High Court of Karnataka ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಂಚಿನ ಪರಶುರಾಮ ಪ್ರತಿಮೆಗೆ ಬದಲಾಗಿ ಹಿತ್ತಾಳೆ, ತಾಮ್ರ ಮತ್ತು ಸತು ಬಳಸಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಜನರ ಹಣವನ್ನು ಲೂಟಿ ಮಾಡಲಾಗಿದೆ ಎಂದು ಕಿಡಿಕಾರಿದೆ.
ಬೆಂಗಳೂರಿನ ಸರ್. ಎಂ ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಯಾಗಿರುವ ಕಲಾವಿದ ಕೃಷ್ಣ ನಾಯಕ್ ಅವರು ತಮ್ಮ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.
ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಖಚಿತಪಡಿಸಿರು ಪೀಠ, “ನಿಮಗೆ ಕೊಟ್ಟಿರುವುದು ನಿರ್ಮಿತಿ ಕೇಂದ್ರ ಅಥವಾ ದೂರುದಾರರಿಗೆ ಸೇರಿದ ದುಡ್ಡಲ್ಲ, ಅದು ಜನರ ದುಡ್ಡು. ನೀವು ಜನರ ಹಣದಲ್ಲಿ ಆಟವಾಡಲಾಗದು” ಎಂದು ಖಾರವಾಗಿ ನುಡಿದಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
“ಪ್ರತಿಮೆಗೆ ಕಂಚು ಬಳಸುವ ಬದಲು ಹಿತ್ತಾಳೆ ಮತ್ತು ಸತುವನ್ನೇಕೆ ಬಳಸಲಾಗಿದೆ? ಪ್ರತಿಮೆ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗಿದೆ. 1.83 ಕೋಟಿ ರೂಪಾಯಿ ಪೈಕಿ ಈಗಾಗಲೇ ನಿಮಗೆ 1.20 ಕೋಟಿ ರೂಪಾಯಿ ಪಾವತಿಯಾಗಿದೆ. ಇದು ಸಾರ್ವಜನಿಕರ ಹಣ. ಎಲ್ಲವೂ ದಾಖಲೆಯಲ್ಲಿರುವುದರಿಂದ ಯಾವುದೇ ಸೂಚನೆ ಪಡೆಯುವ ಅಗತ್ಯವೇ ಇಲ್ಲ. ಜನರ ಹಣದ ಜೊತೆ ಆಟ ಆಡುವವರನ್ನು ಬಿಡಲಾಗದು. ಪುಣ್ಯಕ್ಕೆ ಪ್ರತಿಮೆ ಮಾರನೇಯ ದಿನ ಕುಸಿದಿಲ್ಲ. ಅದು ಬೀಳುವ ಮುಂಚೆಯೇ ತೆರವು ಮಾಡಲಾಗಿದೆ” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅರ್ಜಿದಾರರ ವಿರುದ್ಧ ಮೌಖಿಕವಾಗಿ ಕಿಡಿಕಾರಿದ್ದಾರೆ
“35 ಅಡಿ ಎತ್ತರದ ಪ್ರತಿಮೆಯ ಭಾರವನ್ನು ಹಿತ್ತಾಳೆ ಮತ್ತು ಸತು ತಾಳುತ್ತದೆಯೇ? ಪ್ರತಿಮೆಗೆ ಕಂಚನ್ನೇ ಬಳಸಬೇಕು ಎಂದು ಹೇಳಿರುವುದಕ್ಕೆ ನಿಖರ ಕಾರಣವಿದೆ. ಹಿತ್ತಾಳೆ ಮತ್ತು ಸತು ಬಳಸಿ ಪ್ರತಿಮೆ ನಿರ್ಮಿಸಲು 1.20 ಕೋಟಿ ರೂಪಾಯಿ ಏಕೆ ಪಡೆದಿರಿ? ಕಂಚು ಬಳಕೆ ಮಾಡದಿರುವುದು ಕ್ರಿಮಿನಲ್ ಅಪರಾಧ. ನಿರ್ಮಿತಿ ಕೇಂದ್ರದ ಬಗ್ಗೆ ಚೆನ್ನಾಗಿ ತಿಳಿದಿದೆ. ಅದರ ಬಗ್ಗೆ ಕಡಿಮೆ ಮಾತನಾಡಿದಷ್ಟು ಒಳ್ಳೆಯದು” ಎಂದು ಹೈಕೋರ್ಟ್ ಚಾಟಿ ಬೀಸಿದೆ.
High Court of Karnataka ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ “ಪರಶುರಾಮ ಪ್ರತಿಮೆ ತಲೆಯ ಭಾಗ ಭಾರ ತಾಳಲಾರದ್ದರಿಂದ ಅದರ ಜೋಡಣೆ ಬದಲಿಸಲಾಗಿದೆ. ಕಂಚಿನಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ಹೇಳಿದ್ದು, ನಾವು ತಾಮ್ರ, ಸತು ಮತ್ತು ಹಿತ್ತಾಳೆಯನ್ನು ಬಳಕೆ ಮಾಡಿದ್ದೇವೆ. ಸತು ಮತ್ತು ಹಿತ್ತಾಳೆಯು ಕಂಚಿಗೆ ಸಮನಾಗುತ್ತದೆ” ಎಂದು ಸಮಜಾಯಿಷಿ ನೀಡಿದ್ದಾರೆ.
