Rotary Shivamogga ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಜವಾದ ಶಿಲ್ಪಿಗಳು. ಶಿಕ್ಷಕರ ಸಮರ್ಪಣಾ ಭಾವದಿಂದ ಶಾಲೆಯು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜೇಂದ್ರ ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಶಿಕ್ಷಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ನೀಡುವ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಹಂತ ಹಂತವಾಗಿ ಸಾಧನೆ ಹಾದಿಯಲ್ಲಿ ಮುನ್ನಡೆಯುತ್ತಾರೆ ಎಂದು ತಿಳಿಸಿದರು.
ರೋಟರಿ ಶಾಲೆಯಲ್ಲಿ ಸ್ಥಾಪಿತವಾದ “ಫಂಡ್ ಫಾರ್ ನೀಡಿ” ನಿಧಿಗೆ ಸಹಾಯಧನ ನೀಡಿ ಮಾತನಾಡಿದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್, ಶಾಲೆಯ ಹಳೆಯ ವಿದ್ಯಾರ್ಥಿ ಸುನೀಲ್. ಎಂ.ಡಿ., ಇತ್ತೀಚಿನ ವರ್ಷಗಳಲ್ಲಿ ಶಾಲೆಯು ಉತ್ತಮ ಸಾಧನೆ ಮಾಡುತ್ತಿದ್ದು, ಶಿಕ್ಷಕರ ಸಮರ್ಪಣಾ ಭಾವ ಹಾಗೂ ವಿದ್ಯಾರ್ಥಿಗಳ ಪ್ರಯತ್ನದಿಂದ ಶಾಲೆ ಫಲಿತಾಂಶ ಉತ್ತಮವಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕರಿಗೆ ಅಭಿನಂದಿಸಲಾಯಿತು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 10,000 ರೂ. ನಗದು ಬಹುಮಾನವನ್ನು ಸುನೀಲ್.ಎಂ.ಡಿ. ನೀಡಿ ಅಭಿನಂದಿಸಿದರು. ಫಂಡ್ ಫಾರ್ ನೀಡಿ ಖಾತೆಗೆ 5೦೦೦ ದೇಣಿಗೆ ನೀಡಿದರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಸಾಧಕರಿಗೆ ರೋಟರಿ ಪೂರ್ವ ಖಜಾಂಚಿ ಗಣೇಶ್ ಅವರು ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ.ಎಂ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರ. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಕೆಲಸ ಮಾಡಬೇಕು. ಶಾಲೆಯು ಶೇ. 100 ಫಲಿತಾಂಶ ಗಳಿಸುವಲ್ಲಿ ಶ್ರಮವಹಿಸಿದ ಶಿಕ್ಷಕರಿಗೆ ಆಡಳಿತ ಮಂಡಳಿ ವತಿಯಿಂದ ನಗದು ಬಹುಮಾನ ನೀಡಲಾಗುವುದು ಎಂದರು.
ರೋಟರಿ ಪೂರ್ವ ಕ್ಲಬ್, ರೋಟರಿ ಶಾಲಾ ವಿದ್ಯಾರ್ಥಿ ವೃಂದ ಹಾಗೂ ಟ್ರಸ್ಟ್ ಸಹಕಾರ್ಯದರ್ಶಿ ನಾಗವೇಣಿ ಎಸ್ ಆರ್ ವತಿಯಿಂದ ಪ್ರತ್ಯೇಕವಾಗಿ ಶಾಲೆಯ ಬೋಧಕ ಹಾಗೂ ಬೋಧಕೇತರ ವೃಂದದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಏರ್ಪಡಿಸಿದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
Rotary Shivamogga ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ, ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್, ಖಜಾಂಚಿ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಇನ್ನರ್‌ವ್ಹೀಲ್ ಕಾರ್ಯದರ್ಶಿ ಲತಾ ಸೋಮಶೇಖರ್, ಸದಸ್ಯೆ ಬಿಂದು ವಿಜಯಕುಮಾರ್, ಸೀಮಾ, ಪ್ರಾಚಾರ್ಯ ಸೂರ್ಯನಾರಾಯಣನ್, ಕುಮಾರ್.ಎನ್., ಗೌತಮಿ.ಎಂ., ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.