Vijay Technnocrats ಆರೋಗ್ಯ ಸಂಪತ್ತಿನ ಮುಂದೆ ಬೇರೆ ಸಂಪತ್ತು ಇಲ್ಲ. ದಿನನಿತ್ಯದ ಜೀವನಶೈಲಿ ಚೆನ್ನಾಗಿ ಇಟ್ಟುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಮಾಚೇನಹಳ್ಳಿಯಲ್ಲಿ ಆಯೋಜಿಸಿದ್ದ ವಿಜಯ್ ಟೆಕ್ನೋಕ್ರ್ಯಾಟ್ಸ್ ಸಂಸ್ಥೆಯ 25ನೇ ವರ್ಷದ ಸಂಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಕಾರ್ಮಿಕರಿಗೆ ಆರೋಗ್ಯ ಮಾಹಿತಿ ಶಿಬಿರದಲ್ಲಿ ಮಾತನಾಡಿ, ಸರಿಯಾದ ಆಹಾರ ಪದ್ಧತಿ ಅನುಸರಿಸುವ ಜತೆಯಲ್ಲಿ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯು 25 ವರ್ಷಗಳ ಕೆಲಸ ಮಾಡುವ ಜತೆಯಲ್ಲಿ ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದೆ. ಕಾರ್ಮಿಕರ ನಿರಂತರ ಶ್ರಮದಿಂದ ಸಂಸ್ಥೆಯು ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತದೆ. ಹೆಚ್ಚಿನ ಅಭಿವೃದ್ಧಿ ಹೊಂದುತ್ತದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಕಾರ್ಮಿಕರ ಶ್ರದ್ಧೆ ಹಾಗೂ ಪ್ರಾಮಾಣಿಕ ಕೆಲಸದಿಂದ ಸಂಸ್ಥೆ ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ. ಇತ್ತೀಚೀನ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಹ ಹೆಚ್ಚು ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
Vijay Technnocrats ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ದರ್ಶಿನಿ, ಎ.ಸ್ಪಂದನಾ, ಚಿನ್ಮಯ, ಸ್ವಾತಿ ಹಾಗೂ ಲಾವಣ್ಯ ಅವರಿಗೆ ತಲಾ 25,000 ರೂ. ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಪಾರಿತೋಷಕ ನೀಡಲಾಯಿತು.
25ನೇ ವರ್ಷದ ಸಂಸ್ಥಾಪಕರ ದಿನಾಚರಣೆಯಲ್ಲಿ ನಿರ್ದೇಶಕ ಎಂ.ರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು 600 ಟನ್ ಉತ್ಪಾದಿಸುವ ಸಾಮಾರ್ಥ್ಯ ಹೊಂದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ ಎಂದು ತಿಳಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹಾಗೂ ನಿರ್ದೇಶಕರು ಶುಭಕೋರಿದರು.
ವೇದಿಕೆಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಎಚ್.ಮಹೇಂದ್ರಪ್ಪ, ಎಕ್ಟಿಕ್ಯೂಟಿವ್ ಡೈರೆಕ್ಟರ್ ಡಿ.ಜಿ.ಬೆನಕಪ್ಪ, ನಿರ್ದೇಶಕರಾದ ಎನ್.ರಾಮಚಂದ್ರ, ಡಿ.ಎಸ್.ಚಂದ್ರಶೇಖರ್, ಡಿ.ಬಿ.ಅಶೋಕ್, ಎಸ್.ಜಿ.ಶಾಂತಮ್ಮ, ಎಸ್.ಆರ್.ಹರ್ಷ, ಎಲ್.ಸಿದ್ಧಾರ್ಥ್, ವೈ.ಪಿ.ಸುಧಾ, ಎನ್.ಜಿ.ಸುಮಾ ಮತ್ತಿತರರು ಇದ್ದರು.