DC Shivamogga ರೈತರೇ ತಮ್ಮ ಜಮೀನುಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಸರ್ವೇ ನಂಬರ್‌ವಾರು/ಹಿಸ್ಸಾವಾರು ಬೆಳೆ ವಿವರದ ಮಾಹಿತಿಯನ್ನು ಛಾಯಾಚಿತ್ರ ಸಹಿತ ‘ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ 2024-25’ ರಲ್ಲಿ ಅಪ್‌ಲೋಡ್ ಮಾಡಲು ಅವಕಾಶವನ್ನು ಸರ್ಕಾರ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆ ಸಮೀಕ್ಷೆ 2024-25 ಮುಂಗಾರು ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಸರ್ವೇ ನಂಬರ್, ನಂಬರ್‌ವಾರು ಬೆಳೆಗಳ ನಿಖರ ಮಾಹಿತಿಯ ಮೊಬೈಲ್ ತಂತ್ರಾಂಶ ಬಳಕೆಯಿಂದ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಮೊಬೈಲ್ ತಂತ್ರಾಂಶದ ಜ್ಞಾನವುಳ್ಳ ಸ್ಥಳೀಯ ಯುವಕರು(ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೆ ನಡೆಸುತ್ತಿದ್ದಾರೆ.
ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಊ ಬೃಹತ್ ನೀರಾವರಿ ಇಲಾಖೆಗಳ ಸಿಬ್ಬಂದಿಗಳು ಬೆಳೆ ವಿವರ ದಾಖಲಿಸಲು ರೈತರಿಗೆ ಮಾಹಿತಿ ನೀಡುವರು.
ಬೆಳೆ ವಿವರ ದಾಕಲಿಸದ ರಯತರ ತಾಕುಗಳನ್ನು ನಂತರ ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳಿಂದ ಆ.15 ರಿಂದ ಸೆ.30 ರವರೆಗೆ ಸಮೀಕ್ಷೆ ಮಾಡಿಸಲಾಗುವುದು.
ಹೀಗೆ ಸಂಗ್ರಹಿಸುವ ಬೆಳೆ ವಿವರಗಳು ಪಹಣಿಯಲ್ಲಿ ದಾಖಲಾಗುವುದರ ಜೊತೆಗೆ ಸರ್ಕಾರದ ಪ್ರಮುಖ ಯೋಜನೆಗಳಾದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಪ್ರಕೃತಿ ವಿಕೋಪದಡಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ಪರಿಹಾರ ವಿತರಿಸಲು, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಮತ್ತು ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಮಾಡಲು ಬೆಳೆ ಸಮೀಕ್ಷೆ ವಿವರಗಳನ್ನು ಬಳಸಲಾಗುವುದು.
DC Shivamogga ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಬೆಳೆ ಸಮೀಕ್ಷೆಯ ಮೇಲ್ವಿಚಾರಕರಾಗಿ ರೈತರು ಅಥವಾ ಖಾಸಗಿ ನಿವಾಸಿಗಳು ದಾಖಲಿಸಿದ ಬೆಳೆ ವಿವರಗಳನ್ನು ಪರಿಶೀಲಿಸಿ ದೃಢೀಕರಿಸುವರು. ಬೆಳೆ ಸಮೀಕ್ಷೆಯು ಕೃಷಿ ಇಲಾಖೆಯ ಮುಖಾಂತರ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಜರುಗುವುದು ಎಂದು ತಿಳಿಸಿದರು.
ಆಕ್ಷೇಪಣೆ ಸಲ್ಲಿಸಬಹುದು : ಬೆಳೆ ಸಮೀಕ್ಷೆ ಕುರಿತು ಆಕ್ಷೇಪಣೆಗಳು ಇದ್ದರೆ ರೈತರು ‘beledarshak’ ಆ್ಯಪ್ ಮೂಲಕ ಅಥವಾ ಖುದ್ದಾಗಿ ಕೃಷಿ, ತೋಟಗಾರಿಕೆ ಅಥವಾ ತಾಲ್ಲೂಕು ತಹಶೀಲ್ದಾರ್ ಇವರ ಕಚೇರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದು. ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ.
ಮರುಸಮೀಕ್ಷೆ ಆಪ್ ಕೂಡ ಬಿಡುಗಡೆ ಆಗಲಿದ್ದು ಸೂಪರ್‌ವೈಸರ್ ತಿರಸ್ಕರಿಸಿದ ಬೆಳೆ ವಿವರಗಳನ್ನು PRs ಆ್ಯಪ್ ನಲ್ಲಿ ತ್ವರಿತವಾಗಿ ಮರುಸಮೀಕ್ಷೆ ನಡೆಸಲಾಗುವುದು. ಬೆಳ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಗಾಗಿ ರೈತರು ಸಹಾಯವಾಣಿ ಸಂಖ್ಯೆ 18004253553 ಗೆ ಕರೆ ಮಾಡಬಹುದು ಅಥವಾ ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ಇತರೆ ಅಧಿಕಾರಿಗಳು ಹಾಜರಿದ್ದರು.