Shivamogga Basavakendra ಕಾರ್ತಿಕ ಮಾಸದ ಪ್ರಯುಕ್ತ ಶಿವಮೊಗ್ಗ ಬಸವಕೇಂದ್ರದಿಂದ `ಚಿಂತನ ಕಾರ್ತಿಕ’ ಆಯೋಜಿಸಲಾಗಿದ್ದು ನವೆಂಬರ್ 05ರಿಂದ ಡಿಸೆಂಬರ್ 02ರವರೆಗೆ ವಿವಿಧೆಡೆ ವಿಶೇಷ ಉಪನ್ಯಾಸಗಳು ನಡೆಯಲಿವೆ.
ಸುದ್ದಿಗೋಷ್ಠಿಯಲ್ಲಿಬೀ ಬಗ್ಗೆ ಮಾಹಿತಿ ನೀಡಿದ ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ, ಶರಣ ಚಳವಳಿಯ ಸಾರವಾಗಿರುವ ವಚನಗಳ ಹಲವು ನುಡಿಗಟ್ಟುಗಳು ಚಿಂತನೆಗೆ ಹಚ್ಚುವ ಗುಣ ಹೊಂದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಿಂತನ ಕಾರ್ತಿಕಕ್ಕೆ ವಚನಗಳ ನುಡಿಗಟ್ಟುಗಳನ್ನು
ಆಯ್ದುಕೊಳ್ಳಲಾಗಿದೆ.
ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಖಃ, ನಾಳೆ ಬಪ್ಪುದು ನಮಗಿಂದೇ ಬರಲಿ, ಲೋಕದ ಡೊಂಕ ನೀವೇಕೆ ತಿದ್ದುವಿರಿ, ಮನದ ಮುಂದಣ ಆಸೆಯೇ ಮಾಯೆ, ಆನು ಒಲಿದಂತೆ ಆಡುವೆ ಎಂಬಿತ್ಯಾದಿ ನುಡಿಗಟ್ಟುಗಳ ಬಗ್ಗೆ ವಿಶೇಷ ಉಪನ್ಯಾಸಗಳು ಪ್ರತೀ ದಿನ ವಿವಿಧೆಡೆ ನಡೆಯಲಿವೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಶಿವಮೊಗ್ಗ ಬಸವಕೇಂದ್ರ ಹಾಗೂ ಚಿಕ್ಕಮಗಳೂರು ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯವಹಿಸಿ, ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭ ನವೆಂಬರ್ 5ರಂದು ಬಸವಕೇಂದ್ರದಲ್ಲಿ ನಡೆಯಲಿದ್ದು, ಬೆಂಗಳೂರು ಬಸವ ಸಮಿತಿಯ ಶರಣ ಅರವಿಂದ ಜತ್ತಿ ಉದ್ಘಾಟನೆ ಮಾಡಲಿದ್ದಾರೆ. ಬಸವಕೇಂದ್ರದ ಅಧ್ಯಕ್ಷ ಶರಣ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
Shivamogga Basavakendra ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕ ಪ್ರಸನ್ನ ಡಿ. ಸಾಗರ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಜಿ.ವಿ. ಹರಿಪ್ರಸಾದ್, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತಹಿರಿಯ ಪತ್ರಕರ್ತ ಎನ್. ಮಂಜುನಾಥ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಹಾಸ ಹಿರೇಮಳಲಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಗುವುದು. ವಿದ್ಯುತ್ ಇಲಾಖೆ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶರಣ ಎಸ್.ಜಿ. ಶಶಿಧರ್ ಉಪಸ್ಥಿತರಿರುವರೆಂದು ವಿವರಿಸಿದರು.
ಸಮಾರೋಪ
ಚಿಂತನ ಕಾರ್ತಿಕದ ಸಮಾರೋಪ ಸಮಾರಂಭ ಡಿಸೆಂಬರ್ 2ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಬಸವಕೇಂದ್ರದಲ್ಲಿ ನಡೆಯಲಿದೆ. ಬಸವಕೇಂದ್ರದ ಶರಣ ಜಿ, ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶ್ರೀರಂಜನಿ ದತ್ತಾತ್ರಿ ನಿತ್ಯ ತೃಪ್ತಂಗೆ ನೈವೇದ್ಯದ ಹಂಗೇಕೆ? ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಅಕ್ಕನ ಬಳಗದ ಜಯಮ್ಮ ಕುಬ್ಸದ್ ಉಪಸ್ಥಿತರಿರುತ್ತಾರೆ ಎಂದರು.