Department of College Education ವಿದ್ಯಾರ್ಥಿಗಳು ಕೌಶಲ್ಯಗಳ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಹೇಳಿದರು.
ಹೊಳೆಹೊನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಮನ್ವಯ ಟ್ರಸ್ಟ್, ವತಿಯಿಂದ ಐಕ್ಯೂಎಸಿ ಉದ್ಯೋಗ ಮತ್ತು ಮಾಹಿತಿ ಕೋಶ, ಕಾಲೇಜು ಶಿಕ್ಷಣ ಇಲಾಖೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ “ಬದುಕಿನ ಅವಕಾಶಗಳು-ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ” ಉದ್ಘಾಟಿಸಿ ಮಾತನಾಡಿದರು.
ಭಾರತವು ವಿಶ್ವಗುರು ಆಗುವ ದಿಸೆಯಲ್ಲಿ ಮುನ್ನಡೆಯುತ್ತಿದ್ದು, ಕೌಶಲ್ಯಯುತ ಯುವ ಸಮೂಹದಿಂದ ಸದೃಢ ಹಾಗೂ ಬಲಿಷ್ಠ ದೇಶದ ನಿರ್ಮಾಣ ಸಾಧ್ಯ. ಆದ್ದರಿಂದ ಯುವಜನತೆ ಶಿಕ್ಷಣದ ಜತೆಯಲ್ಲಿ ಕೌಶಲ್ಯ ಕಲಿಕೆಗೂ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕೇವಲ ಸರ್ಕಾರಿ ಉದ್ಯೋಗಗಳ ಬಗ್ಗೆ ಆಲೋಚನೆ ನಡೆಸದೇ ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ನಡೆಸಬೇಕು. ಸ್ವಯಂ ಉದ್ಯೋಗವು ಸಹ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಪ್ರಗತಿ ಹೊಂದಲು ಸಾಧ್ಯವಿದೆ ಎನ್ನುವುದನ್ನು ಯುವಜನತೆ ಅರಿತುಕೊಳ್ಳಬೇಕು. ಕೃಷಿ ಕ್ಷೇತ್ರದಲ್ಲೂ ಯುವಜನರು ಹೆಚ್ಚು ಸಕ್ರಿಯರಾಗಬೇಕು ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಯುವಜನರು ಸಮಯದ ಮಹತ್ವವನ್ನು ಅರಿತುಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಪದವಿ ಹಂತದಲ್ಲಿಯೇ ಗುರಿ ನಿಗಧಿಪಡಿಸಿಕೊಂಡು ಹಂತ ಹಂತವಾಗಿ ಪ್ರಯತ್ನ ಮಾಡಬೇಕು. ಗುರುವಿನ ಮಾರ್ಗದರ್ಶನದಲ್ಲಿ ಸರಿಯಾದ ದಾರಿಯಲ್ಲಿ ಮುನ್ನಡೆದರೆ ಬದುಕಿನಲ್ಲಿ ಯಶಸ್ಸು ನಿಶ್ಚಿತ ಎಂದು ಹೇಳಿದರು.
ಸಮನ್ವಯ ಟ್ರಸ್ಟ್ ನಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ ಹಾಗೂ ಸ್ವಾವಲಂಬಿ ಬದುಕಿನ ಸೂತ್ರಗಳು ಆಶಯ ಇಟ್ಟುಕೊಂಡು ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
Department of College Education ಹೊಳೆಹೊನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಆರ್.ಪ್ರತಿಭಾ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿಕೆಯ ಮಹತ್ವ ತಿಳಿಸುವುದು ಅತ್ಯಂತ ಅವಶ್ಯಕ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೌಶಲ್ಯಯುತರಾಗುವುದರಿಂದ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಲು ಸಾಧ್ಯವಿದೆ. ಸಮನ್ವಯ ಟ್ರಸ್ಟ್ ಕೌಶಲ್ಯ ತರಬೇತಿಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಾಗಾರಕ್ಕೆ ಶಿವಮೊಗ್ಗದ ಕೆ.ಎ.ದಯಾನಂದ್ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಚಿತ ವಾಚನಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದವು. ಗ್ರಂಥಪಾಲಕ ನಾಗರಾಜ ನಾಯ್ಕ್, ಐಕ್ಯೂಎಸಿ ಸಂಚಾಲಕಿ ಡಾ. ಪಿ.ಭಾರತಿದೇವಿ, ಉದ್ಯೋಗ ಮಾಹಿತಿ ಕೋಶ ಸಂಚಾಲಕ ಡಾ. ಎಸ್.ರಾಜುನಾಯ್ಕ್, ಸಮನ್ವಯ ಟ್ರಸ್ಟ್ ಸ್ವಯಂ ಸೇವಕ ಸಂತೋಷ್ ಎನ್.ಶೇಟ್ ಉಪಸ್ಥಿತರಿದ್ದರು.
ಎಸ್‌ಬಿಐ ಹಿರಿಯ ಅಧಿಕಾರಿ ಪುನೀತ್ ಕುಮಾರ್, ರಾಷ್ಟ್ರಪ್ರಶಸ್ತಿ ವಿಜೇತೆ ಸೌಮ್ಯ ಗುರುರಾಜ್, ಕೃಷಿಕ ದುರ್ಗಪ್ಪ ಅಂಗಡಿ, ಗ್ಯಾಲಗರ್ ಎಚ್‌ಆರ್ ಅಧಿಕಾರಿ ಅವಿನಾಶ್ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು