Sadhguru ಜಗ್ಗಿ ವಾಸುದೇವ್ (ಸದ್ಗುರು) ನಡೆಸುತ್ತಿರುವ ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ತನ್ನ ಇಬ್ಬರು ಪುತ್ರಿಯರನ್ನು ಬಂಧಿಯಾಗಿಸಿ, ಬ್ರೈನ್‌ವಾಶ್ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ (ಅ.18) ವಜಾಗೊಳಿಸಿದೆ ಅಥವಾ ಪ್ರಕರಣವನ್ನೇ ಮುಕ್ತಾಯಗೊಳಿಸಿದೆ.
ಇಬ್ಬರು ಮಹಿಳೆಯರು ವಯಸ್ಕರಾಗಿದ್ದಾರೆ. ಹೇಬಿಯಸ್ ಕಾರ್ಪಸ್‌ನ ಉದ್ದೇಶ ಈಡೇರಿದೆ. ಆದ್ದರಿಂದ ಈ ವಿಚಾರದಲ್ಲಿ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಆದೇಶದಲ್ಲಿ ತಿಳಿಸಿದೆ.
ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಮಾಡಿರುವ ಇತರ ಆರೋಪಗಳ ಕುರಿತು ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್ ನೀಡಿರುವ ನಿರ್ದೇಶನವನ್ನೂ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಇದರಿಂದ ಜಗ್ಗಿವಾಸುದೇವ್‌ಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವರ್ಗಾಯಿಸಿಕೊಂಡಿತ್ತು. ಏಕೆಂದರೆ, ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ದ ಇಶಾ ಫೌಂಡೇಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿವರ : ತಮ್ಮ ಇಬ್ಬರು ಪುತ್ರಿಯರಾದ ಗೀತಾ ಕಾಮರಾಜ್ ಅಲಿಯಾಸ್ ಮಾ ಮತಿ (42) ಮತ್ತು ಲತಾ ಕಾಮರಾಜ್ ಅಲಿಯಾಸ್ ಮಾ ಮಾಯು(39) ಅವರು ಇಶಾ ಸಂಸ್ಥೆಯೊಳಗೆ ಬಂಧಿಯಾಗಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ಎಂಬವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
Sadhguru ಇಶಾ ಯೋಗ ಕೇಂದ್ರದಲ್ಲಿನ ಬೋಧನೆಗಳಿಂದ ಪ್ರಭಾವಿತರಾದ ನನ್ನ ಹೆಣ್ಣುಮಕ್ಕಳು ಬ್ರೈನ್ ವಾಶ್ ಆಗಿದ್ದು, ಸನ್ಯಾಸಿ ಮಾರ್ಗವನ್ನು ಅನುಸರಿಸಿದ್ದಾರೆ. ಅವರ ಹೆಸರನ್ನು ಬದಲಾಯಿಸಲಾಗಿದೆ. ಈಗ ಪೋಷಕರನ್ನೂ ಭೇಟಿ ಮಾಡಲು ಅವರು ನಿರಾಕರಿಸುತ್ತಿದ್ದಾರೆ ಎಂದು ಅರ್ಜಿದಾರ ಕಾಮರಾಜ್ ಆರೋಪಿಸಿದ್ದರು.
2016ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕಳೆದ ಸೆಪ್ಟೆಂಬರ್ 30ರಂದು ನಡೆಸಿದ್ದ ಹೈಕೋರ್ಟ್,ಇಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ವಿವರಗಳನ್ನು ನೀಡುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರಿಗೆ ನ್ಯಾಯಾಲಯ ಆದೇಶಿಸಿತ್ತು.
ಕಾಮರಾಜ್ ಅವರ ಇಬ್ಬರು ಪುತ್ರಿಯರು ಹೈಕೋರ್ಟ್ ಮುಂದೆ ಹಾಜರಾಗಿ, ನಮ್ಮನ್ನು ಬಂಧಿಸಿಟ್ಟಿಲ್ಲ, ಸ್ವಇಚ್ಚೆಯಿಂದ ಯೋಗ ಕೇಂದ್ರದಲ್ಲಿ ಇದ್ದೇವೆ ಎಂದು ಹೇಳಿದ್ದರು. ಆದರೂ, ಸತ್ಯ ತಿಳಿಯಲು ಈ ವಿಷಯದಲ್ಲಿ ಕೆಲ ಪರಿಶೀಲನೆಯ, ಚರ್ಚೆಯ ಅಗತ್ಯವಿದೆ ಎಂದಿದ್ದ ಹೈಕೋರ್ಟ್, ಇಶಾ ಯೋಗ ಕೇಂದ್ರದ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗೆ ಸೂಚಿಸಿತ್ತು.
ಈ ಆದೇಶದ ಮರುದಿನವೇ ಇಶಾ ಯೋಗ ಕೇಂದ್ರಕ್ಕೆ ಪೊಲೀಸರು ಮತ್ತು ಅಧಿಕಾರಿಳು ತೆರಳಿ ಪರಿಶೀಲನೆ ನಡೆಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಇಶಾ ಫೌಂಡೇಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.