Madhu Bangarappa ಕಳೆದ ಐದು ದಿನಗಳಿಂದ ಭೂಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ೧೫೦ಕ್ಕೂ ಹೆಚ್ಚು ರೈತರನ್ನು ಶುಕ್ರವಾರ ಕಾರ್ಗಲ್ ಚೌಡೇಶ್ವರಿ ದೇವಸ್ಥಾನದ ಬಳಿ ಬಂಧಿಸಲಾಯಿತು.
ಶರಾವತಿ ಮುಳುಗಡೆ ಸೇರಿದಂತೆ ವಿವಿಧ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರಾದವರಿಗೆ ಹಕ್ಕುಪತ್ರ, ಅರಣ್ಯಹಕ್ಕು ಕಾಯ್ದೆ ವಯೋಮಿತಿ ಸಡಿಲ, ಬಗರ್‌ಹುಕುಂ ಸೇರಿದಂತೆ ವಿವಿಧ ಭೂಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಅಕ್ಟೋಬರ್ ೨೧ರಿಂದ ಡಾ. ಎಚ್.ಗಣಪತಿಯಪ್ಪ ರೈತ ಸಂಘ, ಮಲೆನಾಡು ರೈತ ಹೋರಾಟ ವೇದಿಕೆ ಇನ್ನಿತರೆ ಸಂಘಟನೆಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದವು.
ಸಚಿವರು ಮತ್ತು ಶಾಸಕರು ತಮ್ಮ ಅಹವಾಲು ಕೇಳಲು ಬರುತ್ತಿಲ್ಲ ಎನ್ನುವ ದೂರಿನೊಂದಿಗೆ ರೈತ ಹೋರಾಟಗಾರರು ಗುರುವಾರ ಸಾಗರದಿಂದ
ಲಿಂಗನಮಕ್ಕಿ ಜಲಾಶಯಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಗಲ್‌ನಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಿ ವಾಪಾಸ್ ಹೋಗುತ್ತಿದ್ದಂತೆಯೆ ಪೊಲೀಸರು ಪಾದಯಾತ್ರೆನಿರತ ರೈತರನ್ನು ಬಂಧಿಸಿದ್ದಾರೆ. ನಂತರ ರೈತರನ್ನು ಸಾಗರದಲ್ಲಿ ಬಿಡುಗಡೆ ಮಾಡಲಾಯಿತು.
ಸರ್ಕಾರದ ಹಂತದಲ್ಲಿ ಮಾತುಕತೆ :
Madhu Bangarappa ಈಗಾಗಲೆ ಮಲೆನಾಡು ರೈತರ ಭೂಸಮಸ್ಯೆ ಸರ್ಕಾರದ ಅರಿವಿನಲ್ಲಿದೆ. ನಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಭೂಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಟಾಸ್ಕ್‌ಫೋರ್ಸ್ ರಚನೆಗೆ ಸರ್ಕಾರ ಸಿದ್ದವಿದೆ. ಸದ್ಯದಲ್ಲಿಯೆ ನೀವು ಕೆಲವರು ಬನ್ನಿ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಟಾಸ್ಕ್‌ಫೋರ್ಸ್ ರಚನೆ ಸೇರಿದಂತೆ ವಿವಿಧ ಭೂಸಮಸ್ಯೆ ಬಗೆಹರಿಸುವ ಕುರಿತು ಚರ್ಚೆ ಮಾಡೋಣ. ದಯವಿಟ್ಟು ಪ್ರತಿಭಟನೆ ಕೈಬಿಡಿ ಎಂದು ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಸಚಿವರ ಮಾತಿಗೆ ಸೊಪ್ಪು ಹಾಕದ ಹೋರಾಟಗಾರರು :
ನಂತರ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವರಿಗೆ ನಮ್ಮ ಮನವಿಯನ್ನು ತಿಳಿಸಿದ್ದೇವೆ. ದುರಾದೃಷ್ಟವೆಂದರೆ ಸರ್ಕಾರದ ಹಂತದಲ್ಲಿ ನಮ್ಮ ಬೇಡಿಕೆ ಕುರಿತು ಸಣ್ಣ ಚರ್ಚೆಯೂ ನಡೆದಿಲ್ಲ. ನಾವು ರಾಜ್ಯ ಸರ್ಕಾರವನ್ನು ನಂಬಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಮಲೆನಾಡು ರೈತರ ಹಿತಕ್ಕಾಗಿ ಕಾಯ್ದೆ ಬದಲಾವಣೆ ಮಾಡುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ನಾವು ಪ್ರತಿಭಟನೆ ನಡೆಸುವ ದಿನ ಶಾಸಕರು ಸಾಗರದಲ್ಲಿ ಇದ್ದರೂ ನಮ್ಮನ್ನು ಭೇಟಿ ಮಾಡಿಲ್ಲ. ತಾಲ್ಲೂಕಿನಲ್ಲಿ ಎಂಟರಿಂದ ಹತ್ತುಸಾವಿರ ಕುಟುಂಬ ಮುಳುಗಡೆ ಸಂತ್ರಸ್ತರದ್ದು ಇದೆ. ಶಾಸಕರು ಅವರಿಗೆ ದ್ರೋಹ ಬಗೆದಿದ್ದಾರೆ. ಹೋರಾಟ ನಿಲ್ಲಿಸುವ ಪ್ರಶ್ನೆಯೆ ಇಲ್ಲ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಮಧು ಬಂಗಾರಪ್ಪ ರೈತನ ಮಗನಾಗಿದ್ದು ನಮಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎನ್ನುವ ನಂಬಿಕೆ ಇತ್ತು. ಆದರೆ ಮಧು ಬಂಗಾರಪ್ಪ ಬಂದು ಹೋದ ಮೇಲೆ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ. ಇದು ರೈತ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪರಮೇಶ್ವರ ದೂಗೂರು, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಇಲಿಯಾಸ್, ಜಿ.ಟಿ.ಸತ್ಯನಾರಾಯಣ, ಗಣೇಶ್ ತುಮರಿ ಇನ್ನಿತರರು ಹಾಜರಿದ್ದರು.