Kuvempu University ಕುವೆಂಪು ವಿಶ್ವವಿದ್ಯಾಲಯವು ಸಮಯಕ್ಕೆ ಸರಿಯಾಗಿ ಶುಲ್ಕಗಳನ್ನು ತುಂಬದವರಿಂದ ದಂಡಸಮೇತವಾಗಿ ವಸೂಲಿಮಾಡುತ್ತಿದೆ. ಆದರೆ ಕಟ್ಟಿಸಿಕೊಂಡ ಶುಲ್ಕಕ್ಕನುಗುಣವಾಗಿ ಅಂಕಪಟ್ಟಿಗಳನ್ನು ವಿತರಿಸದಿರುವುದು ಖಂಡನೀಯ ಎಂದು ಎನ್ ಎಸ್ ಯು ಐ ಹೇಳಿದೆ.
ಸಾವಿರಾರು ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಮುಗಿಸಿಕೊಂಡು ಮುಂದಿನ ವಿದ್ಯಾಭ್ಯಾಸಕ್ಕಾಗಲಿ ಅಥವಾ ಉದ್ಯೋಕ್ಕಾಗಲಿ ಹೋಗಬೇಕೆಂಬ ಆಸೆಗೆ ವಿಶ್ವವಿದ್ಯಾಲಯವು ಮುಳ್ಳಾಗಿದೆ. ಪದವಿ ಮುಗಿಸಿದರೂ ಅಂಕಪಟ್ಟಿ ಸಿಗದೆ ವಿದ್ಯಾರ್ಥಿಗಳು ಅಲೆದಾಡುವ ಸ್ಥಿತಿ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗು ವೃತ್ತಿ ಭವಿಷ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂದಿದೆ.
ವಿಶ್ವವಿದ್ಯಾಲಯವು ಪಿ ಪಿ ಸಿ ಹೆಸರಿನಲ್ಲಿ 485 ರೂ ಗಳನ್ನು ವಸೂಲಿ ಮಾಡಿ ವಿದ್ಯಾರ್ಥಿಗಳಿಗೆ ಹೊರೆನೀಡುತ್ತಿದೆ. ಅಂಕಪಟ್ಟಿಯ ಶುಲ್ಕ ಪಡೆದು ವರ್ಷಗಳೇ ಕಳೆದರೂ ಅಂಕಪಟ್ಟಿ ನೀಡದಿದ್ದರೂ ಪಿಪಿಸಿ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಎನ್ ಎಸ್ ಯುಐ , ವಿಶ್ವವಿದ್ಯಾಲಯವು ಬಿ.ಇಡಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಿಬಿಸಿಎಸ್ ಅಳವಡಿಳಿಸಿಕೊಳ್ಳದಿರುವ ಕಾರಣದಿಂದ ಈಗಾಗಲೇ ವಿಶ್ವವಿದ್ಯಾಲಯದಿಂದ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಎಬಿಸಿ ಎಂದು ನಮೂದಾಗಿದ್ದು, ಇದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಜೀವನಕ್ಕೆ ಸಮಸ್ಯೆಯಾಗುತ್ತಿರುವುದರಿಂದ ಈಗಾಗಲೇ Kuvempu University ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಇಡಿ ಪದವಿ ಪಡೆದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ತಾವುಗಳು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮುಂಬರುವ ವಿದ್ಯಾರ್ಥಿಗಳಿಗೆ ಈ ಅನ್ಯಾಯವನ್ನು ಸರಿಪಡಿಸಿ ತ್ವರಿತವಾಗಿ ಬಿ.ಇಡಿ ಪಠ್ಯಕ್ರಮವನ್ನು ಸಿಬಿಸಿಎಸ್ ಗೆ ಅಳವಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಗೊಳಿಸಲು ಸೂಚಿಸಬೇಕೆಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಕುಲಪತಿಗಳು ಕೂಡಲೇ ಅಂಕ ಪಟ್ಟಿಗಳನ್ನು ನೀಡುವ ಭರವಸೆ ನೀಡಿದರು. ಪಿ ಪಿ ಸಿ ಪಡೆಯುತ್ತಿದ್ದ ಶುಲ್ಕವನ್ನು ಇಳಿಸುವ ಭರವಸೆಯನ್ನೂ ಕೊಟ್ಟು ಈ ಹಿಂದೆ ಆದ ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ನೀಡುವುದಾಗಿ ಹೇಳಿದರು.