Shimoga Weather Forecast ಶಿವಮೊಗ್ಗ ನಗರದಲ್ಲಿ ಸೋಮವಾರ ರಾತ್ರಿಯಿಡಿ ಭಾರೀ ಮಳೆಯಾಯಿತು ಮಂಗಳವಾರ ಬೆಳಿಗ್ಗೆಯಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಮತ್ತೊಂದೆಡೆ, ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮತ್ತೆ ಮೈದುಂಬಿದೆ. ಜೊತೆಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಆಗುಂಬೆ , ತೀರ್ಥಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ ಇದರಿಂದ ತುಂಗಾ ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಹೆಚ್ಚಾದಂತೆ, ಶಿವಮೊಗ್ಗದಲ್ಲಿ ತುಂಗಾ ನದಿಯ ಹರಿವು ಕೂಡ ಹೆಚ್ಚಾಗುತ್ತದೆ. ಮಂಗಳವಾರ ಬೆಳಿಗ್ಗೆ ಅಪಾಯದ ಮಟ್ಟ ಸೂಚಿಸುವ ನಗರದ ಕೋರ್ಪಳಯ್ಯನ ಛತ್ರದ ಬಳಿ ನದಿಯಲ್ಲಿರುವ ಮಂಟಪ ಮುಳುಗಿತ್ತು. ಮಂಟಪದ ಮೇಲೆ ನೀರು ಹರಿಯುತ್ತಿದ್ದುದು ಕಂಡುಬಂದಿತು.
ಮತ್ತೊಂದೆಡೆ, ತುಂಗೆಯ ಹರಿವು ಹೆಚ್ಚಾಗಿರುವುದರಿಂದ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ ಜಲಾವೃತದ ಭೀತಿ ಎದುರಾಗಿದೆ. ಈಗಾಗಲೇ ಪಾಲಿಕೆ ಆಡಳಿತವು ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆಡಳಿತ ಮಾಡಿಕೊಂಡಿದೆ.
Shimoga Weather Forecast ಮಳೆ ವಿವರ :
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಅಕ್ಷರಶಃ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಣಿಯಲ್ಲಿ 240 ಮಿಲಿ ಮೀಟರ್ (ಮಿ.ಮೀ.), ಯಡೂರು 229 ಮಿ.ಮೀ., ಹುಲಿಕಲ್ಲು 245 ಮಿ.ಮೀ., ಮಾಸ್ತಿಕಟ್ಟೆ 247 ಮಿ.ಮೀ., ಸಾವೇಹಕ್ಲುವಿನಲ್ಲಿ 210 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ 52 ಮಿ.ಮೀ., ಭದ್ರಾವತಿ (26. 40 ಮಿ.ಮೀ., ತೀರ್ಥಹಳ್ಳಿ 120. 90 ಮಿ.ಮೀ., ಸಾಗರ (129. 10 ಮಿ.ಮೀ., ಶಿಕಾರಿಪುರ 57. 90 ಮಿ.ಮೀ., ಸೊರಬ (58. 50 ಮಿ.ಮೀ. ಹಾಗೂ ಹೊಸನಗರದಲ್ಲಿ 133. 60 ಮಿ.ಮೀ. ಮಳೆಯಾಗಿದೆ.