Ayodhya Ram Mandira ಅಯೋಧ್ಯಾ ರಾಮ ಮಂದಿರವು ಬಾಬರಿ ಮಸೀದಿ ಧ್ವಂಸದ ಪ್ರತೀಕವಾಗಿದ್ದು, ಈ ಘಟನೆಯನ್ನು ನೆನಪಿಸುವ ಜೊತೆಯಲ್ಲೇ ವೈಭವೀಕರಿಸುತ್ತದೆ. ಅಷ್ಟೇ ಅಲ್ಲ, ದಕ್ಷಿಣ ಏಷ್ಯಾ ರಾಷ್ಟ್ರವಾದ ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯದ ಪ್ರತೀಕವಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಶೇ. 80 ರಷ್ಟು ಹಿಂದೂ ಜನಸಂಖ್ಯೆ ಇರುವ ಭಾರತದಲ್ಲಿ ಹಿಂದೂಗಳು ಮಾತ್ರವಲ್ಲ, 20 ಕೋಟಿ ಮುಸ್ಲಿಮರೂ ಇದ್ದಾರೆ. ಆದರೆ, ಹಿಂದೂ ರಾಷ್ಟ್ರೀಯವಾದಿಗಳು ಮುಸ್ಲಿಮರ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಅಮೆರಿಕದ ಮುಸ್ಲಿಂ ಸಂಘಟನೆಗಳು ಆರೋಪ ಮಾಡಿವೆ.
ಭಾರತೀಯತೆಯನ್ನು ಬಿಂಬಿಸುವ ಪ್ರದರ್ಶನ ಆಯೋಜಿಸುವ ಬದಲು ಹಿಂದೂ ರಾಷ್ಟ್ರೀಯವಾದಿ ಸಿದ್ದಾಂತ ಪ್ರತಿಬಿಂಬಿಸುವ ಪ್ರತಿಕೃತಿಯ ಪ್ರದರ್ಶನ ಮಾಡಲು ಸಂಘಟಕರು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಮುಸ್ಲಿಂ ಸಂಘಟನೆಗಳು ಈ ಕುರಿತಾಗಿ ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾಥಿ ಹೋಚುಲ್ ಹಾಗೂ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅವರಿಗೆ ಪತ್ರ ಬರೆದಿದ್ದಾರೆ.
ಇದು ಸಾಂಸ್ಕೃತಿಕ ಪ್ರದರ್ಶನವಲ್ಲ, ಮುಸ್ಲಿಂ ವಿರೋಧಿ ದ್ವೇಷದ ಅಸಹ್ಯಕರ ಸಂಭ್ರಮಾಚರಣೆ ಎಂದು ಸಂಘಟನೆ ತನ್ನ ಪತ್ರದಲ್ಲಿ ಕಿಡಿ ಕಾರಿದೆ.
ಕೋಟ್ಯಂತರ ಭಾರತೀಯರ ನಂಬಿಕೆ, ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯಾ ರಾಮ ಮಂದಿರ ಒಂದು ಪವಿತ್ರ ತಾಣ ಎಂದು ಹೇಳಿರುವ ನ್ಯೂಯಾರ್ಕ್ ಇಂಡಿಯಾ ಡೇ ಪರೇಡ್ ಆಯೋಜಕರು ಮುಸ್ಲಿಂ ಸಂಘಟನೆಗಳ ವಾದವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ.
ನಾವು ರಾಮ ಮಂದಿರದ ಪ್ರತಿಕೃತಿಯ ಮೆರವಣಿಗೆ ಮಾಡಿಯೇ ಸಿದ್ದ ಎಂದು ಹೇಳಿದ್ದಾರೆ.
