Rotaty Shivamogga ಸಮಾಜ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಧಕರಿಗೆ ಸಂಸ್ಥೆಯಿಂದ ಗೌರವಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಮಲೆನಾಡು ಅಧ್ಯಕ್ಷ ಸಿ.ರಾಜು ಹೇಳಿದರು.
ರೋಟರಿ ಕ್ಲಬ್ ಮಲೆನಾಡು ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸನ್ಮಾನ ಗೌರವಗಳು ಜವಾಬ್ದಾರಿ ವೃದ್ಧಿಸುವ ಜತೆಯಲ್ಲಿ ಸಮಾಜದ ನೂರಾರು ಜನರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
ಮಹಾಬಲೇಶ್ವರ ಹೆಗಡೆ ಅವರು ಶಾಲಾ ಶಿಕ್ಷಕರ ಸೇವೆಗೆ ಸದಾ ಸಿದ್ಧರಾಗಿರುತ್ತಾರೆ. ಶಿಕ್ಷಕರ ಸಮಸ್ಯೆಗಳಿಗೆ ಎಲ್ಲ ಹಂತಗಳಲ್ಲೂ ಸ್ಪಂದಿಸುತ್ತಾರೆ. ಸಹಕಾರ ಸಂಸ್ಥೆಯನ್ನು ಸದೃಢವಾಗಿ ಬೆಳೆಸಿ ಮುನ್ನಡೆಯುತ್ತಿದ್ದು, ವಾರ್ಷಿಕವಾಗಿ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. ಸಾವಿರಾರು ಶಿಕ್ಷಕರಿಗೆ ನಿವೇಶನ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಶಿಕ್ಷಕ ಸೌಹಾರ್ದ ಸಹಕಾರಿ ಸಂಘಕ್ಕೆ ತೀರ್ಥಹಳ್ಳಿಯಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಸಂಘದ ಕಚೇರಿ, ಚೌಟ್ರಿ, ಹೈಪರ್ ಮಾರ್ಟ್, ಹೊಟೇಲ್, ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿದೆ. 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಹೇಳಿದರು.
Rotaty Shivamogga ಮಹಾಬಲೇಶ್ವರ ಹೆಗಡೆ ಅವರು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ, ವೈದ್ಯಕೀಯ ಸಹಕಾರ, ಹೀಗೆ ವಿವಿಧ ರೀತಿ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಆರಂಭಿಸುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅವರನ್ನು ಅಭಿನಂದಿಸಲಾಯಿತು. ರೋಟರಿ ಮಂಜುಳಾ ರಾಜು, ಪಿಡಿಜಿ ರವಿ, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.