಳ ಅಂದಾಜು ವೆಚ್ಚದ 17 ಕಟ್ಟಡ ಕಾಮಗಾರಿಗಳ ಲೋಕಾರ್ಪಣೆ ಮತ್ತು 40 ಕೋಟಿ ರೂ. ಗಳ ಅಂದಾಜು ವೆಚ್ಚದ 16 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಜನವರಿ ಮಾಸಾಂತ್ಯದೊಳಗಾಗಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಸುಮಾರು 200ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಹಾಗೂ ಅರಣ್ಯ ಭೂಮಿಯಲ್ಲಿ ವಾಸವಾಗಿರುವ ವನವಾಸಿಗಳಿಗೆ ಒಕ್ಕಲೆಬ್ಬಿಸದಂತೆ ಅವರನ್ನು ರಕ್ಷಿಸುವ ಹಾಗೂ ಕಾನೂನಾತ್ಮಕವಾಗಿ ಹಕ್ಕು ಪತ್ರ ನೀಡಲು ಸರ್ಕಾರ ಬದ್ದವಾಗಿದೆ. ಇದು ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕನಸು ಆಗಿತ್ತು. ದಿ. ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ದೂರದೃಷ್ಟಿಯಿಂದ ಅನುಷ್ಠಾನಕ್ಕೆ ತಂದಿದ್ದ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಇನ್ನೂ ಚಾಲನೆಯಲ್ಲಿದ್ದು ಮುಂದುವರೆದಿದೆ ಎಂದವರು ನುಡಿದರು.
ರಾಜ್ಯದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಶಕ್ತಿ ಯೋಜನೆಯಡಿ ಜಿಲ್ಲೆಗೆ ಈಗಾಗಲೇ 64 ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಾಗಿದೆ. ಇನ್ನು 34 ಬಸ್ ಗಳನ್ನು ಶೀಘ್ರದಲ್ಲಿ ತಾಲೂಕಿನ ಸೇವೆಗೆ ಒದಗಿಸಲಾಗುವುದು ಎಂದರು.
ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ಸಕಾಲದಲ್ಲಿ ಸದ್ಭಳಕೆ ಆಗುವಂತೆ ಹಾಗೂ ಸರ್ಕಾರಕ್ಕೆ ವಾಪಸ್ಸು ಹೋಗದಂತೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ತರಬೇತಿಗಾಗಿ ಯಾವುದೇ ಆರ್ಥಿಕ ಹೊರೆಬೀಳದಂತೆ ಸರ್ಕಾರದ ವತಿಯಿಂದಲೇ ಉಚಿತವಾಗಿ ತರಬೇತಿಗಳನ್ನು ನೀಡಲಾಗುತ್ತಿದೆ. ರಾಜ್ಯದ ಸುಮಾರು 25000 ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದರು.
Madhu Bangarappa ಅನುತ್ತಿರ್ಣರಾದ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಸರಿಯದಂತೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಂಡು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಮುಂದುವರೆಸಲಾಗುತ್ತಿದೆ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸರ್ಕಾರವು ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದುಕೊಂಡಿದೆ. ಜನಪರವಾದ ಈ ಯೋಜನೆಗಳು ಹೀಗೆಯೇ ಮುಂದುವರೆಯಲಿವೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸರ್ಕಾರದ ವಿವಿಧ ಯೋಜನೆಗಳ ಪಲಾನುಭವಿಗಳಿಗೆ ಸಚಿವರು ಹಾಗೂ ಗಣ್ಯರು ಸೌಲಭ್ಯಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸಿಇಓ ಎನ್. ಹೇಮಂತ್, ಉಪವಿಭಾಗಾಧಿಕಾರಿ ಯತೀಶ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಓ ಪ್ರಮೋದ್ ಕುಮಾರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.