B.Y. Vijayendra ಬಳ್ಳಾರಿಯ ಸಂಸದ ಇ.ತುಕಾರಾಂ ಅವರು ಎಲ್ಲ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇವತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ಅವರಿಗೆ ಇ.ತುಕಾರಾಂ ಅನರ್ಹತೆ ಸಂಬಂಧ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಕುರಿತು ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಬಿಜೆಪಿ, ಈ ನಿಗಮದ ಹಗರಣವನ್ನು ಮುಂದಿಟ್ಟು ಹೋರಾಟಗಳನ್ನು ನಡೆಸಿದೆ. ನಂತರ ತನಿಖೆ ಆಧಾರದಲ್ಲಿ ಕಳೆದ ತಿಂಗಳು ಇ.ಡಿ. ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿದ್ದಾಗಿ ತಿಳಿಸಿದ್ದಾರೆ ಎಂದರು.
ಈ ಸಂಬಂಧ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿ ಹಣವನ್ನು ಲೂಟಿ ಮಾಡಿದ ಕಾಂಗ್ರೆಸ್ ಸರಕಾರವು ಆ ಹಣವನ್ನು ದುರ್ಬಳಕೆ ಮಾಡಿಕೊಂಡಿತ್ತು. ಬಳ್ಳಾರಿ, ಇತರ ಲೋಕಸಭಾ ಕ್ಷೇತ್ರಕ್ಕೆ ಆ ಹಣವನ್ನು ಬಳಸಿದ್ದು ಬೆಳಕಿಗೆ ಬಂದಿದೆ ಎಂದು ಗಮನ ಸೆಳೆದರು.
ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ಉಪ ಚುನಾವಣೆ ನಡೆಯುತ್ತಿದೆ. ಮಾದರಿ ನೀತಿಸಂಹಿತೆ ಅನುಷ್ಠಾನಗೊಂಡಿದೆ. ಇದರ ನಡುವೆಯೂ ರಾಜ್ಯ ಸರಕಾರವು ಅಕ್ರಮವಾಗಿ ಇವತ್ತು ಜಾಹೀರಾತುಗಳನ್ನು ನೀಡುವುದರ ಮೂಲಕ ಎಲ್ಲ ಮಾದರಿ ನೀತಿಸಂಹಿತೆಯನ್ನು ಗಾಳಿಗೆ ತೂರುತ್ತಿದೆ ಎಂದು ಆಕ್ಷೇಪಿಸಿದರು. ಈ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಕ್ರಮ ಜರುಗಿಸುವಂತೆ ನಾವು ಒತ್ತಾಯಿಸಿದ್ದೇವೆ ಎಂದರು.
B.Y. Vijayendra ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಸಂಡೂರಿನಲ್ಲಿ ಆದ ಅಕ್ರಮಗಳು, ಉಪ ಚುನಾವಣೆ ಸಂದರ್ಭದಲ್ಲಿ ಕಾನೂನನ್ನು ಗಾಳಿಗೆ ತೂರುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಎಷ್ಟು ಗೌರವ ಕೊಡುತ್ತದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಇ.ಡಿ.ಯು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಕ್ರಮ ಕುರಿತು ತಿಳಿಸಿದೆ. ನಮಗಿರುವ ಮಾಹಿತಿ ಪ್ರಕಾರ ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲೂ ವಾಲ್ಮೀಕಿ ನಿಗಮದ ಅವ್ಯವಹಾರದ ಹಣ ದುರ್ಬಳಕೆ ಆಗಿದೆ ಎಂಬ ವಿಚಾರಗಳು ಗಮನಕ್ಕೆ ಬರುತ್ತಿವೆ. ಆ ಕ್ಷೇತ್ರಗಳಲ್ಲಿ ಗೆದ್ದವರ ಅನರ್ಹತೆ ಕುರಿತು ಮನವಿ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಮುಂದಿನ ದಿನಗಳಲ್ಲಿ ಇತರ ಕ್ಷೇತ್ರಗಳ ವಿಚಾರವೂ ಬಹಿರಂಗ ಆಗಲಿದೆ. ಇವತ್ತು ನಾವು ಬಳ್ಳಾರಿ ಲೋಕಸಭಾ ಕ್ಷೇತ್ರದ ವಿಷಯದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ತುಕಾರಾಂ ಅವರನ್ನು ಅನರ್ಹಗೊಳಿಸಲು ಕೋರಿದ್ದೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಚನ್ನಪಟ್ಟಣದಲ್ಲಿ ಅಭ್ಯರ್ಥಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರೇ ಸ್ಪರ್ಧೆ ಮಾಡಬೇಕು; ಅವರಿಗೆ ಅವಕಾಶ ಸಿಗಬೇಕು ಎಂದು ಆಶಿಸುವುದಾಗಿ ಹೇಳಿದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇದ್ದರು.
B.Y. Vijayendra ಇ.ತುಕಾರಾಂ ಅವರ ಸಂಸದ್ ಸದಸ್ಯತ್ವ ಅನರ್ಹಗೊಳಿಸಲು ಮನವಿ- ಬಿ.ವೈ.ವಿಜಯೇಂದ್ರ
Date: