Rain In Hosanagara ಹೊಸನಗರದಲ್ಲಿ ಸುರಿದ ಭಾರೀ ಮಳೆಗೆ ಇಡೀ ಮನೆ ಕುಸಿದಿದ್ದು, ಅದೃಷ್ಟವಶಾತ್ ಆ ಮನೆಯ ನಿವಾಸಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಳೂರು ಗ್ರಾಪಂ ವ್ಯಾಪ್ತಿಯ ವಡಗೆರೆ ಶಾಲೆ ಸಮೀಪ ಕೆಂದಾಳದಿಂಬದಲ್ಲಿ ನಡೆದಿದೆ.
ರಾತ್ರಿ ಘಟನೆ ಈ ಘಟನೆ ನಡೆದಿದೆ. ಅಮರ್ ಸಿಂಗ್ ಬಿನ್ ಬಿಷ್ಣುಸಿಂಗ್ ರೇಖಾ ದಂಪತಿಗಳಿಗೆ ಸೇರಿದ ಮನೆಯಾಗಿದ್ದು, ರಾತ್ರಿ ಅಲ್ಲಿ ಉಳಿಯದೇ ಸಂಬಂಧಿಕರ ಮನೆಗೆ ತೆರಳಿದ್ದ ಕಾರಣ ಅನಾಹುತದಿಂದ ಪಾರಾಗಿದ್ದು ಬದುಕಿತು ಬಡಜೀವಗಳು ಎಂಬಂತಾಗಿದೆ.
ಇಡೀ ಮನೆ ಕುಸಿತಕ್ಕೆ ಒಳಗಾಗಿದ್ದು ಪಿಡಿಓ ಭರತ್, ಗ್ರಾಮಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ :
ಮಾಸ್ತಿಕಟ್ಟೆಯಿಂದ ಹುಲಿಕಲ್ ಮಾರ್ಗದ ಮಾವಿನಗದ್ದೆ (ಕಾಕೋಡು ಕ್ರಾಸ್) ರಸ್ತೆ ಪಕ್ಕದ ಧರೆ ಕುಸಿತ ಮತ್ತು ಹುಲಿಕಲ್ ಘಾಟಿಯ ಗುಡ್ಡ ಕುಸಿತ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಿಇ ಜಗದೀಶ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.
ಮುಂಜಾಗೃತ ಕ್ರಮಗಳ ಅಳವಡಿಕೆ ಮತ್ತು ಮಳೆಗಾಲದ ನಂತರ ಕಾಮಗಾರಿ ನಡೆಸಲು ಗುತ್ತಿಗೆದಾರ ಸಿ.ವಿ.ಚಂದ್ರಶೇಖರ್, ಪ್ರದೀಪ್‌ಗೆ ಸೂಚಿಸಿದರು.
ಇಇ ಬಿ.ಎಸ್.ನಾಗೇಶ್, ಎಇಇ ಸಂತೋಷ್ ನಾಯ್ಕ್, ಎಇ ಕೊಟ್ರೇಶ್, ವಿಶ್ವಾಸ್ ಇದ್ದರು.
ಹುಲಿಕಲ್ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಿಇ ಜಗದೀಶ ನಾಯ್ಕ್ ಭೇಟಿ ನೀಡಿದರು.
ಮರ ಬಿದ್ದು ಸಂಚಾರ ಸ್ಥಗಿತ:
ಮಾಸ್ತಿಕಟ್ಟೆ – ಕುಂದಾಪುರ ಮಾರ್ಗದ ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಬಿದ್ದು ೪ ಗಂಟೆ ಸಂಚಾರ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
ಈ ಭಾಗದಲ್ಲಿ ರಾತ್ರಿ ಭಾರೀ ಬಿರುಗಾಳಿ ಮಳೆ ಸುರಿದಿದ್ದು ಗಾಳಿ ರಭಸಕ್ಕೆ ಮರ ಧರಾಶಾಹಿಯಾಗಿದೆ.
Rain In Hosanagara ಶಿವಮೊಗ್ಗ ಉಡುಪಿ ನಡುವಿನ ಪ್ರಮುಖ ಮಾರ್ಗ ಇದಾಗಿದೆ. ಬೆಳಗ್ಗಿನ ಜಾವ ಆದ ಕಾರಣ ವಾಹನ ದಟ್ಟಣೆ ಅಷ್ಟಾಗಿರಲಿಲ್ಲ. ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ ೩ ಗಂಟೆಗೆ ಸ್ಥಗಿತಗೊಂಡಿದ್ದ ಸಂಚಾರ ೭ ಗಂಟೆಗೆ ಮುಕ್ತವಾಯಿತು.
ಉಪವಲಯ ಅರಣ್ಯಾಧಿಕಾರಿ ಅಮೃತ್ ಮತ್ತು ಸಿಬ್ಬಂದಿವರ್ಗ, ಶಾಸಕರ ಆಪ್ತ ಸಹಾಯಕ ರಾಜೇಶ ಹಿರಿಮನೆ, ದೇವು ಕಂದ್ಲಕೊಪ್ಪ, ಕೆ.ಕೆ.ರಾಮಣ್ಣ, ಯೋಗೇಂದ್ರ ಪಡುಕೋಣೆ, ದೀಕ್ಷಿತ್ ಮುಂಡಳ್ಳಿ ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.