CM Siddharamaih ನಮ್ಮ ರಾಜ್ಯದ ಸರ್ವರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿ ಮಾದರಿ ಇಂದು “ಕರ್ನಾಟಕ ಮಾದರಿ’ ಎಂದು ದೇಶಪ್ರಸಿದ್ಧವಾಗಿದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತಿದೆ.
ನಮ್ಮ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ.
ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಕೌಶಾಲ್ಯಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಉದ್ಯೋಗ ಸೃಷ್ಟಿ, ಜನಸ್ನೇಹಿ ಆಡಳಿತ ನಮ್ಮ ಕನಸು ಮಾತ್ರವಲ್ಲ; ಇದೇ ಗುರಿಯಾಗಿದೆ. ಈ ಗುರಿ ಸಾಧನೆಯತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಿದೆ.
ಸಾರ್ವತ್ರಿಕ ಕನಿಷ್ಠ ಆದಾಯ (Universal Basic Income) ಪರಿಕಲ್ಪನೆಯಲ್ಲಿ, ಎಲ್ಲರಿಗೂ ಬದುಕಲು ಬೇಕಾದಷ್ಟು ಆದಾಯ ಸಿಗಬೇಕು ಎಂಬ ಕಾರಣದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸಿರುವ ಜನತೆಗೆ ಇವು ಆರ್ಥಿಕ ಶಕ್ತಿಯನ್ನು ನೀಡುತ್ತಿವೆ. ಅದರಲ್ಲೂ ನೇರವಾಗಿ ಹಣಕಾಸಿನ ನೆರವು ಒದಗಿಸುವ ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳು ಸಾರ್ವತ್ರಿಕ ಕನಿಷ್ಠ ಆದಾಯ ಮಾದರಿಯ ಕಲ್ಯಾಣ ಯೋಜನೆಗಳಾಗಿವೆ.
ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಲಿಂಗ ಸಮಾನತೆಯತ್ತ ದೃಢ ಹೆಜ್ಜೆಯನ್ನು ಇರಿಸಿದೆ. ದುಡಿಮೆ ಮಾಡುತ್ತಿರುವ ಮಹಿಳೆಯರಿಗೂ ಅವರ ಖರ್ಚಿನ ದೊಡ್ಡ ಮೊತ್ತವನ್ನು ಉಳಿಸಿ, ಅವರ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ.
CM Siddharamaih ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ ನಾವು 36 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಈ ವರ್ಷ ಈ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದ್ದೇವೆ. ಕರ್ನಾಟಕದ ಈ ಯೋಜನೆ ದೇಶಕ್ಕೆ ಮಾದರಿ ಎಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದರು.
ಬೆಂಗಳೂರಿನ ಮಣೆಕ್ ಷಾ ಮೈದಾನದಲ್ಲಿ ನಡೆದ 78 ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮುಖ್ಯಮಂತ್ರಿಗಳು ಮಾತನಾಡಿದರು.