land mafia ಭೂ ಮಾಫಿಯಾ ಪರವಾಗಿ ಸುಳ್ಳು ವರದಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಕನ್ನಡ ಪಡೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಪೂಜಾರಿ ಆಗ್ರಹಿಸಿದರು.
ಪ್ರೆಸ್ ಟ್ರಸ್ಟಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲೂಕು ತಹಶೀಲ್ದಾರ್ ರಶ್ಮಿ ಹಾಗೂ ರಿಪ್ಪನ್‌ಪೇಟೆ ಗ್ರಾ.ಪಂ. ಸದಸ್ಯ ಆರ್.ವಿ. ನಿರೂಪ ಕುಮಾರ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಭೂ ಮಾಪೀಯದವರ ಪರವಾಗಿ ಸುಳ್ಳು ವರದಿ ನೀಡುತ್ತಿದ್ದು, ಹಿರಿಯ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿ ಗವಟೂರು ಗ್ರಾಮದ ಸರ್ವೆ ನಂ.೪೫೯/೧ ಮತ್ತು ೪೨೬ರಲ್ಲಿ ಪಿಎನ್‌ಆರ್ ಗ್ಲೋಬಲ್ ಡೆವಲಪರ್ ಎಂಬ ಸಂಸ್ಥೆಯವರು ಬಡಾವಣೆ ನಿರ್ಮಿಸಿದ್ದಾರೆ. ಯಾವುದೇ ವಸತಿ ಬಡಾವಣೆ ಮಾಡಲು ೩೦ ಅಡಿ ಸಂಪರ್ಕ ರಸ್ತೆ ಕಡ್ಡಾಯವಾಗಿರುತ್ತದೆ. ಆದರೆ ಇಲ್ಲಿ ರಸ್ತೆಯೇ ಇರುವುದಿಲ್ಲ. ಆದರೂ ಕೂಡ ಡೆವಲಪರ್ ಮಾಲೀಕನು ಆಗಿದ್ದ, ಆರ್.ವಿ. ನಿರೂಪಕುಮಾರ್ ಎಂಬಾತ ಗ್ರಾಮಪಂಚಾಯಿತಿ ಸದಸ್ಯ ರಸ್ತೆಯಿದೆ ಎಂದು ರಿಪ್ಪನ್ ಪೇಟೆ ಗ್ರಾ.ಪಂ. ಅಭಿವೃದ್ಧಿ ಅಧಿ ಕಾರಿಯಿಂದ ಸುಳ್ಳು ನಿರಾಪೇಕ್ಷಣ ಪತ್ರ ಪಡೆದು ಭೂ ಪರಿವರ್ತನೆ ಮಾಡಿಕೊಂಡಿದ್ದಾನೆ ಎಂದು ದೂರಿದರು.
Land Mafia ರಸ್ತೆ ಇರುವಿಕೆಗೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕಿನಲ್ಲಿ ಕೇಳಿದರೆ, ಒಂದೊಂದು ರೀತಿ ಉತ್ತರ ಕೊಡುತ್ತಾರೆ. ರಸ್ತೆ ಇರುವುದು ಗೊತ್ತಿಲ್ಲ ಎನ್ನುತ್ತಾರೆ. ಗ್ರಾ.ಪಂ.ನಲ್ಲಿ ದಾಖಲೆ ಇಲ್ಲ ಎನ್ನುತ್ತಾರೆ. ಮತ್ತೆ ಇವರೇ ರಸ್ತೆ ನಿರ್ಮಿಸುತ್ತಾರೆ. ಆದರೆ ನಿಜವಾಗಿಯೂ ಅಲ್ಲಿ ರಸ್ತೆ ಇರುವುದಿಲ್ಲ. ಉಪಗ್ರಹ ಆಧಾರಿತ ಛಾಯಾಚಿತ್ರ ಪಡೆದರೆ ಸತ್ಯ ಗೊತ್ತಾಗುತ್ತದೆ. ಭೂಮಾಪೀಯಾದವರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ವಹಿವಾಟು ರಸ್ತೆ ಎಂಬ ಹೊಸ ಶಬ್ದ ಉಲ್ಲೇಖಿಸಿ ವರದಿ ಮಾಡುತ್ತಾರೆ ಎಂದು ದೂರಿದರು.
ಹೀಗೆ ಭೂ ಮಾಫಿಯ ಪರವಾಗಿ ಸುಳ್ಳು ವರದಿ ನೀಡಿರುವ ತಹಶೀಲ್ದಾರ್, ಗ್ರಾ.ಪಂ. ಸದಸ್ಯ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮುಂತಾದವರ ಮೇಲೆ ತನಿಖೆ ನಡೆಸಿ ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನೋಹರ್, ಶೃತಿ ಶೇಟ್, ಅಶ್ವಿನಿ ಗೌಡ, ದಿವ್ಯಾ ಉಪಸ್ಥಿತರಿದ್ದರು.