World Day Against Child Labour ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಬರುವಂತೆ ಮಾಡಬೇಕು ಹಾಗೂ ಹೆಚ್ಚಿನ ಬಾಲ ಕಾರ್ಮಿಕ ತಪಾಸಣೆಯನ್ನು ಕೈಗೊಂಡು ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಶಿವಮೊಗ್ಗ ಹಾಲು ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಜೂ.12 ರಂದು ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ-2024’ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಾಗೂ ಕಾಯ್ದೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಬಾಲ ಕಾರ್ಮಿಕ ತಪಾಸಣೆಯನ್ನು ಹೆಚ್ಚೆಚ್ಚು ಕೈಗೊಂಡು ಮಕ್ಕಳು ದುಡಿಯುತ್ತಿರುವುದು ಕಂಡು ಬಂದಲ್ಲಿ, ಸೂಕ್ತ ಕ್ರಮ ಕೈಗೊಂಡು ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕೆಂದು ತಿಳಿಸಿದರು.
ಮಕ್ಕಳು ಶಾಲೆಗೆ ಬಂದಾಗ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ಮಕ್ಕಳು ಶಾಲೆಗೆ ಬಂದು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಾಲೆಗೆ ಬರುವಂತೆ ಮಾಡಬೇಕೆಂದು ತಿಳಿಸಿದರು.
World Day Against Child Labour ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾಡಿ, ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಾದ ಗ್ಯಾರೇಜ್‍ಗಳು, ಕಟ್ಟಡ ಕೆಲಸ, ಭಿಕ್ಷಟಾನೆ ಮತ್ತು ಬೇರೆ ಯಾವುದೇ ಕ್ಷೇತ್ರದಲ್ಲಿ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೂಂಡರೆ ಅಥವಾ ಮಕ್ಕಳು ಕೆಲಸ ಮಾಡುತ್ತಿದ್ದರೆ ಅಂತಹ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಬೇಕು. ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಮಾಹಿತಿ ನೀಡಿ ರಕ್ಷಣೆ ಕಾರ್ಯದಲ್ಲಿ ಕೈಜೋಡಿಸಿರೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಬೆಳಗ್ಗೆ 10 ರಿಂದ ಸಂಜೆ 4.30 ವರೆಗೆ ಮಕ್ಕಳು ಶಾಲೆಯಲ್ಲಿ ಕಲಿಯಬೇಕು. ಕೆಲಸಕ್ಕೆ ಹೊಗಬಾರದು. ಆ ರೀತಿ ಕೆಲಸ ಮಾಡುವ ನಿಮ್ಮ ಸ್ನೇಹಿತರು ಕಂಡು ಬಂದರೆ ಶಾಲಾ ಶಿಕ್ಷಕರಿಗೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಮಕ್ಕಳು ಮೊಬೈಲ್ ಬಳಕೆಯನ್ನು ಮಿತವಾಗಿ ಮಾಡಬೇಕು. ಕೇವಲ ಕಲಿಕೆಯ ವಿಷಯವಾಗಿ ಮಾತ್ರ ಬಳಕೆ ಮಾಡಬೇಕೆಂದು ತಿಳಿ ಹೇಳಿದರು. ಹಾಗೂ ಈ ಮಾಹಿತಿಯನ್ನು ತಂದೆ ತಾಯಿ, ಸುತ್ತಮುತ್ತಲಿನ ಜನರಿಗೆ ತಿಳಿಸಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನ ಅಧಿಕಾರಿ ಗಂಗಾ ಬಾಯಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳು ಮನೆಯಲ್ಲಿ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಬೇಕು. ಹಾಗೂ ಮಕ್ಕಳ ಮತ್ತು ಮಹಿಳೆಯರ ಸಾಗಣೆ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅಂತಹ ಘಟನೆಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಹಾಗೂ 112 ಗೆ ಕರೆ ಮಾಡಿ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕ ಭೀಮೇಶ್ ಪಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಮಡು ಬಾಲಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ 2016 ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ, ಕಾರ್ಮಿಕ ಅಧಿಕಾರಿ ವೇಣುಗೋಪಾಲ್, ದುರ್ಗಿಗುಡಿ ಶಾಲೆ ಮುಖ್ಯೋಪಾಧ್ಯಾಯ ಮೋಹನ್, ದೈಹಿಕ ಶಿಕ್ಷಕ ನಿರಂಜನಮೂರ್ತಿ, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಗೃತಿ ಜಾಥಾಕ್ಕೆ ಚಾಲನೆ : ಬೆಳಿಗ್ಗೆ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಅಂಗವಾಗಿ ನಗರದ ಶಿವಪ್ಪ ಸರ್ಕಲ್‍ನ್ ನಿಂದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆವರೆಗೆ ಏರ್ಪಡಿಸಲಾಗಿದ್ದ ಸ್ತಬ್ದಚಿತ್ರ ವಾಹನ ಹಾಗೂ ಕರಪತ್ರ ಮೂಲಕ ಕಾನೂನು ಅರಿವು ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಚಾಲನೆ ನೀಡಿದರು.