ಸಾಗರದ ಹೆಗ್ಗೋಡಿನ ಸಾಕೇತ ಕಲಾವಿದರಿಂದ
ಭೀಷ್ಮಪರ್ವ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಿತು. ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಹವ್ಯಾಸಿಗಳೇ ತಂಡದ ಸದಸ್ಯರಾಗಿ, ಸಮರ್ಥವಾಗಿ ಯಕ್ಷರಂಗದ ಸೇವೆಯನ್ನ ಮಾಡಿಕೊಂಡು ಬರುತ್ತಿರುವ ಸಾಕೇತ ಕಲಾವಿದರು ವೈವಿಧ್ಯ ಪೂರ್ಣ ಪ್ರಸಂಗಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ.
ಶಿವಮೊಗ್ಗದಲ್ಲಿ ಡಿಸೆಂಬರ್ ಏಳರಂದು “ಭೀಷ್ಮ ಪರ್ವ” ಯಕ್ಷಗಾನ ಪ್ರದರ್ಶನ ನಡೆಯಿತು.
ಸ್ಥಳೀಯ ಸಾಕೇತದ ಮಿತ್ರರ ಬಳಗ ಈ ಪ್ರದರ್ಶನವನ್ನ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿತ್ತು.
ಮಿತ್ರರ ಪರವಾಗಿ
ಹಿರಿಯ ಲೇಖಕ ಲಕ್ಷ್ಮೀನಾರಾಯಣ ಕಾಶಿ “ಪ್ರಸ್ತುತ ಕಾಲಮಾನದಲ್ಲಿ ಯಕ್ಷಗಾನ ತಂಡಗಳ ನಿರ್ವಹಣೆಯೇ ಸವಾಲಾಗಿದೆ. ಅದರಲ್ಲೂ ಹವ್ಯಾಸಿಗಳೇ ಒಂದಾಗಿ ತಂಡ ರಚಿಸಿ ಹೆಗ್ಗೋಡು ಪ್ರಾಂತ್ಯದಲ್ಲಿ ಸಂಘಟಿಸಿರುವುದು ಅಪರೂಪದ ಸಾಹಸ ಎಂದರು.
ಸಾಕೇತ ಕಲಾವಿದರು ಅಭಿನಯಿಸಿದ
“ಭೀಷ್ಮಪರ್ವ” ಯಕ್ಷಗಾನ ರಸಿಕರ ಮನಗೆದ್ದಿತು.
ಪಾತ್ರಧಾರಿಗಳ ಕುಶಲ ನುಡಿಗಾರಿಕೆ,
ವೃತ್ತಿ ಕಲೆಯ ಸಮೃದ್ಧ
ಕಲಾವಂತಿಕೆ, ಆಭೂಷಣ, ಅಭಿನಯ ಪ್ರೇಕ್ಷಕರನ್ನ ಮಹಾಭಾರತ ಲೋಕಕ್ಕೆ ಕರೆದೊಯ್ದವು.
ಹಿರಿಯ ಯಕ್ಷಗಾನ ಭಾಗವತ ಕೆಳಮನೆ ರಾಮರಾಯರ ಭಾಗವಂತಿಕೆಗೆ ಎಲ್ಲರೂ ತಲೆದೂಗಿದರು.
ರಾಮರಾಯರ ಯಕ್ಷರಂಗದ ಸೇವೆಯನ್ನ ಸ್ಮರಿಸಿ
ಸಾಕೇತದ ಸ್ನೇಹಿತರು
ಅವರಿಗೆ ಆತ್ಮೀಯ ಸನ್ಮಾನ ಏರ್ಪಡಿಸಿದ್ದರು.
ಡಾ.ರತ್ನಾಕರ ಅವರು ರಾಮರಾಯರ ಪರಿಚಯ ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಮತಿ ರಾಮರಾಯರನ್ನೂ ವೇದಿಕೆಗೆ ಆಹ್ವಾನಿಸಲಾಗಿತ್ತು.
ಪುಷ್ಪಮಾಲಿಕೆಯನ್ನ
ರಾಮರಾಯರ ಶ್ರೀಮತಿಯವರೇ ಪತಿಯ ಕೊರಳಿಗೆ ಹಾಕಿ ಸನ್ಮಾನ ಪ್ರಕ್ರಿಯೆಯನ್ನ ಪ್ರೇಕ್ಷಕರ ಮನದಲ್ಲಿ
ಅಚ್ಚೊತ್ತುವಂತೆ ಮಾಡಿದರು.
ಸನ್ಮಾನಕ್ಕೆ ಉತ್ತರಿಸಿದ ರಾಮರಾಯರು
” ಶಿವಮೊಗ್ಗದ ಮಿತ್ರರು
ತಮ್ಮ ಯಕ್ಷರಂಗದ ಸೇವೆಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿಕ್ಷಣದಲ್ಲೂ ತಮ್ಮ ಪ್ರಯೋಗಗಳ ಬಗ್ಗೆ ವಿಚಾರಿಸುತ್ತಿರುತ್ತಾರೆ.
ಕಲಿಯಲು ಬಂದವರಿಗೆ ನಿರ್ವಂಚನೆಯಿಂದ ಕಲಿಸಿದ್ದೇನೆ.
ಸಾಂಪ್ರದಾಯಿಕವಾಗಿ ಹಿರಿಯರು ಕಲಿಸಿದ ಹಾದಿಯಲ್ಲೇ ಯಕ್ಷಗಾನ ಕಲೆಯ ಪರಂಪರೆ ಮುಂದುವರೆಸಿಕೊಂಡು ಬಂದಿದ್ದೇನೆ.” ಎಂದು ಹೇಳುವಾಗ ಕಣ್ಣಲ್ಲಿ ಆನಂದ ಭಾಷ್ಪವಿತ್ತು.
ಹೆಚ್ವು ಮಾತನಾಡಲಾಗದೇ
ಅರ್ಧಕ್ಕೇ ಮಾತು ಮುಗಿಸಿ ಕೈ ಮುಗಿದರು.
ಭೀಷ್ಮ ಪಾತ್ರಧಾರಿ ಮಂಜುನಾಥ್ ಅವರು ಸಾಕೇತ ಕಲಾವಿದರ ಪರಿಚಯ ಮಾಡಿಕೊಟ್ಟರು.
ವಂದನಾರ್ಪಣೆಯೊಂದಿಗೆ
ಕಾರ್ಯಕ್ರಮ ಮುಕ್ತಾಯವಾಯಿತು.