Bangalore University ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳೂ, ಮನೋವಿಜ್ಞಾನ ಪ್ರಾಧ್ಯಾಪಕರೂ ಆಗಿ ಖ್ಯಾತರಾಗಿದ್ದ ಪ್ರೊ. ಮಂಚಾಲೆ ಸೂರ್ಯನಾರಾಯಣರಾವ್ ತಿಮ್ಮಪ್ಪನವರು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ತಿಮ್ಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1941ರಲ್ಲಿ ಜನಿಸಿದರು. ಪದವಿಪೂರ್ವದವರೆಗಿನ ಶಿಕ್ಷಣವನ್ನು ಶಿವಮೊಗ್ಗದಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ನಿಮ್ಹಾನ್ಸ್ ಇಂದ ಮೆದುಳು ಮತ್ತು ಮಾನವ ಸ್ವಭಾವಗಳ ಕುರಿತಾದ ಉನ್ನತ ಅಧ್ಯಯನ ವ್ಯಾಸಂಗವನ್ನು ನಡೆಸಿದರು.
ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ತಿಮ್ಮಪ್ಪ ಅವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಹಾಗೂ ಎರಡು ಅವಧಿಗಳಿಗೆ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದರು. ಮನೋವಿಜ್ಞಾನದ ಪ್ರಾಧ್ಯಾಪಕರಾಗಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿ, ಹಲವಾರು ಡಾಕ್ಟರೇಟ್ ಮತ್ತು ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಅನೇಕ ವರ್ಷಗಳ ಕಾಲ ಮನೋವಿಜ್ಞಾನ ವಿಭಾಗವನ್ನು ಮುನ್ನಡೆಸಿದ್ದರು.
Bangalore University ಪ್ರೊ. ತಿಮ್ಮಪ್ಪನವರು ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ಆಪ್ತ ಸಂವಹನಕ್ಕೆ ಹೆಸರುವಾಸಿಯಾಗಿದ್ದರು. ಅವರು 2000 ವರ್ಷದಲ್ಲಿ ತಮ್ಮ ಏಕೈಕ ಮಗಳನ್ನು ಮತ್ತು 2007 ರಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿ ವಾಸಿಸುತ್ತಿದ್ದರಂತೆ. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದ ಅವರು ಸಾರ್ವಜನಿಕ ಚರ್ಚೆಗಳಲ್ಲಿಯೂ ಸಕ್ರಿಯರಾಗಿರುತ್ತಿದ್ದರು.
ಅಷ್ಟೊಂದು ಎತ್ತರದ ಹಾದಿ ಕ್ರಮಿಸಿದ್ದರೂ, ಆತ್ಮೀಯ ಸಹೃದಯಿಯಾಗಿದ್ದ ಅವರು ಸ್ನೇಹಿಯಾಗಿ ನಮ್ಮಂತಹವರ ಬರಹಗಳನ್ನೂ ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಅಗಲಿದ ಚೇತನಕ್ಕೆ ನಮನ.
ಲೇಖನ ಸೌಜನ್ಯ: ತಿರು ಶ್ರೀಧರ