ಹೆಣ್ಣುಮಕ್ಕಳ ವಿವಾಹದ ವಯಸ್ಸು ಕನಿಷ್ಠ ಈಗಿನ 18 ವರ್ಷದಿಂದ 21 ವರ್ಷಕ್ಕೆ ಏರಿಸುವ ಬಗ್ಗೆ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನು ನೀಡಿದೆ.
ವಿವಾಹದ ಕನಿಷ್ಠ ವಯಸ್ಸು 43 ವರ್ಷದ ನಂತರ ಬದಲಾವಣೆಯಾಗಿದೆ. ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ 1929 ಕ್ಕೆ 1978 ರಲ್ಲಿ ತಿದ್ದುಪಡಿ ತರಲಾಗಿದೆ. ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 15ರಿಂದ 18 ಕ್ಕೆ ಏರಿಸಲಾಗಿತ್ತು. ಬಾಲ್ಯ ವಿವಾಹ ತಡೆ ಕಾಯ್ದೆಯನ್ನು 2006 ರಲ್ಲಿ ತರಲಾಗಿತ್ತು. ಮೊದಲಿಗೆ ಬಾಲ್ಯ ವಿವಾಹ ತಡೆ ಕಾಯ್ದೆ 2006ಕ್ಕೆ ತಿದ್ದುಪಡಿ ಮಾಡಲಾಗಿತ್ತು. ಬಳಿಕ, ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ 1955 ಇಂತಹ ವೈಯಕ್ತಿಕ ಕಾನೂನು ಗಳಿಗೂ ತಿದ್ದುಪಡಿ ತರಬೇಕಾಗುತ್ತದೆ. ಈ ಎಲ್ಲಾ ಕಾಯ್ದೆಗಳಲ್ಲಿ ಹೆಣ್ಣಿನ ವಿವಾಹದ ಕನಿಷ್ಠ ವಯಸ್ಸು 18 ಹಾಗೂ ಗಂಡಿನ ಮದುವೆಯ ವಯಸ್ಸು ಕನಿಷ್ಠ 21 ಎಂದು ಪರಿಗಣಿಸಲಾಗಿತ್ತು.
ಸಮತಾ ಪಾರ್ಟಿಯ ಮುಖ್ಯಸ್ಥೆಯಾಗಿದ್ದ, ಜಯಾ ಜೇಟ್ಲಿ ಅವರ ನೇತೃತ್ವದಲ್ಲಿ ನೀತಿ ಆಯೋಗವು 2020 ರ ಜೂನ್ ತಿಂಗಳಿನಲ್ಲಿ ಕಾರ್ಯಪಡೆಯೊಂದನ್ನು ರಚಿಸಿತ್ತು.
ತಾಯಿಯಾಗುವ ವಯಸ್ಸು, ಹೆರಿಗೆ ಸಂದರ್ಭದಲ್ಲಿ ತಾಯಿಯಂದಿರ ಸಾವಿನ ಪ್ರಮಾಣ ತಗ್ಗಿಸುವುದು, ಮಹಿಳೆಯರು ಹಾಗೂ ಮಕ್ಕಳ ಪೌಷ್ಠಿಕತೆ ಹೆಚ್ಚಳದಂತಹ ವಿಚಾರಗಳ ಬಗ್ಗೆ ಶಿಫಾರಸುಗಳನ್ನು ಸಲ್ಲಿಸುವುದು ಈ ಕಾರ್ಯಪಡೆಯ ಉದ್ದೇಶವಾಗಿತ್ತು.
ಕಾರ್ಯಪಡೆಯು ಯುವಜನರು ಮತ್ತು ಸಂಘಟನೆಗಳ ಜೊತೆಗೆ ಸಮಾಲೋಚನೆ ನಡೆಸಿತ್ತು. ದೇಶದ ಎಲ್ಲೆಡೆ 16 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರಶ್ನಾವಳಿ ಕೊಟ್ಟು ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಾಯಿತು. ವಿವಾಹದ ಕನಿಷ್ಠ ವಯಸ್ಸು 22 ಅಥವಾ 23 ವರ್ಷಕ್ಕೆ ಹೆಚ್ಚಿಸಬೇಕು ಎಂದು ಹೆಚ್ಚಿನವರು ಹೇಳಿದ್ದಾರೆ. ಆದರೆ, ಈಗ ವಿವಾಹದ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಶಿಫಾರಸು ಮಾಡಿದ್ದೇವೆ ಎಂದು ಜಯಾ ಜೇಟ್ಲಿ ಅವರು ತಿಳಿಸಿದ್ದಾರೆ.
ತಾಯಂದಿರು ಹಾಗೂ ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳ ಆರೋಗ್ಯ ತಪಾಸಣೆಯನ್ನು ಶಾಲೆಯಲ್ಲಿ ಪ್ರತಿ ತಿಂಗಳು ನಡೆಸುವ ವ್ಯವಸ್ಥೆ ಮಾಡಬೇಕು. ಈ ಅಂಶಗಳು ಶಿಫಾರಸಿನಲ್ಲಿದೆ. ಶಾಲಾ ಪಠ್ಯ ಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನೂ ಸೇರಿಸಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ.
ಶೇ.50ರಿಂದ 60 ರಷ್ಟು ಹೆಣ್ಣು ಮಕ್ಕಳಿಗೆ 21 ವರ್ಷಕ್ಕೆ ಮೊದಲೇ ವಿವಾಹವಾಗುತ್ತಿದೆ. ಕಾಯ್ದೆಗೆ ತಿದ್ದುಪಡಿ ಆದರೆ, ಇಂತಹ ಎಲ್ಲಾ ವಿವಾಹವು ಅಪರಾಧ ಎಂದು ಪರಿಗಣಿತವಾಗುತ್ತದೆ.
ಕಾಯ್ದೆಯಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಮೇಲ್ಮಧ್ಯಮ ಹಾಗೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ವಿವಾಹ 21 ವರ್ಷಗಳಿಗಿಂತಲೂ ಬಹಳ ತಡವಾಗಿ ಆಗುತ್ತದೆ. ಕಾಯ್ದೆಯ ನಿರ್ಬಂಧ ಇಲ್ಲದೆಯೇ ಇದು ಸಾಧ್ಯವಾಗಿದೆ ಎಂದು ಆಕ್ಸ್ ಫ್ಯಾಮ್ ಇಂಡಿಯಾದ ಲಿಂಗತ್ವ ನ್ಯಾಯ ಘಟಕದ ಪ್ರಧಾನ ತಜ್ಞೆ ಅಮಿತಾ ಪಿತ್ರೆ ಅವರು ಹೇಳಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.