“ಕೆಲಸದ ಭಾಗವಾಗಿ 1.20 ಕೋಟಿ ರೂಪಾಯಿ ಸ್ವೀಕರಿಸಿದ್ದೇವೆ. ನಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೇವೆ. ಆಮೇಲೆ ಅದನ್ನು ಪರಿಶೀಲಿಸಬಹುದು. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣವೂ ಒಂದಾಗಿತ್ತು. ಉದ್ಘಾಟನೆಯ ಹಿನ್ನೆಲೆಯಲ್ಲಿ ಬೇಗ ಮಾಡಿ ಮುಗಿಸಲಾಗಿತ್ತು. ಆನಂತರ ಜಿಲ್ಲಾಧಿಕಾರಿಯು ಅದನ್ನು ಪುನರ್ ನಿರ್ಮಾಣ ಮಾಡುವಂತೆ ಸೂಚಿಸಿದ್ದಾರೆ. ಈಗ ಸರ್ಕಾರ ಇಡೀ ಪ್ರಕರಣವನ್ನು ತನಿಖೆಗೆ ಒಪ್ಪಿಸಿದ್ದರಿಂದ ಅಲ್ಲಿಗೆ ತೆರಳಿ ಕೆಲಸ ಮಾಡಲಾಗುತ್ತಿಲ್ಲ. ಅವಕಾಶ ನೀಡಿದರೆ ಕಂಚಿನಲ್ಲೇ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು” ಎಂದಿದ್ದಾರೆ.
“ದೂರುದಾರರು ರಾಜಕೀಯ ಪಕ್ಷದ ಪ್ರತಿನಿಧಿ. ಅವರು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸದೇ ಹೈಕೋರ್ಟ್‌ನ ವಿಭಾಗೀಯ ಪೀಠವು ವಜಾ ಮಾಡಿದೆ. ಹಿಂದಿನ ಸರ್ಕಾರ ಮತ್ತು ಮಾಜಿ ಸಚಿವರ ವರ್ಚಸ್ಸು ಹಾಳು ಮಾಡುವ ಉದ್ದೇಶದಿಂದ ಈ ಕೆಲಸ ಮಾಡಲಾಗುತ್ತಿದೆ. ದೂರುದಾರರು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಹಾಗಾಗಿ, ಈ ರೀತಿ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ನೀಡಿರುವ ವರದಿಯ ಪ್ರಕಾರ ಅರ್ಜಿದಾರರು ಪರಶುರಾಮ ಪ್ರತಿಮೆಗೆ ಕಂಚು ಬಳಸಿಲ್ಲ. ಶೇ. 80ರಷ್ಟು ಹಿತ್ತಾಳೆ ಮತ್ತು ಶೇ.20ರಷ್ಟು ಸತು ಬಳಕೆ ಮಾಡಿದ್ದಾರೆ ಎಂದು ವರದಿ ನೀಡಿದೆ. ಆದರೆ, ನಿರ್ಮಿತಿ ಕೇಂದ್ರ ಮತ್ತು ಅರ್ಜಿದಾರರು ಕಂಚು ಬಳಕೆ ಮಾಡಿದೆ ಎಂದು ಹೇಳಿದೆ. ನಿರ್ಮಿತಿ ಕೇಂದ್ರ ಹೇಳುತ್ತಿರುವುದನ್ನು ನೋಡಿದರೆ ಇನ್ನಷ್ಟು ತನಿಖೆಯಾಗಬೇಕಿದೆ. ಜಿಲ್ಲಾಧಿಕಾರಿ ಪ್ರತಿಮೆ ತೆರವು ಮಾಡಿ ಎಂದು ಆದೇಶ ಮಾಡಿದ್ದಾರೆ. ಈ ಆದೇಶವನ್ನು ನಿರ್ಮಿತಿ ಕೇಂದ್ರವು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ತನಿಖೆ ಪ್ರಗತಿಯಲ್ಲಿರುವುದರಿಂದ ತೆರವು ಮಾಡುವಂತೆ ಆದೇಶಿಸಿದ್ದನ್ನು ತಡೆಯಿರಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ತನಿಖೆ ನಡೆಯಲಿ, ಅರ್ಜಿದಾರರಿಗೂ ಹಣ ತಲುಪಿದೆಯೋ ಗೊತ್ತಿಲ್ಲ. ಅವರ ಪಾತ್ರವೂ ಬಹಿರಂಗವಾಗಬೇಕಿದೆ. ಇದರಲ್ಲಿ ನಿಜವಾದ ಅಪರಾಧಿ ಯಾರು ಎಂಬುವುದು ತಿಳಿಯಬೇಕಿದೆ” ಎಂದಿದ್ದಾರೆ.