ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಶಾಸಕರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ರಾಜ್‌ಕುಮಾರ್ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಪ್ರಚಾರ ನಡೆಸಿ ಅಪಮಾನ ಮಾಡಿದ್ದಾರೆ ಮಾಜಿ ಶಾಸಕ ಕುಮಾರ ಬಂಗಾರಪ್ಪ ಕಿಡಿಕಾರಿದರು.
ಬಿಜೆಪಿ ಕಾರ್ಯಾಲಯದ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣ ಎನ್ನುವುದು ಒಂದ ಜಾತಿ, ವರ್ಗ ಹಾಗೂ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆದರೆ ಯಶಸ್ಸು ಸಾಧ್ಯವಾಗುತ್ತದೆ. ಆದರೆ ಇಲ್ಲಿನ ಶಾಸಕರು ಜಾತಿ ರಾಜಕಾರಣ ಮಾಡುವ ಮೂಲಕ ಒಂದು ವರ್ಗದ ಮತಗಳನ್ನು ಸೆಳೆಯಲು ಹೋಗಿ ಮುಗ್ಗರಿಸಿದ್ದಾರೆ ಎಂದು ಹೇಳಿದರು.
ಚುನಾವಣಾ ಕಾಲದಲ್ಲಿ ನಡೆದ ತೀಕ್ಷ್ಣವಾದ ಟೀಕೆಗಳು ಏನೇ ಇರಲಿ. ಅವೆಲ್ಲವೂ ಚುನಾವಣಾ ಕಾಲಕ್ಕೆ ಮಾತ್ರ ಸೀಮಿತವಾಗಿರಲಿ. ಈಗಾಗಲೇ ಜನತೆ ತೀರ್ಪು ನೀಡಿದ್ದಾರೆ. ಟೀಕೆಗಳು ಮುಂದಿನ ರಾಜಕೀಯ ನಡೆಯಲ್ಲಿ ಅವಶ್ಯಕತೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್‌ನ 37 ಸಾವಿರ ಮತಗಳ ಅಂತರದ ಗೆಲುವಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಯಗಳಿಸಿಕೊಡುವುದರ ಮೂಲಕ ಮತದಾರ ಪ್ರತ್ಯುತ್ತರ ನೀಡಿದ್ದಾರೆ.
Kumar Bangarappa ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ 18 ಸಾವಿರ ಅಧಿಕ ಮತಗಳು ಸೊರಬದಿಂದ ಚಲಾವಣೆಯಾಗಿರುವುದು ದಾಖಲೆಯಾಗಿದೆ. ಈ ಹಿಂದೆ ಯಾವ ಅಭ್ಯರ್ಥಿ ಕೂಡಾ ಅಷ್ಟೊಂದು ಅಂತರದ ಮತಗಳನ್ನು ಪಡೆದಿಲ್ಲ. ಇದು ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ತಿಳಿಯದ ಮತ್ತು ದುರಹಂಕಾರಿಗೆ ನೀಡಿದ ಉತ್ತರವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡರು.
ಸಧ್ಯದಲ್ಲಿಯೇ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೊರಬ ಮತ್ತು ಆನವಟ್ಟಿಯಲ್ಲಿ ಅಭಿನಂದನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದರು.