K.S.Eshwarappa ಪಕ್ಷದಲ್ಲಿ ಎಲ್ಲ ರೀತಿಯ ಸ್ಥಾನಮಾನವನ್ನು ನಾನು ನೋಡಿದ್ದೇನೆ. ನಾನು ಎಂಪಿ ಆಗಬೇಕು ಎಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಅಪ್ಪ-ಮಕ್ಕಳ ಕೈಯಿಂದ ಪಕ್ಷವನ್ನು ಮುಕ್ತಗೊಳಿಸುವುದಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಇದನ್ನೇ ಅಮಿತ್ ಶಾಗೆ ತಿಳಿಸಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಫೋನ್ ಮಾಡಿದಾಗಲೂ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ.ನಾನು ಸ್ಪರ್ಧೆ ಮಾಡುತ್ತಿರುವ ಉದ್ದೇಶದ ರಾಜ್ಯದಲ್ಲಿ ಬಿಜೆಪಿ ಪಕ್ಷ ಶುದ್ದಿಕರಣ ಆಗಬೇಕು. ಬಿಜೆಪಿ ಪಕ್ಷ ಅಪ್ಪ-ಮಕ್ಕಳ ಕೈಯಿಂದ ಪಕ್ಷ ಮುಕ್ತವಾಗಬೇಕು. ಎಲ್ಲ ಹಿಂದುತ್ವವಾದಿಗಳಿಗೆ ಅನ್ಯಾಯವಾಗಿದೆ. ನೊಂದ ಕಾರ್ಯಕರ್ತರಿಗೆ ನ್ಯಾಯಸಿಗಬೇಕು ಎಂದು ತಿಳಿಸಿದ್ದೇನೆ. ಅವರು ದೆಹಲಿಗೆ ಬರಲು ಹೇಳಿದ್ದಾರೆ.
ನಾನು ಬುಧವಾರ ರಾತ್ರಿ 7.20ಕ್ಕೆ ದೆಹಲಿ ತಲುಪಿ, ಅಮಿತ್ ಶಾ ಮನೆಗೆ ತೆರಳಿಲಿದ್ದೇನೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಜೊತೆಗಿಲ್ಲ, ಸಂಘಟನೆ ಜೊತೆಗಿದ್ದಾರೆ ಎಂಬ ಕಾರಣಕ್ಕೆ ಸಿ.ಟಿ.ರವಿ, ಪ್ರತಾಪ್‌ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸದಾನಂದ ಗೌಡ, ಅನಂತ್‌ಕುಮಾರ್ ಹೆಗಡೆ ಅವರಿಗೆ ಅನ್ಯಾಯವಾಗಿದೆ. ಹಿಂದುತ್ವವಾದಿಗಳಿಗೆ ಯಾಕೆ ಪಕ್ಕಕ್ಕೆ ಸರಿಸಿದ್ದಾರೋ ನನಗೂ ಗೊತ್ತಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವುದೇ ತಪ್ಪಾ? ಇದನೆಲ್ಲ ಅಮಿತ್ ಶಾ ಅವರ ಗಮನಕ್ಕೆ ತರುತ್ತೇನೆ ಎಂದರು.
ಅಮಿತ್ ಶಾ ಅವರು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾನೂ ಕೂಡ ನನ್ನ ಸ್ಪರ್ಧೆ ಯಾವ ಉದ್ದೇಶಕ್ಕಾಗಿ ಎಂಬುದನ್ನು ತಿಳಿಸಿ ಅವರನ್ನು ಒಪ್ಪಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸ್ಪರ್ಧೆಯ ಉದ್ದೇಶ ಸರಿಯಾಗಿದೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ, ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಬಿಜೆಪಿಯವರು ಅಷ್ಟೇ ಅಲ್ಲ ಕಾಂಗ್ರೆಸ್, ಜೆಡಿಎಸ್‌ನವರೂ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಬೇರೆ ಕಡೆ ಬಂಡಾಯ ಅಭ್ಯರ್ಥಿಗಳ ಮನವೊಲಿಸುವುದಕ್ಕೂ ಶಿವಮೊಗ್ಗಕ್ಕೂ ವ್ಯತ್ಯಾಸ ಇದೆ. ನನ್ನ ಉದ್ದೇಶವೇ ಬೇರೆ, ಅವರೆಲ್ಲ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ನಾನು ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲೇ ಬೇಕು ಎಂದು ಉದ್ದೇಶ ಇಟ್ಟುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ. ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ, ಮೋದಿಗೆ ಹೋಗಿ ಕೈ ಎತ್ತುತ್ತೇನೆ. ಈ ನಿಟ್ಟಿನಲ್ಲೇ ಎಲ್ಲ ಕಡೆಯಿಂದಲೂ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.
K.S.Eshwarappa ಲೋಕಸಭಾ ಚುನಾವಣೆಯನ್ನು ಮೋದಿಗಾಗಿಯೇ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಎಲ್ಲ ಸಮಾಜದವರು ಬೆಂಬಲ ಕೊಡುತ್ತಿದ್ದಾರೆ. ಎಲ್ಲ ತಾಲೂಕಿನಲ್ಲಿ ನಿರೀಕ್ಷೆಗೆ ಮೀರಿ ಹಿಂದುಳಿದ, ದಲಿತ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಕುರುಬ ಎಲ್ಲ ಸಮಾಜದವರು ನನ್ನ ಜೊತೆ ಇದ್ದಾರೆ. ಆರಂಭದಿಂದ ಹಿಡಿದು ಈವರೆಗೆ ನಡೆದ ಎಲ್ಲ ಕಾರ್ಯಕ್ರಮದಲ್ಲಿ ಜನ ಯಾವ ರೀತಿ ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಎಲ್ಲರೂ ನೋಡುತ್ತಿದ್ದಾರೆ. ನೂರಕ್ಕೆ ನೂರು ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ಇದೆ ಎಂದರು.
ನನ್ನ ಸ್ಪರ್ಧೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಮುಖ ಕಾರ್ಯಕರ್ತರಿಗೆ ಸ್ಪಷ್ಟ ಮಾಡಿದ್ದೇನೆ. ಇನ್ನೂ ಕೆಲವರಿಗೆ ಗೊಂದಲ ಇದ್ದರೆ ನಾನು ದೆಹಲಿಗೆ ಹೋಗಿ ಬಂದ ನಂತರ ಅವರಿಗೂ ಸ್ಪಷ್ಟವಾಗುತ್ತದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧೆ ಮಾಡಿದರೆ ರಾಘವೇಂದ್ರ ಸೋಲುತ್ತಾನೆ. ಹೀಗಾಗಿ ಈಶ್ವರಪ್ಪ ಬಳಿ ಮಾತನಾಡಿ ಎಂದು ಅಮಿತ್ ಶಾ ಅವರಿಗೆ ಒತ್ತಡ ಹಾಕಿರಬಹುದು. ಇದು ನನಗೆ ಗೊತ್ತಿಲ್ಲ. ಅವರು ಮನೆಗೆ ಬಾ ಎಂದು ಕರೆದಾಗ ದೊಡ್ಡವರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ. ಇದಕ್ಕಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ. ಅವರೊಂದಿಗೆ ಕೂತು ಚರ್ಚೆ ಮಾಡಿ, ಎಲ್ಲವನ್ನು ತಿಳಿಸುತ್ತೇನೆ. ನನ್ನ ನಿರ್ಧಾರದಿಂದ ಯಾವುದೇ ಕಾರಕ್ಕೂ ಹಿಂದೆ ಸರಿಯಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸುತ್ತೇನೆ ಎಂದರು.