Bangalore CCB Police ಜಿಎಸ್‌ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಮೊಟ್ಟ ಮೊದಲ ಬಾರಿಗೆ ಬಂಧಿಸಿರುವಂತಹ ಘಟನೆ ನಡೆದಿದೆ.
ಜಿಎಸ್‌ಟಿ ಸಂಬಂಧಿತ ಪ್ರಕರಣವೊಂದನ್ನು ಮುಚ್ಚಿಹಾಕಲು 1.5 ಕೋಟಿ ರೂ. ಹಣ ಪಡೆದಿದ್ದ ಕೇಂದ್ರದ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಿಎಸ್ಟಿಯ ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೋನಾಲಿ ಸಹಾಯ್, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ನಾಗೇಶ್ ಬಾಬು ಬಂಧಿತ ಅಧಿಕಾರಿಗಳು.
ಕೇಂದ್ರದ ಜಿಎಸ್‌ಟಿ ಅಧಿಕಾರಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ ಮೊಟ್ಟಮೊದಲ ಪ್ರಕರಣ ಇದಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.
Bangalore CCB Police ಕೇಸ್ ಮುಚ್ಚಿಹಾಕುವುದಾಗಿ ಜಿಎಸ್‌ಟಿ ಅಧಿಕಾರಿಗಳು ಹಣ ಪಡೆದು ಬಳಿಕ ಪರಾರಿಯಾಗಿದ್ದರು. ಈ ಬಗ್ಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಓರ್ವ ಉದ್ಯಮಿ ದೂರು ನೀಡಿದ್ದರು. ದೂರು ಆಧರಿಸಿ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ, ಜಿಎಸ್‌ಟಿ ವಂಚನೆ ಪತ್ತೆ ದಾಳಿ ರೂಪದಲ್ಲಿ ಅವರು ಭಾರೀ ಅಕ್ರಮ ಕೃತ್ಯವೆಸಗಿದ್ದರು.
ಬೆಂಗಳೂರು ನಗರ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಪೊಲೀಸರಿಂದ ಕಾರ್ಯಾಚರಣೆ ಮಾಡಿ ಬಂಧಿಸಲಾಗಿದೆ. ಪ್ರಕರಣವನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದರು.