DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ವಿರುದ್ದ ಹೆಚ್ಚೆಚ್ಚು ಪ್ರಕರಣಗಳನ್ನು ದಾಖಲಿಸಬೇಕು ಹಾಗೂ ಅರಿವನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರಿಲ್ ಮಾಹೆಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ ೪೩ ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಲ್ಲಿ ೧೯ ಮತ್ತು ಭದ್ರಾವತಿ ೧೨ ಸಂಖ್ಯೆಯಲ್ಲಿದ್ದು ಈ ಎರಡು ತಾಲ್ಲೂಕುಗಳಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳಿವೆ. ಹೆಚ್ಚಿನ ಪ್ರಕರಣ ದಾಖಲಾಗಿರುವೆಡೆ ಸಮುದಾಯದಲ್ಲಿ ಸೇವೆ ಸಲ್ಲಿಸಿರುವ ಮುಖಂಡರ ಮುಂದಾಳತ್ವದಲ್ಲಿ, ಅವರನ್ನೊಳಗೊಂಡು ಆ ಪ್ರದೇಶದಲ್ಲಿ ಪರಿಣಾಮಕಾರಿ ಅರಿವು ಕಾರ್ಯಕ್ರಮ ಕೈಗೊಳ್ಳಬೇಕು ಹಾಗೂ ಬಾಲ್ಯ ವಿವಾಹ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಾಗೂ ೨೦೨೨-೨೩ ನೇ ಸಾಲಿನಲ್ಲಿ ಒಟ್ಟು ೨೪೭ ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದ್ದು, ಇದನ್ನು ತಡೆಯಲು ಸಿಡಿಪಿಓ ಗಳು ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಅರಿವು ಕಾರ್ಯಕ್ರಮ ಮಾಡುವುದರೊಂದಿಗೆ ಪೋಷಕರಿಗೆ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅನಧಿಕೃತ ಸ್ಪಾ ಗಳ ವಿರುದ್ದ ಕ್ರಮ :
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸ್ಪಾ ಗಳ ಸಂಖ್ಯೆ ಹೆಚ್ಚುತ್ತಿದ್ದು ಇಲ್ಲಿ ವೇಶ್ಯಾವಾಟಿಕೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದರು.
DC Shivamogga ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸ್ಪಾಗಳು ಪಾಲಿಕೆ ಮತ್ತು ಎಸ್‌ಪಿ ಕಚೇರಿಯಿಂದ ಪರವಾನಗಿ ಮತ್ತು ಅನುಮತಿ ಪಡೆಯಬೇಕು. ಪರವಾನಗಿ ಪಡೆಯದೇ ಹಾಗೂ ನಿಯಮಗಳನ್ನು ಅನುಸರಿಸದೇ ಅನಧಿಕೃತವಾಗಿ ನಡೆಸುತ್ತಿರುವ ಸ್ಪಾಗಳ ಮೇಲೆ ದಾಳಿ ನಡೆಸಿ, ಮುಚ್ಚಲು ಕ್ರಮ ವಹಿಸಲಾಗುವುದು. ದಾಳಿ ವೇಳೆ ಸಿಡಿಪಿಓ ಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಯವರು ಸಹ ಹಾಜರಾಗಬೇಕು. ಹಾಗೂ ನಿಯಮಿತವಾಗಿ ಸ್ಪಾಗಳ ಚಟುವಟಿಕೆ ಬಗ್ಗೆ ಪರಿಶೀಲಿಸುತ್ತಿರುಬೇಕು ಎಂದು ತಿಳಿಸಿದೆ.