ನಾವು ಯಾವುದೇ ರೀತಿಯ ಹಿಂಸೆ ಹಾಗೂ ದ್ವೇಷವನ್ನು ತಿರಸ್ಕರಿಸುತ್ತೇವೆ ಎಂದು ಹೇಳಿರುವ ಕಾರ್ಯಕ್ರಮ ಆಯೋಜಕರು, ಯಾವುದೇ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡೋದನ್ನೂ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಂಕುರ್ ವೈದ್ಯ ಅವರು ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಾವು ಶಾಂತಿಯುತ ಸಹಬಾಳ್ವೆಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
Ayodhya Ram Mandira ನ್ಯೂಯಾರ್ಕ್‌ನಲ್ಲಿ ನಡೆಸಲಾಗುವ ಇಂಡಿಯಾ ಡೇ ಪರೇಡ್‌ನಲ್ಲಿ ಕೇವಲ ಹಿಂದೂ ಧರ್ಮ ಮಾತ್ರವಲ್ಲ, ಮುಸ್ಲಿಂ, ಸಿಖ್ ಹಾಗೂ ಕ್ರೈಸ್ತ ಧರ್ಮೀಯರನ್ನೂ ಪ್ರತಿನಿಧಿಸುವ ಪ್ರತಿಕೃತಿಗಳ ಪ್ರದರ್ಶನ ಆಗುತ್ತದೆ. ಭಾರತದ ವಿವಿಧತೆ, ಧಾರ್ಮಿಕ ಭಾವೈಕ್ಯತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತೇವೆ ಎಂದು ಒಕ್ಕೂಟ ಸ್ಪಷ್ಟನೆ ನೀಡಿದೆ.
ಇದೇ ವೇಳೆ ವಸುದೇವ ಕುಟುಂಬಕಂ ಎಂಬ ಸಂಸ್ಕೃತದ ಸಾಲನ್ನೂ ನೆನಪಿಸಿರುವ ಒಕ್ಕೂಟದ ಅಧ್ಯಕ್ಷ ವೈದ್ಯ ಅವರು, ಮುಸ್ಲಿಂ ಸಂಘಟನೆಗಳ ವಾದವನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಅಮೆರಿಕಾಗೆ ಪ್ರಧಾನಿ ಮೋದಿ ಭೇಟಿ: ನ್ಯೂಯಾರ್ಕ್‌ನಲ್ಲಿ ‘ಭವಿಷ್ಯದ ಶೃಂಗ ಸಭೆ’ಯಲ್ಲಿ ಭಾಗಿ
ಕಳೆದ 42 ವರ್ಷಗಳಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಇಂಡಿಯಾ ಡೇ ಪರೇಡ್ ನಡೆಯುತ್ತಿದೆ. ಈ ಭಾನುವಾರ 42ನೇ ಪರೇಡ್ ನಡೆಯಲಿದೆ.
ಭಾರತದ ಹೊರಗೆ ಭಾರತೀಯರು ನಡೆಸುವ ಅತಿ ದೊಡ್ಡ ಕಾರ್ಯಕ್ರಮ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸಾವಿರಾರು ಭಾರತೀಯ ವಲಸಿಗರು, ಬಾಲಿವುಡ್ ತಾರೆಯರು, ಭಾರತದ ಕ್ರೀಡಾ ಪಟುಗಳು ನ್ಯೂಯಾರ್ಕ್‌ನ ಮ್ಯಾನ್‌ಹಟ್‌ನಲ್ಲಿ ಇರುವ ಮ್ಯಾಡಿಸನ್ ಅವೆನ್ಯೂನಲ್ಲಿ ಸೇರುತ್ತಾರೆ. ಇಲ್ಲಿ ಮೆರವಣಿಗೆ ಕೂಡಾ ನಡೆಯುತ್ತದೆ. ಭಾರತದಲ್ಲಿ ಬ್ರಿಟಿಷರ ರಾಜ್ಯಭಾರ ಅಂತ್ಯವಾಗಿ 1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸ್ಮರಣಾರ್ಥ ಈ ಕಾರ್ಯಕ್ರಮ ನಡೆಯುತ್ತದೆ.