Social Democratic Party of India ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಚರಂಡಿ ನೀರು ನುಗ್ಗಿ ಹಾನಿಯಾಗಿರುವ ಬಡಾವಣೆಗಳ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿಐ) ಮಹಾನಗರ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದೆ.
ಆಯುಕ್ತ ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿರುವ ಪಕ್ಷದ ಮುಖಂಡರು, ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅನೇಕ ಬಡಾವಣೆಗಳಲ್ಲಿ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗಿದೆ. ಕೋಟ್ಯಂತರ ಮೌಲ್ಯದ ಮನೆ ಸಾಮಗ್ರಿಗಳು ಮತ್ತು ವಸ್ತುಗಳು ಹಾಳಾಗಿದ್ದು, ಬಹಳಷ್ಟು ವಾಹನಗಳು ಈ ನೀರಿನಲ್ಲಿ ಮುಳುಗಿ ಹಾಳಾಗಿವೆ. ಹಲವು ಮನೆಗಳ ಮನೆ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋಗಿವೆ. ಎಲೆಕ್ಟ್ರಾನಿಕ್ ಸಾಮಗ್ರಿಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಇಂತಹ ಬಹಳಷ್ಟು ಅನಾಹುತಗಳು ನಡೆದಿದ್ದರೂ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಹೇಳಿದರು.
Social Democratic Party of India ಪಾಲಿಕೆಯ ವಾರ್ಡ್ ಇಂಜಿನಿಯರ್ ಮತ್ತು ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಪರಿಸ್ಥಿತಿಗೆ ಶಿವಮೊಗ್ಗದ ಜನತೆ ತುತ್ತಾಗಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಬಡ ಕುಟುಂಬ ವಾಸಿಸುವ ಕಚ್ಚಾ ಮನೆಗಳು ಬೀಳುವ ಸ್ಥಿತಿ ಇದೆ. ವಾರ್ಡ್ ನಂ.೨೭ರ ಆನಂದರಾಮ್ ಬಡಾವಣೆ ಮತ್ತು ಅಣ್ಣಾನಗರ ಮುಖ್ಯ ರಸ್ತೆ, ಲಕ್ಷ್ಮಿ ಕ್ಯಾಂಟೀನ್, ವಾರ್ಡ್ ನಂ.೧೨ ಟ್ಯಾಂಕ್ ಮೊಹಲ್ಲಾ ಮತ್ತು ಬಾಪೂಜಿನಗರ. ವಾರ್ಡ್ ನಂ.೩೩ ನ್ಯೂಮಂಡ್ಲಿ, ಎನ್.ಟಿ ರಸ್ತೆ, ಹಳೆಮಂಡ್ಲಿ, ಸುಲ್ತಾನ್ ಮೊಹಲ್ಲಾ ಮತ್ತು ಇಮಾಮ್ ಬಾಡಾ. ಮೆಹಬೂಬ್ ನಗರ, ವಾರ್ಡ್ ನಂ.೩೪ ವಾದಿ ಹುದಾ ಬಡಾವಣೆ, ವಾರ್ಡ್ ನಂ.೨೮ ಆರ್.ಎಮ್.ಎಲ್ ನಗರ, ವಾರ್ಡ್ ನಂ.೩೨ ಟಿಪ್ಪು ನಗರ ಕೆರೆ ಅಂಗಳ, ವಾರ್ಡ್ ನಂ.೨೫ ಜೆ ಪಿ ನಗರದಲ್ಲಿಅ ನೇಕ ತೊಂದರೆಯಾಗಿದೆ ಎಂದು ಹೇಳಿದರು.
ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿಯಾಗಿದೆ ಆದರೆ, ಮಳೆಗಾಲದಲ್ಲಿ ಇದು ಎಷ್ಟು ಸ್ಮಾರ್ಟ್ ಆಗಿದೆ ಎಂದು ಗೊತ್ತಾಗುತ್ತಿದೆ. ಒಳಚರಂಡಿಯ ಕಳಪೆ ಕಾಮಗಾರಿ, ಸ್ಮಾರ್ಟ್ ಸಿಟಿ ವರ್ಕ್ ಎಂದು ಗುಂಡಿಗಳು ಅಗೆದು ಬಿಟ್ಟಿರುವುದು, ಮಳೆಗಾಲದ ಮುಂಚೆ ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆಗಳ ಸಂಪೂರ್ಣ ಕ್ಲೀನಿಂಗ್, ಚರಂಡಿಗಳ ಸ್ವಚ್ಛ ಕಾರ್ಯ ನಡೆಯದೇ ಇರುವುದು ಇದಕ್ಕೆ ಮುಖ್ಯ ಕಾರಣವಾದರೆ, ಕಳೆದ ೧೦ವರ್ಷಗಳಿಂದ ಜನರ ಪರದಾಟವನ್ನು ನೋಡಿಯೂ ಕೂಡ ಅದಕ್ಕೆ ಸರಿಯಾದ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು ಇದಕ್ಕೆ ನೇರ ಕಾರಣ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎಸ್ ಡಿಪಿಐ ಪ್ರಮುಖರಾದ ಇಸಾಕ್, ಜಿಲಾನಿ ಮೊದಲಾದವರಿದ್ದರು.