Lok Sabha Election ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪ್ರಶ್ನಿಸಿ ಪ್ರಜಾತಂತ್ರ ಉಳಿಸಬೇಕೆಂದು ಜನ ಚೈತನ್ಯ ಕರ್ನಾಟಕ ಸಂಘಟನೆಯ ಜಿಲ್ಲಾ ಶಾಖೆ ಕರೆ ನೀಡಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಪದಾಧಿಕಾರಿಗಳು, ಸ್ವಾತಂತ್ರ್ಯ ಬಂದು 77 ವರ್ಷಗಳು ಗತಿಸಿದರೂ ದೇಶದ ಬಡಜನರ, ದಲಿತರ , ಹಿಂದುಳಿದವರಿಗೆ ನ್ಯಾಯ ಸಿಕ್ಕಿಲ್ಲ. ಬಿಜೆಪಿ ಸರಕಾರ ಸುಳ್ಳು ಪ್ರಚಾರ ಮಾಡಿಕೊಂಡು ಬಂದಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತ ಯುವಜನರನ್ನು ಧರ್ಮದ ಬಲೆಯಲ್ಲಿ ಸಿಲುಕಿಸಿ ಮತರಾಜಕಾರಣ ಮಾಡಲಾಗುತ್ತಿದೆ.
ಸಂವಿಧಾನವನ್ನು ಬದಲಾಯಿಸುವ ಮಾತನ್ನು ಆಡುತ್ತಿರುವ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ.
ಕೋಮುವಾದ ಹಿಂದುತ್ವ ವಿಚಾರ ಹೊರತುಪಡಿಸಿದರೆ, ಬಿಜೆಪಿಗಿಂತ ಕಾಂಗ್ರೆಸ್ ಭಿನ್ನವಾಗಿಲ್ಲ. ಮತದಾರರು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಸಮಸ್ಯೆಗಳ ಕುರಿತು ಅಭ್ಯರ್ಥಿಗಳಿಗೆ ಪ್ರಶ್ನೆ ಮಾಡಬೇಕಿದೆ.
Lok Sabha Election ಮಲೆನಾಡಿನಲ್ಲಿ ಅರಣ್ಯ ಒತ್ತುವರಿ ಸಮಸ್ಯೆ ಇತ್ಯರ್ಥವಾಗಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರವಿಲ್ಲ. ಸಾವಿರಾರು ಎಕರೆ ಅರಣ್ಯದಲ್ಲಿ ಅಕೇಶಿಯಾ , ನೀಲಗಿರಿ ಬೆಳೆಸಲು ಲೀಜ್ ಪಡೆದಿದ್ದ ಭೂಮಿಯನ್ನು ವಾಪಸ್ ಕೊಡಬೇಕು.ಭದ್ರಾವತಿಯ ಎರಡೂ ಕಾರ್ಖಾನೆಗಳನ್ನು ಪುನರಾರಂಭಿಸಬೇಕು. ಮಲೆನಾಡಿನಿಂದ ದೂರದ ನಗರಗಳಿಗೆ ನೀರು ಕೊಂಡೊಯ್ಯುವ ಯೋಜನೆ ಕೈ ಬಿಡಬೇಕು. ಅರಣ್ಯವಾಸಿಗಳ ಹಿತ ಕಾಪಾಡಬೇಕು.ನಿರುದ್ಯೋಗ ನಿವಾರಣೆಗೆ ಕೈಗಾರಿಕೆ ತರಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ಪಡೆದು ಮತದಾನ ಮಾಡಬೇಕೆಂದು ಜನ ಚೈತನ್ಯ ಕರ್ನಾಟಕದ ಪದಾಧಿಕಾರಿಗಳಾದ ಪ್ರಕಾಶ್, ದೇಶಾದ್ರಿ ಹೊಸ್ಮನೆ,ಭಾಸ್ಕರ್ ಟಿ.ಪಿ. ಶೇಖರನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.